ಬೆಂಗಳೂರು (ಮಾ. 26): ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ ಎಂದು ಸಿಡಿ ಸಂತ್ರಸ್ತ ಯುವತಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಮೂರನೇ ವಿಡಿಯೋ ಬಿಡುಗಡೆ ಮಾಡಿದ ಯುವತಿ ನಮ್ಮ ಲಾಯರ್ ಜಗದೀಶ್ ಅವರ ಮುಖಾಂತರ ನಾನು ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದಿದ್ದರು. ಅದರಂತೆ ತಮ್ಮ ವಕೀಲರ ಬಳಿ ದೂರಿನ ಪ್ರತಿಗೆ ಸಹಿ ನೀಡಿ ಕಳುಹಿಸಿದ್ದಾರೆ. ವಕೀಲ ಜಗದೀಶ್ ಸಂತ್ರಸ್ತ ಯುವತಿ ದೂರನ್ನು ಕಮಿಷನರ್ ಕಚೇರಿಗೆ ನೀಡಿದ್ದಾರೆ. ಯುವತಿ ಕೈ ಬರವಣಿಗೆಯಲ್ಲಿ ಎರಡು ಪುಟಗಳ ದೂರನ್ನು ನೀಡಿದ್ದಾರೆ. ಇದರಲ್ಲಿ ಮಾಜಿ ಸಚಿವರು ಉದ್ಯೋಗದ ಭರವಸೆ ನೀಡಿ ತಮ್ಮನ್ನು ಲೈಂಗಿಕವಾಗಿ ದೌರ್ಜನ್ಯ ನಡೆಸಿದ ಬಗ್ಗೆ ತಿಳಿಸಿದ್ದಾರೆ.
ಯುವತಿಯ ದೂರನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್ ಪರಿಶೀಲನೆ ನಡೆಸಿದರು. ಕಮಿಷನರ್ ಯುವತಿ ಸಹಿ ಹಾಗೂ ದೂರಿನ ಪ್ರತಿ ಸೂಕ್ತವಾಗಿದ್ರೆ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗೆ ದೂರು ದಾಖಲಿಸಲು ಸೂಚನೆ ನೀಡುವ ಸಾಧ್ಯತೆ ಇದೆ. ಯುವತಿ ಬರೆದಿರುವ ಸ್ವ ಇಚ್ಚೆ ದೂರಿನ ಪ್ರತಿ ಬರೆದಿರುವುದಾಗಿ ವಕೀಲರು ತಿಳಿಸಿದ್ದಾರೆ. ದೂರಿನಲ್ಲಿ ಬೆದರಿಕೆ, ಲೈಂಗಿಕ ಕಿರುಕುಳ ಹಾಗೂ ವಂಚನೆ ಮಾಡಿರುವುದಾಗಿ ಉಲ್ಲೇಖ ಮಾಡಲಾಗಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ ಬಳಿಕ ಮಾತನಾಡಿದ ವಕೀಲ ಜಗದೀಶ್, ಆ ಸಂತ್ರಸ್ತ ಯುವತಿಗೆ ಭಯ ಇದೆ. ಯುವತಿಗೆ ಬೆಂಬಲ ನೀಡುವುದಾಗಿ ಹೇಳಿದ್ದೇವು. ಆ ಯುವತಿ ಲಿಖಿತ ರೂಪದಲ್ಲಿ ದೂರು ಕಳಿಸಿದ್ದಾರೆ. ಕಮಿಷನರ್ಗೆ ಸುಮಟೋ ಕೇಸ್ ದಾಖಲಿಸಲು ಮನವಿ ಮಾಡಿದ್ದೇವೆ. ಕಮಿಷನರ್ ಅವರು ಕಬ್ಬನ್ ಪಾರ್ಕ್ ಠಾಣೆಗೆ ಹೋಗಲು ತಿಳಿಸಿದ್ದಾರೆ. ಯುವತಿಗೆ ಭದ್ರತೆ ಮುಖ್ಯವಾಗಿದೆ. ಅಲ್ಲದೇ, ಎಸ್ಐಟಿ ತನಿಖೆ ಮೇಲೆ ಮೇಲೆ ಆಕೆಗೆ ನಂಬಿಕೆ ಇಲ್ಲ. ಆಕೆ ಆರೋಪ ಮಾಡುತ್ತಿರುವುದು ಕರ್ನಾಟಕದ ಪ್ರಭಾವಿ ವ್ಯಕ್ತಿ ಮೇಲೆ ಹಾಗಾಗಿ ಆ ಸಂತ್ರಸ್ತ ಯುವತಿಗೆ ಭಯ ಇದೆ ಎಂದು ತಿಳಿಸಿದರು.
ದೂರಿನಲ್ಲೇನಿದೆ?: ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ನೆಲೆಸಿದ್ದೆ, ಈ ವೇಳೆ ಕಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದೆ. ಈ ಸಂದರ್ಭದಲ್ಲಿ ಅವರು ನನ್ನ ಮೊಬೈಲ್ ನಂಬರ್ ಪಡೆದರು. ನಂತರ ಕರೆ ಮಾಡಿ ನನ್ನ ಹಾಗೂ ಕುಟುಂಬದ ಬಗ್ಗೆ ವಿಚಾರಿಸಿದರು. ಸಚಿವರ ಕಾಳಜಿ ವಹಿಸಿದರು. ಅಲ್ಲದೇ ಸಚಿವರು ಉದ್ಯೋಗ ಕೊಡಿಸಲು ತಮ್ಮೊಂದಿಗೆ ಸಹಕರಿಸಬೇಕು ಎಂದರು. ಹಣವಿಲ್ಲದೇ ಸಚಿವರ ಮಾತಿಗೆ ಒಪ್ಪಿ ಸಹಕರಿಸಿದೆ. ವಿಡಿಯೋ ಕರೆ ಮಾಡಿ ಪ್ರಚೋದಿಸಿದ್ದಾರೆ. ಗುಪ್ತಾಂಗ ತೋರಿಸಲು ಒತ್ತಾಯಿಸಿದ್ದಾರೆ. ನನ್ನ ಕುಟುಂಬದವರಿಗೆ ಜೀವಬೆದರಿಕೆ ಇದೆ. ನನಗೆ ನನ್ನ ಕುಟುಂಬಕ್ಕೆ ಭದ್ರತೆ ನೀಡಿ. ನನ್ನ ತೇಜೋವಧೆ ಮಾಡುತ್ತಿದ್ದಾರೆ. ನನ್ನನ್ನು ಕೊಲ್ಲಲೂ ಪ್ರಯತ್ನ ಮಾಡ್ತಿದ್ದಾರೆ. ವಕೀಲರ ಮೂಲಕ ದೂರು ಕೊಡುತ್ತಿದ್ದೇನೆ. ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.