ಬೆಂಗಳೂರು,ಏ. 20: ರಾಜ್ಯದಲ್ಲಿ ಒಂದರಿಂದ ಒಂಬತ್ತನೇ ತರಗತಿಯವರೆಗಿನ ಎಲ್ಲಾ ಪರೀಕ್ಷೆಗಳನ್ನ ರದ್ದುಗಳಿಸಲಾಗಿದೆ. ಈ ಎಲ್ಲಾ ತರಗತಿಗಳ ವಿದ್ಯಾರ್ಥಿಗಳನ್ನ ಮುಂದಿನ ತರಗತಿಗೆ ಬಡ್ತಿ ನೀಡಬೇಕು ಎಂದು ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ನಾಲ್ಕು ದಿನಗಳ ಹಿಂದೆ ಡಿಎಸ್ಇಆರ್ಟಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಆನ್ಲೈನ್ಲ್ಲಿ ಸಭೆ ನಡೆಸಿದ್ದ ಶಿಕ್ಷಣ ಸಚಿವರು ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದರು. ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನ ರದ್ದುಗಳಿಸುವ ನಿರ್ಧಾರಕ್ಕೆ ಸಚಿವರು ಬಂದರೆನ್ನಲಾಗಿದೆ. ಆದರೆ, 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನ ರದ್ದು ಮಾಡಲಾಗಿಲ್ಲ. ಸದ್ಯಕ್ಕೆ ನಿಗದಿಯಂತೆ 10ನೇ ತರಗತಿ ಪರೀಕ್ಷೆ ಜೂನ್ 21ರಿಂದ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಇಂದು ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಒಂದರಿಂದ ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಈವರೆಗೆ ಆನ್ಲೈನ್ ಮತ್ತು ವಿದ್ಯಾಗಮ ಯೋಜನೆ ಅಡಿ ನಡೆದ ಪಾಠಗಳಲ್ಲಿ ಅವರು ತೋರಿದ ಪ್ರಗತಿ ಇತ್ಯಾದಿ ಅಂಶಗಳೊಂದಿಗೆ ಚೈಲ್ಡ್ ಪ್ರೊಫೈಲ್ ತಯಾರಿಸಬೇಕು.
ಸಿಸಿಇ ನಿಯಮಗಳಂತೆ ಪ್ರಗತಿ ಪತ್ರದಲ್ಲಿ ಈ ಅಂಶಗಳನ್ನ ದಾಖಲಿಸಿ ಎಲ್ಲಾ ವಿದ್ಯಾರ್ಥಿಗಳನ್ನ ಮುಂದಿನ ತರಗತಿಗೆ ಬಡ್ತಿ ನೀಡಬೇಕು. ಯಾರಿಗೂ ಹೊಸದಾಗಿ ಮೌಲ್ಯಾಂಕನ ಮಾಡಬಾರದು. ಏಪ್ರಿಲ್ 30ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಒಂಬತ್ತನೇ ತರಗತಿಯವರೆಗಿನ ಮಕ್ಕಳು ಕಲಿಕೆಯಲ್ಲಿ ತೋರಿದ ಪ್ರಗತಿ ಮತ್ತು ಕೊರತೆ ಗಮನಕ್ಕೆ ಬಂದಿದ್ದಲ್ಲಿ ಅದನ್ನು ದಾಖಲಿಸಬೇಕು. ಮುಂದಿನ ಶೈಕ್ಷಣಿಕ ವರ್ಷದ ವೇಳೆ ನೈದಾನಿಕ ಪರೀಕ್ಷೆ ನಡೆಸಿ ಹಿಂದಿನ ವರ್ಷದ ಕಲಿಕೆಯ ಮಟ್ಟವನ್ನು ಗುರುತಿಸಬೇಕು.ಪ್ರತಿ ಮಗುವಿನ ಕಲಿಕೆಗೆ ಅನುಸಾರ ಬ್ರಿಡ್ಜ್ ಕೋರ್ಸ್ ಮಾಡಬೇಕು. ನಂತರ ಸಾಫಲ್ಯ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಲ್ಲಿ ಕಲಿಕೆ ಆಗಿರುವುದನ್ನು ದೃಢೀಕರಿಸಿ ಮುಂದಿನ ತರಗತಿಯ ಬೋಧನೆ ಪ್ರಾರಂಭಿಸಬೇಕು ಎಂದು ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಒಂದರಿಂದ ಏಳನೇ ತರಗತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮೇ 1ರಿಂದ ಜೂನ್ 6ರವರೆಗೆ ಬೇಸಿಗೆ ರಜೆ ಎಂದು ಘೋಷಿಸಲಾಗಿದೆ. ಜೂನ್ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಹಾಗೆಯೇ, ಎಂಟು ಮತ್ತು ಒಂಬತ್ತನೇ ತರಗತಿಯ ಮಕ್ಕಳಿಗೆ ಮೇ 1ರಿಂದ ಜುಲೈ 14ರವರೆಗೆ ಬೇಸಿಗೆ ರಜೆ ಇದೆ. ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ.
ಆದರೆ, ಈ ವೇಳಾಪಟ್ಟಿ ಕೇವಲ ತಾತ್ಕಾಲಿಕವಾಗಿದ್ದು, ಕೋವಿಡ್ ಸೋಂಕಿನ ಸ್ಥಿತಿಗತಿ ಅನುಸಾರ ಬದಲಾಗುವ ಸಾಧ್ಯತೆ ಇದೆ ಎಂದು ತಿಳಿಸಿರುವ ಶಿಕ್ಷಣ ಇಲಾಖೆ, ಜೂನ್ 21ರಿಂದ ಜುಲೈ 5ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.