ಬೆಂಗಳೂರಿನಲ್ಲಿ ಒಂದು ತಿಂಗಳ ದರ ಪಟ್ಟಿಯನ್ನೇ (ಮಾರ್ಚ್ 1 ರಿಂದ ಏಪ್ರಿಲ್ 1) ಗಮನಿಸಿದರೆ, ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ₹ 2.21 ಮತ್ತು ₹ 2.37 ರಷ್ಟು ಏರಿಕೆಯಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹ 74.90ಗೆ ಮತ್ತು ಡೀಸೆಲ್ ₹ 65.67ಕ್ಕೆ ತಲುಪಿದೆ.
ಪೆಟ್ರೋಲ್ ದರ ಮಾರ್ಚ್ 15 (₹ 73.59) ರಿಂದ 19 ( 73.33) ರವರೆಗೆ ಸ್ವಲ್ಪ ಇಳಿಕೆ ಕಂಡಿತ್ತು. ನಂತರ ಏರಿಕೆ ಕಾಣುತ್ತಲೇ ಇದೆ. ಡೀಸೆಲ್ ದರ ಮಾರ್ಚ್ 16 (₹ 63.87) ರಿಂದ 18 (₹ 63.78) ರವರೆಗೆ ಅಲ್ಪ ಇಳಿಕೆ ಕಂಡಿತ್ತು. ನಂತರ ಹೆಚ್ಚುತ್ತಲೇ ಇದೆ.
ನಾಲ್ಕು ವರ್ಷಗಳ ಗರಿಷ್ಠ: ನವದೆಹಲಿಯಲ್ಲಿ ಪೆಟ್ರೋಲ್ ದರ ಒಂದು ಲೀಟರಿಗೆ ₹ 73.73ಕ್ಕೆ ತಲುಪಿದೆ. ಇದು ನಾಲ್ಕು ವರ್ಷಗಳಲ್ಲಿ ದಾಖಲಾಗಿರುವ ಅತ್ಯಂತ ಗರಿಷ್ಠ ಮಟ್ಟವಾಗಿದೆ. ಡೀಸೆಲ್ ದರ ಕೂಡಾ ಲೀಟರಿಗೆ ₹ 64.58 ಕ್ಕೆ ಏರಿಕೆ ಕಂಡಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ.
2014ರ ಸೆಪ್ಟೆಂಬರ್ 14ರಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ಬೆಲೆ ₹ 76.06 ರಷ್ಟಿತ್ತು. ಡೀಸೆಲ್ ದರ 2018ರ ಫೆಬ್ರುವರಿ 7 ರಂದು ₹ 64.22 ರಷ್ಟು ಗರಿಷ್ಠ ಮಟ್ಟದಲ್ಲಿತ್ತು.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಈಗ ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ದಿನದ ಆಧಾರದಲ್ಲಿ ಪರಿಷ್ಕರಣೆ ಮಾಡಲಾರಂಭಿಸಿವೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಭಾನುವಾರ 18 ಪೈಸೆಯಷ್ಟು ಏರಿಕೆ ಮಾಡಿವೆ.
ಮನವಿ ತಿರಸ್ಕರಿಸಿದ್ದ ಸರ್ಕಾರ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಆಗುತ್ತಿದೆ. ಇದು ದೇಶದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ದರ ಏರಿಕೆ ಬಿಸಿ ತಗ್ಗಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿಮೆ ಮಾಡುವಂತೆ ಪೆಟ್ರೋಲಿಯಂ ಸಚಿವಾಲಯವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ 2018–19ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಅಂತಹ ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ.
ದಕ್ಷಿಣ ಏಷ್ಯಾದ ದೇಶಗಳಲ್ಲಿಯೇ ತುಟ್ಟಿ: ದಕ್ಷಿಣ ಏಷ್ಯಾದ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ದರವು ಅತ್ಯಂತ ಗರಿಷ್ಠ ಮಟ್ಟದಲ್ಲಿದೆ.
ತೆರಿಗೆ ಹೊರೆ
ಕೇಂದ್ರ ಸರ್ಕಾರ (ಪ್ರತಿ ಲೀಟರಿಗೆ)
ಪೆಟ್ರೋಲ್ ₹ 19.48 ಎಕ್ಸೈಸ್ ಡ್ಯೂಟಿ
ಡೀಸೆಲ್ ₹ 15.33 ಎಕ್ಸೈಸ್ ಡ್ಯೂಟಿ
ಕರ್ನಾಟಕದಲ್ಲಿ (ಪ್ರತಿ ಲೀಟರಿಗೆ)
ಪೆಟ್ರೋಲ್ ₹ 16.12 ವ್ಯಾಟ್
ಡೀಸೆಲ್ ₹ 9.34 ವ್ಯಾಟ್
ಕೃಪೆ:ಪ್ರಜಾವಾಣಿ