janadhvani

Kannada Online News Paper

ಉಳ್ಳಾಲ ಪೋಲಿಸರಿಂದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ – ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಮಂಗಳೂರು :- ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕದ ರಾಜ್ಯಾದ್ಯಂತ ಝೀರೋ ಡ್ರಾಪೌಟ್ ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಿ ಹಿಂದಿರುಗುವ ವೇಳೆ ಗಾಂಜಾ ವ್ಯಸನಿಗಳು ಕ್ಯಾಂಪಸ್ ಫ್ರಂಟ್ ನಾಯಕರ ಮೇಲೆ ಹಲ್ಲೆ ನಡೆಸಿದ್ದು, ಮಾತ್ರವಲ್ಲದೆ ಸ್ಥಳಕ್ಕಾಗಮಿಸಿದ ಉಳ್ಳಾಲ ಪೋಲಿಸರು ಹಲ್ಲೆಗೊಳಗಾದವರನ್ನೇ ಬಂಧಿಸಿ, ಠಾಣೆಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿ, ಧಾರ್ಮಿಕ ನಿಂದನೆ ನಡೆಸಿ, ಮಾರ್ಮಾಂಗಕ್ಕೆ ತಮ್ಮ ಬೂಟುಗಳಿಂದ ಒದ್ದು ತೀವ್ರ ಹಲ್ಲೆ ನಡೆಸಿದ್ದು ಇದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಜ್ಯೋತಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಸಕ್ರಿಯವಾಗಿದೆ ಎಂಬುದಕ್ಕೆ ಈ ಘಟನೆಯು ಸ್ಪಷ್ಟ ಉದಾಹರಣೆಯಾಗಿದೆ. ನ್ಯಾಯ ಒದಗಿಸಬೇಕಾದ ಪೊಲೀಸರು ಗಾಂಜಾ ಮಾಫಿಯದೊಂದಿಗೆ ಆಂತರಿಕವಾಗಿ ಶಮಿಲಾಗಿದ್ದಾರೆಯೇ ಎಂಬುದಕ್ಕೆ ಸಾರ್ವಜನಿಕರಲ್ಲಿ ಸಂಶಯ ಮೂಡಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಡ್ರಾಪೌಟ್ ಆಗುತ್ತಿದ್ದು, ಇದನ್ನು ಮನಗಂಡು ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ಝೀರೋ ಡ್ರಾಪೌಟ್ ಅಭಿಯಾನದ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ನಡೆಸಲು ತೆರಳಿದ ಕ್ಯಾಂಪಸ್ ಫ್ರಂಟ್ ನಾಯಕರನ್ನು ಬಂಧಿಸಿ , ಠಾಣೆಯಲ್ಲಿ ಹಲ್ಲೆ ನಡೆಸಿದ ಪೋಲಿಸರ ನಡೆಯ ಕುರಿತು ತೀವ್ರ ಅಸಮಾಧಾನವಾಗಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಇದರ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಂಡು ಹಲ್ಲೆ ನಡೆಸಿದ ಗಾಂಜಾ ವ್ಯಸನಿಗಳಿನ್ನು ಬಂಧಿಸಿ, ದರ್ಪ ಮೆರೆದ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಬೇಕೆಂದು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸಾಧಿಕ್ ಜಾರತ್ತಾರು ಆಗ್ರಹಿಸಿದರು.

ಉಳ್ಳಾಲ ಪೋಲಿಸರ ಕ್ರೌರ್ಯತೆಯನ್ನು ವಿದ್ಯಾರ್ಥಿ ಸಮುದಾಯ ಸಹಿಸಲ್ಲ, ಕಾನೂನು ಹೋರಾಟದ ಮೂಲಕ ಅವರಿಗೆ ಉತ್ತರ ನೀಡಲಿದ್ದೇವೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಮುರ್ಶಿದಾ ಮಂಗಳೂರು ಪ್ರತಿಭಟನೆಯಲ್ಲಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಇಹ್ತಿಶಾಮ್ , ಕೋಶಾಧಿಕಾರಿ ಸುಲ್ತಾನ್ , ಕ್ಯಾಂಪಸ್ ಫ್ರಂಟ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಮಂಗಳೂರು, ಕಾರ್ಯದರ್ಶಿ ಅಶ್ರಫ್ ಜೋಕಟ್ಟೆ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com