ದುಬೈ: ಯುಎಇಯಲ್ಲಿ ಅವಧಿ ಮೀರಿದ ವಿಸಿಟಿಂಗ್ ವೀಸಾಗಳನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ಅವಧಿ ಮೀರಿದ ವೀಸಾಗಳನ್ನು ಇಮಿಗ್ರೇಷನ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಲಾಗಿದ್ದು, ವಿಸ್ತರಿಸಿರುವುದಾಗಿ ಕಂಡುಬಂದಿದೆ.ಡಿಸೆಂಬರ್‌ನಲ್ಲಿ ವೀಸಾ ಅವಧಿ ಮುಗಿದವರಿಗೂ ವಿಸ್ತರಿಸಲಾಗಿದೆ. ಆದರೆ,ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಲಭ್ಯವಾಗಿಲ್ಲ.
ವಿಸ್ತರಣೆಯು ಯುಎಇಯಲ್ಲಿ ಸಿಲುಕಿರುವ ವಲಸಿಗರಿಗೆ ವರದಾನವಾಗಿ ಪರಿಣಮಿಸಲಿದೆ. ವೀಸಾ ಅವಧಿ ಮುಗಿದ ನಂತರವೂ ಅನೇಕರು ಇಲ್ಲಿಯೇ ಉಳಿದಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ವೀಸಾ ಅವಧಿ ಮುಗಿಯುವವರೂ ಇದ್ದಾರೆ.ಯುಎಇ ಅನುಮತಿಸಿದ ಗಡುವಿನ ಬಳಿಕ ಯುಎಇಯಲ್ಲಿ ಉಳಿದಲ್ಲಿ, ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ.
ಯುಎಇ ಮೂಲಕ ಸೌದಿಗೆ ತೆರಳಲು ಆಗಮಿಸಿದ ವಲಸಿಗರು ಸೌದಿ ಅರೇಬಿಯಾದ ಪ್ರಯಾಣ ನಿಷೇಧ ತೆರವುಗೊಳ್ಳುವ ನಿರೀಕ್ಷೆಯಲ್ಲಿ ಎಷ್ಟು ದಿನ ಎಂದು ತಿಳಿಯದೆ ಯುಎಇಯಲ್ಲೇ ಉಳಿದಿದ್ದಾರೆ. ವೀಸಾ ನವೀಕರಣಕ್ಕಾಗಿ ಸುಮಾರು 1,000 ದಿರ್ಹಮ್ ವೆಚ್ಚವಾಗಲಿದೆ.ಅನ್ನ ಆಹಾರಕ್ಕೂ ಕಷ್ಟಪಡುತ್ತಿರುವ ವಲಸಿಗರ ಪಾಲಿಗೆ ಶುಭ ಸುದ್ದಿಯಾಗಿದೆ ಉಚಿತ ವಿಸಾ ವಿಸ್ತರಣೆ. ಇದು ಅಧಿಕೃತವಾಗಿ ಪ್ರಕಟಗೊಂಡಲ್ಲಿ ವಲಸಿಗರಿಗೆ ವರದಾನವಾಗಲಿದೆ.