janadhvani

Kannada Online News Paper

ಕೆಸಿಎಫ್ INC ಅಧ್ಯಕ್ಷರಾದ ಡಾ.ಶೇಖ್ ಬಾವ ಅವರೊಂದಿಗಿನ ಸಂದರ್ಶನ- 2021

ಸಾಂಘಿಕ ಪಾತ್ರವನ್ನು ಹೇಗೆ ಗೆಲ್ಲುವುದು ಎಂಬುದರ ಕುರಿತು ಖ್ಯಾತ ಉದಾರದಾನಿ ಮತ್ತು ಸಾಮಾಜಿಕ ಮುಖಂಡ ಡಾ. ಶೇಖ್ ಬಾವ ಮಂಗಳೂರು.

1. ನಿಮ್ಮ ವಿದ್ಯಾರ್ಹತೆ ಮತ್ತು ಜೀವನಶೈಲಿಯ ಬಗ್ಗೆ ನಮಗೆ ಹೇಳಬಹುದೇ?

ಹುಟ್ಟೂರು ಮಂಗಳೂರು, ದೇಶದ, ರಾಜ್ಯದ ಪ್ರಮುಖ ಬಂದರು ನಗರ ಮಂಗಳೂರು. ಶಿಕ್ಷಣ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಶ್ರೇಷ್ಠ ಸ್ಥಳದಲ್ಲಿ ಹುಟ್ಟಿರುವ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಕಳೆದ 25 ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ವಿಶ್ವದ ಪ್ರಮುಖ ಇಂಧನ ಉತ್ಪಾದನಾ ಘಟಕ ADNOC ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅಲ್ಲದೆ, ತವಾಮ್ ಗ್ಲೋಬಲ್ ಎಜು ಗಾರ್ಡನ್ (TAWAM Global Edu Garden) ಯೋಜನೆಯನ್ನು ಅಭಿವೃದ್ಧಿಪಡಿಸಲು ರಚಿಸಲಾದ ಸರ್‌ಪ್ಲಸ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್‌ನ (Surplus Infra Pvt Ltd) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದೇನೆ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಪ್ರಾಥಮಿಕ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. ಕಳಿಂಗ ವಿಶ್ವವಿದ್ಯಾಲಯದಿಂದ “ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಗ್ರಾಹಕರ ನಿಷ್ಠೆ” ಕುರಿತಾದ ಅಧ್ಯಯನಕ್ಕೆ ಡಾಕ್ಟರ್ ಆಫ್ ಫಿಲಾಸಫಿ (ಮ್ಯಾನೇಜ್‌ಮೆಂಟ್) ಪದವಿ ಪಡೆದಿದ್ದೇನೆ, ಮಂಗಳೂರು ವಿಶ್ವವಿದ್ಯಾಲಯದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿಯೊಂದಿಗೆ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಸಮಾನಾಂತರವಾಗಿ, ರಾಜೇಂದ್ರ ಪ್ರಸಾದ್ ಇನ್ಸ್ಟಿಟ್ಯೂಷನ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಸ್ನಾತಕೋತ್ತರ ಡಿಪ್ಲೊಮಾ ಇನ್ ಮಾರ್ಕೆಟಿಂಗ್ ಮತ್ತು ಸೇಲ್ಸ್ ಮ್ಯಾನೇಜ್‌ಮೆಂಟ್, ಯುನೈಟೆಡ್ ಕಿಂಗ್‌ಡಂನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಡಿಪ್ಲೊಮಾ, ಐಟಿ, ಎಚ್‌ಆರ್ ಮತ್ತು ಹಣಕಾಸು ನಿರ್ವಹಣೆಯಲ್ಲಿ ಹಲವಾರು ಅಲ್ಪಾವಧಿಯ ಕೋರ್ಸ್ ಪ್ರಮಾಣಪತ್ರಗಳನ್ನು ಹೊಂದಿದ್ದೇನೆ.

ನಾನು ಆಡಂಬರದ ಜೀವನಕ್ಕಿಂತ ಸರಳತೆಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಕುಟುಂಬವು ಅಷ್ಟೊಂದು ಐಷಾರಾಮಿಯಲ್ಲದಿದ್ದರೂ ಪ್ರೀತಿ, ವಾತ್ಸಲ್ಯ ತುಂಬಿದ ವಾತಾವರಣದಲ್ಲಿ ಬೆಳೆದಿದ್ದೇನೆ, ನನ್ನ ಅಜ್ಜಿ ಸ್ವತಃ ಹಸಿವಿನಿಂದ ಬಳಲುತಿದ್ದರೂ ಕೂಡ ಬಡ ಜನರಿಗೆ ತನ್ನದೇ ಆಹಾರವನ್ನು ನೀಡುತ್ತಿದ್ದದ್ದು ನನಗೆ ನೆನಪಿಗೆ ಬರುತ್ತಿದೆ. ಸಮುದಾಯವು ನನ್ನ ಬಗ್ಗೆ ಹೆಮ್ಮೆ ಪಡುವಂತೆ ಬೆಳೆದುದರ ಬಗ್ಗೆ ನನಗೆ ಅಭಿಮಾನವಿದೆ.

2. ನಿಮ್ಮ ಈ ತೀವ್ರವಾದ ಕೆಲಸದ ಒತ್ತಡ ಮತ್ತು ಕೌಟುಂಬಿಕ ಸಂಬಂಧಗಳ ನಡುವೆ ಸಾಂಘಿಕ ಚಟುವಟಿಕೆಗಳನ್ನು ನೀವು ಹೇಗೆ ನಿಭಾಯಿಸುತ್ತೀರಿ?

– ಸಮಯ ನಿರ್ವಹಣೆಯನ್ನು ವ್ಯಾಖ್ಯಾನಿಸುವಾಗ ‘ಪರಿಣಾಮಕಾರಿ ಸಮಯ’ ಮತ್ತು ‘ಸಮಯ ದಕ್ಷತೆ’ ಪದಗಳನ್ನು ಹೆಚ್ಚಾಗಿ ಪರಸ್ಪರ ಬದಲಾಯಿಸಲಾಗುತ್ತದೆ. ಪರಿಣಾಮಕಾರಿ ಸಮಯ ಎಂದರೆ ಒಂದು ಉದ್ದೇಶವನ್ನು ಸಾಧಿಸಲು ಸಾಕಾಗುತ್ತದೆ; ಆದಾಗ್ಯೂ ಸಮಯ ಮತ್ತು ಶ್ರಮದ ಫಲದೊಂದಿಗೆ ದಕ್ಷತೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದಕ್ಷತೆಯನ್ನು ಪರಿಣಾಮಕಾರಿತ್ವದ ಭಾಗವೆಂದು ನಾವು ಭಾವಿಸುತ್ತೇವೆ. ಅದು ಕೇವಲ ಕೆಲಸಗಳನ್ನು ಮಾಡುವುದರ ಬಗ್ಗೆ ಅಲ್ಲ ಅವುಗಳನ್ನು ಸರಿಯಾದ ರೀತಿಯಲ್ಲಿ ಮಾಡುವುದಾಗಿದೆ ಯಶಸ್ಸಿನ ಒಳಗುಟ್ಟು. ನಾನು ದೈನಂದಿನ ಗುರಿಯನ್ನು ನಿಗದಿಪಡಿಸುವುದರಿಂದ ನನಗೆ ಮುಂದೇನು ಮಾಡಬೇಕೆಂಬುದರ ಬಗ್ಗೆ ಯೋಚಿಸಲು ಮತ್ತು ಪ್ರತಿ ಕಾರ್ಯಕ್ಕೆ ಮಾನಸಿಕವಾಗಿ ಸಿದ್ಧವಾಗಲು ಸಹಾಯ ಮಾಡುತ್ತದೆ. ಅಧ್ಯಯನ, ವಿರಾಮ, ಹಣ ಸಂಪಾದನೆ ಮತ್ತು ಕುಟುಂಬ ವ್ಯವಹಾರಗಳಿಗಾಗಿ ಸಮಯದ ಸಂಘರ್ಷದ ಬೇಡಿಕೆಗಳನ್ನು ಸಮತೋಲನಗೊಳಿಸಲು ನಮ್ಮ ಸಮಯವನ್ನು ನಿರ್ವಹಿಸಲು ನಾವು ಪರಿಣಾಮಕಾರಿ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯ. ನಾನು ಸಮಯವನ್ನು ವ್ಯರ್ಥ ಮಾಡದೆ ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತೇನೆ. ನೂರಾರು ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ನನ್ನ ಕೆಲಸ ನಡೆಯದೆ ಹೋದರೆ ನಾನದರ ಬಗ್ಗೆ ಕುಗ್ಗುವುದೋ, ಸೊರಗುವುದೋ ಅಥವಾ ನಿರುತ್ಸಾಹಗೊಳ್ಳಲಾರೆ. ಏಕೆಂದರೆ ತಿರಸ್ಕರಿಸಲ್ಪಟ್ಟ ಪ್ರತಿಯೊಂದು ತಪ್ಪು ಹೆಜ್ಜೆಗಳನ್ನು ಯಶಸ್ಸಿನ ಮೆಟ್ಟಿಲುಗಳಾನ್ನಾಗಿ ಸ್ವೀಕರಿಸುವೆ.

3. ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ ನಿಮ್ಮ ಉದ್ಯೋಗದಾತ ADNOC ಕಂಪೆನಿಯು ನಿಮಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ತಿಳಿಯಲು ಸಾಧ್ಯವಾಯಿತು, ನೀವು ಅದನ್ನು ಹೇಗೆ ಬಣ್ಣಿಸುತ್ತೀರಿ ಮತ್ತು ನಿಮಗೆ ನೀಡಲಾದ ಇತರ ವಿಶೇಷ ಪ್ರಶಸ್ತಿಗಳಾವುವು?

– ಕಾರ್ಯಕ್ಷಮತೆ, ದಕ್ಷತೆ, ಸಮರ್ಪಣೆ ಮತ್ತು ಬದ್ಧತೆಗೆ ನನ್ನ ಕೊಡುಗೆಯನ್ನು ಗುರುತಿಸಿ ADNOC ಅತ್ಯುತ್ತಮ ಸಾಧಕ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವರ್ಷದ ಅತ್ಯುತ್ತಮ ಸಾಧಕ, ಮ್ಯಾನ್ ಆಫ್ ದಿ ಕ್ವಾರ್ಟರ್, ಅತ್ಯುತ್ತಮ ನವೀನ ಉದ್ಯೋಗಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 2014 ರಲ್ಲಿ ಕೇರಳ ಸರ್ಕಾರದಿಂದ ಅತ್ಯಂತ ವಿಶಿಷ್ಟವಾದ ‘ಪ್ರವಾಸಿ ಭಾರತೀಯ ದಿನ ಉದ್ಯೋಗ್ ಪತ್ರ’ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ‘ಮಾನವೀಯ ಸೇವಾ’ ಪ್ರಶಸ್ತಿ ನೀಡಲಾಗಿದೆ ಎಂದು ಹೆಮ್ಮೆಯಿಂದ ಇಲ್ಲಿ ಉಲ್ಲೇಖಿಸುತ್ತೇನೆ. ಹಾಗೂ ಇತ್ತೀಚೆಗೆ ಪ್ರತಿಷ್ಠಿತ ‘ಭಾರತ ದರ್ಶನ ರಾಷ್ಟ್ರೀಯ ಏಕೀಕರಣ’ ಮತ್ತು ‘ವಿಶ್ವ ಶಾಂತಿ ಪ್ರಶಸ್ತಿ 2021’ ಸ್ವೀಕರಿಸಲು ಆಯ್ಕೆಯಾಗಿದ್ದೇನೆ.

4. ಕಳೆದ 2 ವರ್ಷಗಳಿಂದ ಕೆಸಿಎಫ್‌ನ ಅಂತರರಾಷ್ಟ್ರೀಯ ಮಂಡಳಿಯ ಅಧ್ಯಕ್ಷರಾಗಿ ನಿಮ್ಮ ಅನುಭವದ ಬಗ್ಗೆ ನಮಗೆ ಹೇಳಬಹುದೇ?

– ಕೆಸಿಎಫ್, ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದು ಅಂತರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಸರ್ವೋಚ್ಚ ಸಂಸ್ಥೆಯಾಗಿದೆ, ಈ ಸಂಘಟನೆಯಲ್ಲಿ ವಿವಿಧ ಗಲ್ಫ್ ದೇಶಗಳ ಕೆಸಿಎಫ್ ರಾಷ್ಟ್ರೀಯ ಸಮಿತಿಗಳು, ಮಲೇಷ್ಯಾ ಮತ್ತು ಲಂಡನ್‌ನ ಕೌನ್ಸಿಲರ್‌ಗಳು ಸೇರಿದ್ದಾರೆ. ಜುಲೈ 25, 2015 ರಿಂದ ಪ್ರಧಾನ ಕಾರ್ಯದರ್ಶಿ ಮತ್ತು ಹಣಕಾಸು ನಿಯಂತ್ರಕ ಹುದ್ದೆಗಳನ್ನು ಅಲಂಕರಿಸಿದ ನಂತರ ಕಳೆದೆರಡು ವರ್ಷಗಳಿಂದ ಕೆಸಿಎಫ್ ಅಂತರರಾಷ್ಟ್ರೀಯ ಮಂಡಳಿಯ ಅಧ್ಯಕ್ಷನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ನಾನಿಲ್ಲಿ ಸಮಗ್ರ ಸುಧಾರಣಾ ಕಾರ್ಯಕ್ರಮವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರಿಂದ ಈ ಸ್ಥಾನದಲ್ಲಿ ಮುಂದುವರಿಯುತ್ತಿರುವುದು ವಿಶೇಷ ಅನುಭವವನ್ನು ನೀಡುತ್ತಿದೆ. ಸಂಸ್ಥೆಯನ್ನು ಶಕ್ತಿಯುತಗೊಳಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸುತಿದ್ದೇನೆ. ಕೆಸಿಎಫ್ ಸಾಂಪ್ರದಾಯಿಕವಾಗಿ ಸಾಮಾಜಿಕ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನನ್ನ ಕರ್ತವ್ಯವನ್ನು ಇನ್ನಷ್ಟು ಬಲಪಡಿಸಲು ಸಹಾಯ ಮಾಡಿದೆ.

ಸಮುದಾಯ ಸಬಲೀಕರಣ ಮತ್ತು ಸಮಾನತೆ, ಸಹಿಷ್ಣುತೆ ಮತ್ತು ಮಾನವ ಘನತೆಯ ಸಾರ್ವತ್ರಿಕ ಮೌಲ್ಯಗಳಲ್ಲಿ ಬಲವಾದ ನಂಬಿಕೆಯುಳ್ಳವನಾಗಿರುವ ನಾನು ಕೆಸಿಎಫ್ ಮೂಲಕ ಜನರಿಗೆ ಹತ್ತಿರವಾಗುವಲ್ಲಿ ಯಶಸ್ವಿಯಾಗಿದ್ದೇನೆ ಮತ್ತು ಆ ಮೂಲಕ ಸಂಸ್ಥೆಯ ಬಗ್ಗೆ ಸಾರ್ವಜನಿಕ ವಿಶ್ವಾಸವನ್ನು ಸ್ಥಾಪಿಸಿದ್ದೇನೆ. COVID-19 ಲಾಕ್‌ಡೌನ್ ಅವಧಿಯಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸುವ ಮೂಲಕ, ಅಸಹಾಯಕ ಜನರಿಗೆ ಆಯಾ ದೇಶಗಳಲ್ಲಿ ಆಹಾರ ಕಿಟ್‌ಗಳು, ಔಷಧಿಗಳ ಪೂರೈಕೆ ಇತ್ಯಾದಿ ಜೀವ ಕಾರುಣ್ಯ ಸೇವೆಗಳನ್ನು ಕೆಸಿಎಫ್ ಮಾಡಿವೆ. ಕೋವಿಡ್-19 ಲಾಕ್ ಡೌನ್ ನಿಂದ ವಿವಿಧ ದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿದ್ದ ಕರ್ನಾಟಕದ ಜನರಿಗೆ ಕೆಸಿಎಫ್ ವತಿಯಿಂದ ವಿಶೇಷ ವಿಮಾನ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ‘ನಾರ್ತ್ ಕರ್ನಾಟಕ ಮಿಷನ್’ ಯೋಜನೆಗೆ ಬೆನ್ನೆಲುಬಾಗಿ ಕೆಸಿಎಫ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ, ಕೆಸಿಎಫ್‌ನ ಇತರೆ ವಿಶೇಷ ಯೋಜನೆಗಳಾದ ಅಸ್ಸುಫ್ಫಾ (ಇಸ್ಲಾಮಿಕ್ ಅಧ್ಯಯನ ತರಗತಿ), ಉದ್ಯೋಗ ಕೌಶಲ್ಯ ಅಭಿವೃದ್ಧಿ ತರಗತಿ, ಕೆಸಿಎಫ್ ಸದಸ್ಯರ ಸಾಂತ್ವನ ಫಂಡ್, ಅತಿಹೆಚ್ಚು ಪ್ರಶಂಸೆಗೊಳಗಾದ ಹಜ್ ಸ್ವಯಂಸೇವಕ ತಂಡ (HVC), ವಿದೇಶದಲ್ಲೂ ಕನ್ನಡದ ಕಂಪನ್ನು ಪಸರಿಸಿದ ಯುಎಇ ರಾಷ್ಟ್ರದ ಮೊದಲ ಕನ್ನಡ ಪತ್ರಿಕೆ ಗಲ್ಫ್ ಇಶಾರ ಹೀಗೆ ಹತ್ತು ಹಲವು ವಿಶಿಷ್ಟ ಯೋಜನೆಗಳೊಂದಿಗೆ ಕೆಸಿಎಫ್ ಮುನ್ನುಗ್ಗುತ್ತಿದೆ. ಆ ಮೂಲಕ ಶಿಕ್ಷಣ, ಧಾರ್ಮಿಕ ಜಾಗೃತಿ ಮುಂತಾದವುಗಳ ಮೂಲಕ ಸಮಾಜದ, ಸಮುದಾಯದ ಅಭಿವೃದ್ಧಿಯನ್ನು ಕೆಸಿಎಫ್ ಕೇಂದ್ರೀಕರಿಸುತ್ತಿದೆ.

ಈ ಮಧ್ಯೆ, ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ “ಸ್ವಾವಲಂಬಿಯಾಗಲು ಮತ್ತು ಸ್ವಾವಲಂಬಿಗಳಾಗಿರಲು” ರಚಿಸಲಾದ ಬಿಲ್ಡಪ್ ಕಾಸರಗೋಡಿನ (Buildup Kasaragod) ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.

5. ಯುವಜನರು ಮೈಗೂಡಿಸಿಕೊಳ್ಳಬೇಕಾದ ಸಾಂಘಿಕ ನಡವಳಿಕೆಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಬಹುದೇ?

– ಸಂಘಟನೆಗಳು ಇಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಜನರ ಸಕಾರಾತ್ಮಕ, ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸಲು ಅಸ್ತಿತ್ವದಲ್ಲಿದೆ. ಯುವ ಜನತೆಯ ಸಾಮಾಜಿಕ ಏಕೀಕರಣ, ಸವಾಲುಗಳು, ಅನುಭವಗಳು ಸಂಘಟನೆಯ ಧ್ಯೇಯವಾಗಿರಬೇಕು. ಅನೈತಿಕ ಚಟುವಟಿಕೆಗಳಿಂದ ಯುವಜನರನ್ನು ದೂರವಿರಿಸಿ ಯುವ ಸಮೂಹದ ಸಬಲೀಕರಣವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಬಹುದು ಮತ್ತು ಅವರ ಜೀವನವನ್ನು ತಮ್ಮ ಕಾಲ ಮೇಲೆ ನಿಲ್ಲಿಸುವ ಬಗ್ಗೆ ಉಸ್ತುವಾರಿ ವಹಿಸಲು ಅವರನ್ನು ಪ್ರೋತ್ಸಾಹಿಸಬೇಕು. ಉದಾತ್ತ ಮಾನವೀಯ ಮೌಲ್ಯಗಳ ಅಡಿಯಲ್ಲಿ ನಿರಂತರ ಮೌಲ್ಯಾಧಾರಿತ ತರಬೇತಿ ಮತ್ತು ಜಾಗೃತಿಯನ್ನು ಒದಗಿಸುವುದರ ಮೂಲಕ ಯುವಕರನ್ನು ಸಂಪೂರ್ಣ ಸಮರ್ಥರಾಗಿರಾಗಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆಯು ತನ್ನನ್ನು ಸಜ್ಜುಗೊಳಿಸಬೇಕಾಗಿದೆ.

6. ನೀವು ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ ನೀಡುತ್ತಿರುವಿರಿ ಎಂದು ಕೇಳಲ್ಪಟ್ಟೆವು, ಈ ತರಬೇತಿಯಲ್ಲಿ ಭಾಗವಹಿಸುವವರು ತಮ್ಮ ಜೀವನ ಶೈಲಿಯ ಬದಲಾವಣೆಗಳನ್ನು ಹೇಗೆ ನಿರೀಕ್ಷಿಸುತ್ತಾರೆ?

– ಹೌದು, ಇಲ್ಲಿಯವರೆಗೆ, ನಾನು ವ್ಯಕ್ತಿತ್ವ ವಿಕಸನ, ನಾಯಕತ್ವ ಕೌಶಲ್ಯಗಳು, ಯಶಸ್ವಿ ಜೀವನ ಇತ್ಯಾದಿಗಳ ಬಗ್ಗೆ ಹಲವಾರು ಪ್ರೇರಕ ಉಪನ್ಯಾಸಗಳನ್ನು ನೀಡಿದ್ದೇನೆ, ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಯುವಕರಿಗೆ ವಿವಿಧ ತರಗತಿಗಳನ್ನು ನೀಡಿದ್ದೇನೆ. ವೈಯುಕ್ತಿಕ ಪ್ರಯತ್ನಗಳು ಮತ್ತು ಇತರ ಪ್ರೇರಕ ಸಿದ್ಧಾಂತಗಳ ಮೇಲಿನ ಸಂಶೋಧನೆಯು ವ್ಯಕ್ತಿತ್ವದ ಬಗ್ಗೆ ದೃಷ್ಟಿಕೋನವನ್ನು ಒದಗಿಸುತ್ತದೆ, ಇದು ಬಾಲ್ಯದಲ್ಲಿ ಸ್ವ-ಬಲವರ್ಧನೆ ಮತ್ತು ಹೆಚ್ಚು ಅಥವಾ ಕಡಿಮೆ ಸ್ಥಿರ ಗುರಿಗಳ ಅಭಿವ್ಯಕ್ತಿಯೊಂದಿಗೆ ಮಾನಸಿಕವಾಗಿ ಪ್ರೇರೇಪಿಸುತ್ತದೆ. ಸತತ ತರಬೇತಿಯು ವ್ಯಕ್ತಿಯ ವರ್ತನೆ ಮತ್ತು ಆಲೋಚನಾ ಕ್ರಮವನ್ನು ಬದಲಾಯಿಸುವಂತೆ ಒತ್ತಾಯಿಸುತ್ತದೆ.

7. ಪ್ರತಿ ಸಂಸ್ಥೆಗಳೊಂದಿಗೆ ನಿಮ್ಮ ಒಡನಾಟದ ಬಗ್ಗೆ ನಮಗೆ ಹೆಮ್ಮೆ ಇದೆ, ಸಂಸ್ಥೆಗಳೊಂದಿಗೆ ನಿಮ್ಮ ಬಾಂಧವ್ಯಕ್ಕೆ ಪ್ರೇರಕ ಅಂಶಗಳು ನಮಗೆ ತಿಳಿಸಬಹುದೇ?

– ಪ್ರವಾದಿ ಮುಹಮ್ಮದ್ ಪೈಗಂಬರ್ ಸ.ಅ ರವರ ಅನುಯಾಯಿಯಾಗಿ, ಇಸ್ಲಾಂ ಧರ್ಮದ ಸಾಂಪ್ರದಾಯಿಕ ಪರಂಪರೆಯಿಂದ ನನ್ನ ಇಡೀ ಕುಟುಂಬ ಅವಲಂಬಿತವಾಗಿದೆ. ನಾನು ಸಹಿಷ್ಣುತೆ ಮತ್ತು ಸಮಾನತೆಯ ವಾತಾವರಣದಲ್ಲಿ ಹುಟ್ಟಿ ಬೆಳೆದಿದ್ದೇನೆ. ಧಾರ್ಮಿಕ ಶಾಲೆಯಲ್ಲಿ ನನ್ನ ಇಸ್ಲಾಮಿಕ್ ಶಿಕ್ಷಣವನ್ನು ನೈಜವಾದ ಮೌಲ್ಯಾಧಾರಿತ ಸ್ವರೂಪದಲ್ಲಿ ಪಡೆದುಕೊಂಡಿದ್ದೇನೆ. ನನ್ನ ಕಾಲೇಜು ದಿನಗಳಲ್ಲಿ ನಾನು ಯುವ ಸೇವಾ ಮತ್ತು ಕ್ರೀಡಾ ಇಲಾಖೆ ನಡೆಸುವ ಭಾರತೀಯ ಸರ್ಕಾರ ಪ್ರಾಯೋಜಿತ ಸಾರ್ವಜನಿಕ ಸೇವಾ ಕಾರ್ಯಕ್ರಮವಾದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯ ತೊಡಗಿಸಿಕೊಂಡಿದ್ದೆ ಮತ್ತು ನಾಯಕತ್ವವನ್ನೂ ಕೂಡ ನಿಭಾಯಿಸಿದ್ದೇನೆ. ಈ ಯೋಜನೆಯಡಿಯಲ್ಲಿನ ಸೇವೆಗಳು ನನ್ನನ್ನು ಸಾಮಾಜಿಕ ಕಾರ್ಯಗಳು ಮತ್ತು ಸಾಂಸ್ಥಿಕ ಚಟುವಟಿಕೆಗಳೊಂದಿಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿತು.

8. ಕೆಸಿಎಫ್ ತನ್ನ 8ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ, ಯಾವೆಲ್ಲಾ ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ?

– ಹೌದು, 2021 ಫೆಬ್ರವರಿ 15ಕ್ಕೆ ಕೆಸಿಎಫ್ ತನ್ನ ಸಾರ್ಥಕ 8 ವರ್ಷಗಳನ್ನು ಪೂರೈಸುತ್ತಿದೆ. ಮುಂಬರುವ ದಿನಗಳಲ್ಲಿ ಕೆಸಿಎಫ್ ಹಲವಾರು ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಯೋಜನೆಗಳನ್ನು ರೂಪಿಸಿಕೊಂಡಿದೆ. ಕೇವಲ ಒಂದು ಸಮುದಾಯದಕ್ಕೆ ಮಾತ್ರ ಸೀಮಿತಗೊಳ್ಳದೆ ಹಿಂದುಳಿದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸ್ವಯಂ-ಸುಸ್ಥಿರ ಸಣ್ಣ ಪ್ರಮಾಣದ ವ್ಯಾಪಾರ ನೆರವು ನೀಡುವ ಮೂಲಕ ಸಮುದಾಯ ಉನ್ನತಿ, ಸಮುದಾಯ ಕಲ್ಯಾಣ ಚಟುವಟಿಕೆಗಳಿಗಾಗಿ ಕೌಶಲ್ಯ ಕಾರ್ಯಕ್ರಮ, ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ, ವಾರದ ಆತಿಥ್ಯ ಸಭೆ, ಚಾರಿಟಿ ಮೀಟ್ ಮತ್ತು ವೃದ್ಧಾಪ್ಯ ಸೇವೆ ಮುಂತಾದ ಯೋಜನೆಗಳನ್ನು ಕೆಸಿಎಫ್ ರೂಪಿಸಿಕೊಂಡಿದೆ. ಅದಕ್ಕಾಗಿ ಕೆಸಿಎಫ್ ಸ್ವಯಂಸೇವಕ ವಿಂಗ್ ರಚನೆಯಾಗಿದೆ. ಇದಲ್ಲದೆ, ಉನ್ನತ ಶಿಕ್ಷಣ ಸಂಸ್ಥೆಗಳು, ಸಮುದಾಯ ಕೇಂದ್ರ, ಮುದ್ರಣ ಮತ್ತು ಪ್ರಕಾಶನ ಭವನ, ಮದುವೆ ಬ್ಯೂರೋ, ಬಹುಭಾಷಾ ವೆಬ್‌ಸೈಟ್ ಮುಂತಾದ ಪ್ರಮುಖ ಯೋಜನೆಗಳನ್ನು ಅಳವಡಿಸಿಕೊಳ್ಳಲು ಕೆಸಿಎಫ್ ಉದ್ದೇಶಿಸಿದೆ.

9. ಯುವ ಪೀಳಿಗೆಗೆ ನಿಮ್ಮ ಕಿವಿಮಾತೇನು?

ಜಗತ್ತು ಹಿಂದೆಂದೂ ಕಂಡು ಕೇಳರಿಯದ ಸಂಕಷ್ಟದ ದುರಂತ ಕಾಲದಲ್ಲಿ ಸಾಗುತ್ತಿದೆ. ವಿಪರ್ಯಾಸವೆಂದರೆ ಇಂದಿನ ಯುವ ಪೀಳಿಗೆ ಸ್ವಾರ್ಥಿಗಳಾಗುತಿದ್ದಾರೆ, ತಮ್ಮತನವನ್ನು ಹೊರತುಪಡಿಸಿ ಇನ್ನೇನನ್ನೂ ಯೋಚಿಸುವುದಿಲ್ಲ. ಅವರಿಗೆ ಪೋಷಕರು ಅಥವಾ ಹಿರಿಯರ ಬಗ್ಗೆ ಗೌರವವಿಲ್ಲ. ಸಂಯಮ ಏನೆಂದರೆ ತಿಳಿದಿಲ್ಲ ಅಸಹನೆ ಅವರ ಅಸ್ತ್ರವಾಗಿದೆ. ತಾವು ಎಲ್ಲವನ್ನೂ ತಿಳಿದಿರುವ ಮೇಧಾವಿಗಳಂತೆ ವರ್ತಿಸುತ್ತಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.
ಪ್ರವಾದಿ ಮುಹಮ್ಮದ್ ಸ.ಅ ಹೇಳುತ್ತಾರೆ ‘ನಾಳೆ ಮಹ್‌ಶರಾ ದಿನದಂದು ಏಳು ಗುಂಪುಗಳ ಜನರು ಅಲ್ಲಾಹನು ಒದಗಿಸಿದ ವಿಶೇಷ ನೆರಳಿನಲ್ಲಿ ಅಭಯವನ್ನು ಪಡೆಯುತ್ತಾರೆ, ಅದರಲ್ಲಿ ಎರಡನೆಯ ಗುಂಪು ಸರ್ವಶಕ್ತನಾದ ಅಲ್ಲಾಹನನ್ನು ಆರಾಧಿಸುತ್ತಾ ಬೆಳೆದ ಸಜ್ಜನ ಯುವಕರಾಗಿದ್ದಾರೆ.

ಯುವ ಸಮೂಹಕ್ಕೆ ನನ್ನ ಸಲಹೆ ಹೀಗಿದೆ:

  • – ಸಕಾರಾತ್ಮಕ ವರ್ತನೆ, ಬೇಷರತ್ತಾದ ಪ್ರೀತಿ, ಕ್ಷಮೆ ಮತ್ತು ಕೃತಜ್ಞತೆಯಿಂದ ನಿಮ್ಮನ್ನು ಪರಿವರ್ತಿಸಿಕೊಳ್ಳಿ.
  • – ಶಾಂತಿ, ಸಾಮರಸ್ಯ, ಆರೋಗ್ಯ, ಭರವಸೆ ಮತ್ತು ಪ್ರಾರ್ಥನೆಯ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ವಿಶಾಲಗೊಳಿಸಿ.
  • – ಲಭ್ಯವಿರುವ ಸಂಪನ್ಮೂಲದಲ್ಲಿ ಸಂತೋಷವನ್ನು ಕಂಡುಕೊಳ್ಳಿ, ಪೋಷಕರನ್ನು ಗೌರವಿಸಿ ಮತ್ತು ನಿಮ್ಮ ಕುಟುಂಬಕ್ಕೆ ಆನಂದದಾಯಕ ಜೀವನವನ್ನು ನೀಡಿ.
  • – ಕೊನೆಯದಾಗಿ ಗಾಸಿಪ್‌ಗಳು / ವದಂತಿಗಳನ್ನು ಹರಡುವ ಮೂಲಕ ನಿಮ್ಮ ಅಮೂಲ್ಯ ಸಮಯವನ್ನು ಕಳೆಯಬೇಡಿ.

error: Content is protected !! Not allowed copy content from janadhvani.com