janadhvani

Kannada Online News Paper

ಕೊರೋನಾ “ಸೂಪರ್-ಸ್ಪ್ರೆಡರ್”: ಕುಂಭ ಮೇಳದಲ್ಲಿ ಕನಿಷ್ಟ 70 ಲಕ್ಷ ಮಂದಿ ಭಾಗಿ

ಹರಿದ್ವಾರ,ಮೇ.01:ಇಡೀ ದೇಶ ಕೊರೋನಾ ಎರಡನೇ ಅಲೆಯಿಂದಾಗಿ ನಲುಗಿದೆ. ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಸಾವಿರಾರು ಜನ ಸಾವನ್ನಪ್ಪುತ್ತಿರುವ ಸುದ್ದಿ ಸದ್ದು ಮಾಡುತ್ತಲೇ ಇದೆ. ಈ ನಡುವೆಯೂ ಕೇಂದ್ರ ಸರ್ಕಾರ ಹರಿದ್ವಾರದಲ್ಲಿ ಕುಂಭ ಮೇಳಕ್ಕೆ ಅನುಮತಿ ನೀಡಿತ್ತು.

ಕುಂಭ ಮೇಳದಿಂದಾಗಿ ಸಾವಿರಾರು ಜನ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ದೇಶದಾದ್ಯಂತ ಜನ ಆಮ್ಲಜನಕ-ವೆಂಟಿಲೇಟರ್ ಇಲ್ಲದೆ ಸಾವನ್ನಪ್ಪುತ್ತಿದ್ದರೂ ಸಹ ಕಳೆದ ಶುಕ್ರವಾರದ ವರೆಗೆ ಕುಂಭ ಮೇಳಕ್ಕೆ ಅನುಮತಿ ನೀಡಲಾಗಿತ್ತು. ಸುದೀರ್ಘ ಅವಧಿಯಲ್ಲಿ ನಡೆದ ಈ ಕುಂಭ ಮೇಳದಲ್ಲಿ ಕನಿಷ್ಟ 70 ಲಕ್ಷ ಜನ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮ ಕೊರೋನಾ “ಸೂಪರ್-ಸ್ಪ್ರೆಡರ್” ಆಗಿ ಕೆಲಸ ಮಾಡಿದೆ ಎಂದು ಕೆಲವು ತಜ್ಞರು, ಹಿರಿಯ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ಹಲವಾರು ಸಲ ಕೋರ್ಟುಗಳು, ಈ ಮೇಳಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿವೆ.

ಸಾಮಾನ್ಯ ಪರಿಸ್ಥಿತಿಗಳಲ್ಲಿ ಮೂರು ತಿಂಗಳುಗಳ ಕಾಲ ನಡೆದ ಕುಂಭಮೇಳವು ಕೋವಿಡ್ ಕಳವಳದಿಂದಾಗಿ ಈ ಬಾರಿ ಔಪಚಾರಿಕವಾಗಿ ಏಪ್ರಿಲ್ 1 ರ ಹೊತ್ತಿಗೆ ಪ್ರಾರಂಭವಾಯಿತು. ಆದರೂ ಒಟ್ಟು ಸುಮಾರು 70 ಲಕ್ಷ ಜನರು ಭಾಗವಹಿಸಿದ ಈ ಮೇಳ ಕೊರೋನಾ ವೃದ್ಧಿಗೆ ಕಾರಣವಾಗಿತು ಎಂದು ಆರೋಪಿಸಲಾಗಿದೆ ಎಂದು ವರದಿಯಾಗಿದೆ.

ಮೇಳದಲ್ಲಿ ವೈದ್ಯಕೀಯ ಸಿಬ್ಬಂದಿ ನಡೆಸಿದ ಸುಮಾರು ಎರಡು ಲಕ್ಷ ಪರೀಕ್ಷೆಗಳಲ್ಲಿ ಸುಮಾರು 2,600 ಭಕ್ತರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತು. ಹಲವು ಹಿರಿಯ ಸಾಧುಗಳು ಸಾವಿಗೀಡಾದರು.

ಏಪ್ರಿಲ್ 12, 14 ಮತ್ತು 27 ರಂದು ಮೂರು ಶಾಹಿ ಸ್ನಾನಗಳು (ಪವಿತ್ರ ಸ್ನಾನ) ನಡೆದವು, ಕೋರ್ಟುಗಳು ಮತ್ತು ದೇಶದ ನಾಗರೀಕರ ಆಕ್ಷೇಪಕ್ಕೆ ಮಣಿದು ಕೊನೆಯ ಸ್ನಾನವನ್ನು ಸಾಂಕೇತಿಕವಾಗಿ ನಡೆಸಲಾಯಿತಾದರೂ ಭಕ್ತರ ಸಂಖ್ಯೆ ಇದ್ದೇ ಇತ್ತು.

ಕೊರೊನಾ ವೈರಸ್ ಉಲ್ಬಣವನ್ನು ಹೆಚ್ಚಿಸುವ ಸಾಧ್ಯತೆಯನ್ನು ಪರಿಗಣಿಸಿ ಕುಂಭವು ದೊಡ್ಡ ಸವಾಲಾಗಿತ್ತು ಎಂದು ಹರಿದ್ವಾರ ಮುಖ್ಯ ವೈದ್ಯಕೀಯ ಅಧಿಕಾರಿ ಎಸ್.ಕೆ. ಝಾ ಹೇಳಿದ್ದರು. ಕುಂಭದ ವೈದ್ಯಕೀಯ ಅಧಿಕಾರಿ ಅರ್ಜುನ್ ಸಿಂಗ್ ಸೆಂಗಾರ್, “ಹಿಂದಿನ ಸಲಕ್ಕಿಂತ ಜನಸಂದಣಿ ಕಡಿಮೆ ಇದ್ದರೂ, ಕೊರೋನಾ ಕಾರಣಕ್ಕಾಗಿ ಈ ಪರಿಸ್ಥಿತಿ ನಮಗೆ ಸವಾಲಾಗಿತ್ತು, ಸಾಮಾಜಿಕ ಅಂತರದ ಮಾನದಂಡಗಳನ್ನು ಉಲ್ಲಂಘಿಸುವಷ್ಟು ಜನಸಂದಣಿಯಂತೂ ಇತ್ತು” ಎಂದು ಹೇಳಿದ್ದಾರೆ.

“ಭಕ್ತರಿಗೆ ಆರಂಭದಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಇಷ್ಟವಿರಲಿಲ್ಲ. ಆದರೆ ಏಪ್ರಿಲ್ 14 ರಂದು ಎರಡನೇ ಶಾಹಿ ಸ್ನಾನದ ನಂತರ ಅವರು ಪಶ್ಚಾತ್ತಾಪಪಟ್ಟರು” ಎಂದು ಅವರು ಹೇಳಿದರು.

“ಉತ್ತರ ಪ್ರದೇಶದಿಂದ ಕರೆತಂದ ಆರೋಗ್ಯ ಸಿಬ್ಬಂದಿಯ ಸಹಾಯದಿಂದ ನಾವು ಒಟ್ಟು 1,90,083 ಪರೀಕ್ಷೆಗಳನ್ನು ನಡೆಸಿದ್ದೇವೆ, ಅದರಲ್ಲಿ 2642 ಪಾಸಿಟಿವ್ ವರದಿ ಬಂದಿವೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರಿ ಟೀಕೆಗಳು ವ್ಯಕ್ತವಾದ ನಂತರ, ಕುಂಭದಲ್ಲಿ ತಮ್ಮ ಪ್ರಾತಿನಿಧ್ಯವನ್ನು ಸಾಂಕೇತಿಕವಾಗಿ ಇರಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದ ನಂತರ ಜನಸಂದಣಿಯು ಹೊರಬರಲು ಪ್ರಾರಂಭಿಸಿತು.

ಮೇಳಕ್ಕೆ ಹಾಜರಾಗುವ ಪಂಗಡಗಳಲ್ಲಿ ಅತಿ ದೊಡ್ಡದಾದ ಜೂನಾ ಅಖಾಡಾ, ಪ್ರಧಾನಿ ಮೋದಿಯವರ ಮನವಿಗೆ ಮೊದಲ ಬಾರಿಗೆ ಸ್ಪಂದಿಸಿತು. ನಂತರ ಹಲವಾರು ಅಖಾಡಾಗಳು ಈ ಮೇಳದಿಂದ ಹಿಂದೆ ಸರಿದವು. ಆಗ ಸಾಮಾನ್ಯ ಭಕ್ತರು ಅವರ ಮಾದರಿಯನ್ನು ಅನುಸರಿಸಿದರು.

ಹರಿದ್ವಾರದಿಂದ ದೇವ್‌ಪ್ರಯಾಗ್‌ವರೆಗಿನ 641 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಕುಂಭ ಮೇಳ ಕ್ಷೇತ್ರದಲ್ಲಿ ಎಲ್ಲಿಯೂ ಗಂಭೀರವಾದ ಅಹಿತಕರ ಘಟನೆಗಳಿಲ್ಲದೆ ಈ ಮೇಳ ಸಂಭವಿಸಿದೆ ಎಂದು ಮೇಳದ ಸಂಘಟಕರು ಹೇಳುತ್ತಾರೆ. ಆದರೆ ಕೋರ್ಟುಗಳು, ವೈದ್ಯಕೀಯ ತಜ್ಞರು ಈ ಮೇಳ ಕೊರೊನಾ ಸೂಪರ್-ಸ್ಪ್ರೆಡರ್ ಆಗಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

error: Content is protected !! Not allowed copy content from janadhvani.com