janadhvani

Kannada Online News Paper

ಗಾಂಧೀಜಿಯನ್ನೇ ಬಿಟ್ಟಿಲ್ಲ ನಾವು,ಇನ್ನು ನೀವು ಯಾವ ಲೆಕ್ಕ -ಹಿಂದೂ ಮಹಾಸಭಾದಿಂದ ಸಿಎಂ ಗೆ ಕೊಲೆ ಬೆದರಿಕೆ

ಮಂಗಳೂರು: ಮೈಸೂರು ದೇಗುಲ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಹತ್ಯೆ ಮಾಡಲಾಗಿದೆ. ಅಂತಹ ಸಂದರ್ಭದಲ್ಲಿ ನೀವು ಯಾವ ಲೆಕ್ಕ ಬೊಮ್ಮಾಯಿಯವರೇ. ನಿಮ್ಮ ವಿಚಾರದಲ್ಲಿ ಅಲೋಚನೆ ಮಾಡಲು ಸಾಧ್ಯವಿಲ್ಲ ಅಂದುಕೊಳ್ಳಬೇಡಿ.ದೇಗುಲ ಧ್ವಂಸ ಮಾಡಿರೋದು ಒಂದು ಕೊಲೆಗೆ ಸಮಾನ ಎಂದು ಹೇಳಿಕೆ ನೀಡಿದ್ದಾರೆ.

ದೇವಾಲಯ ಧ್ವಂಸದ ಮೂಲಕ ಅಲ್ಪಸಂಖ್ಯಾತ ಮತಗಳಿಕೆ ಪ್ರಯತ್ನ ಮಾಡುತ್ತಿದ್ದೀರಿ. ಬಿಜೆಪಿಯಿಂದ ಅಲ್ಪಸಂಖ್ಯಾತರ ಓಲೈಕೆಯಾಗುತ್ತಿದೆ. ಬೊಮ್ಮಾಯಿಯವರೇ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಧಾರ್ಮಿಕ ದತ್ತಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಯವರೇ ನೀವು ಮೊಟ್ಟೆ ಕದ್ದು ಹಣಮಾಡಿದ್ದೀರಿ. ಇದೀಗ ದೇವಸ್ಥಾನಗಳನ್ನು ಧ್ವಂಸ ಮಾಡಿ ಯಾಕೆ ದುಡ್ಡು ಮಾಡಲು ಹೊರಟಿದ್ದೀರಿ. ಸಂಘಪರಿವಾರ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡೋದು ಅಲ್ಲ. ಸಂಘಟನೆಗಳು ಬಿಜೆಪಿಯನ್ನೇ ಬಹಿಷ್ಕಾರ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಯಾವ ತುಘಲಕ್ ಸರ್ಕಾರ ನಡೆಸ್ತಾ ಇದೀರಾ ನೀವು, ತಾಲಿಬಾನ್ ಸರ್ಕಾರ ಇದ್ಯಾ ಕರ್ನಾಟಕದಲ್ಲಿ? ತಾಲಿಬಾನ್ ಆದ್ರೂ ಪರ್ವಾಗಿಲ್ಲ, ಇದಕ್ಕಿಂತ ಕೀಳು ಮಟ್ಟದ ಸರ್ಕಾರ ನಡೆಸ್ತಾ ಇದೀರ ನೀವು. ನಾಚಿಕೆ ಇಲ್ಲದ ಮುಖ್ಯಮಂತ್ರಿ, ನೈತಿಕತೆ ಇಲ್ಲದ ಮಂತ್ರಿ ಮಂಡಲ. ಭಾರತೀಯ ಜನತಾ ಪಕ್ಷವೇ ಬೆನ್ನು ಮೂಳೆ ಇಲ್ಲದ ಪಕ್ಷ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕರ್ನಾಟಕದಲ್ಲಿ, ಸೆಪ್ಟೆಂಬರ್ 29, 2009 ರ ನಂತರ ನಿರ್ಮಿಸಲಾದ ಸಾರ್ವಜನಿಕ ಸ್ಥಳಗಳಲ್ಲಿನ ಅಕ್ರಮ ಕಟ್ಟಡಗಳನ್ನು ಕೆಡವಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 6,395 ಅಕ್ರಮ ಧಾರ್ಮಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

error: Content is protected !! Not allowed copy content from janadhvani.com