ರಿಯಾದ್,ಫೆ.4:ಸೌದಿ ಅರೇಬಿಯಾದಲ್ಲಿ ಕೊರೋನವೈರಸ್ ಹರಡುವುದನ್ನು ತಡೆಗಟ್ಟುವ ಭಾಗವಾಗಿ ಮುಂದಿನ 10 ದಿನಗಳವರೆಗೆ ಎಲ್ಲಾ ವಿಧ ಮನರಂಜನಾ ಕಾರ್ಯಕ್ರಮಗಳನ್ನು ನಿಶೇಧಿಸಲಾಗಿದೆ ಎಂದು ಸೌದಿ ಪತ್ರಿಕಾ ಸಂಸ್ಥೆ ಗುರುವಾರ ಮುಂಜಾನೆ ವರದಿ ಮಾಡಿದೆ. ಇದು ಫೆ. 4ರಂದು ರಾತ್ರಿ 10 ರಿಂದ ಜಾರಿಗೆ ಬರಲಿದೆ.
ವಿಶ್ವದ ಕೆಲವು ದೇಶಗಳಲ್ಲಿ ಹರಡಿರುವ ಎರಡನೇ ಹಂತದ ಕೊರೋನಾ ಸೌದಿಯಲ್ಲಿ ಹರಡುವುದನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ನಿಷೇಧಿಸಲಾದ ಕಾರ್ಯಕ್ರಮಗಳು ಈ ಕೆಳಗಿನಂತಿವೆ:
1. ಎಲ್ಲಾ ವಿಧ ಕಾರ್ಯಕ್ರಮಗಳು ಮತ್ತು ಔತಣಕೂಟ ನಿಷೇಧ ( ಸಭಾಂಗಣ, ಸ್ವತಂತ್ರ ವಿವಾಹ ಸಭಾಂಗಣ, ಹೋಟೆಲ್ ಹಾಲ್‌ಗಳು ಅದೇ ರೀತಿ ಇಂತಹಾ ಉದ್ದೇಶಗಳಿಗಾಗಿ ಬಳಸಲಾಗುವ ಬಾಡಿಗೆ ವಿಶ್ರಾಂತಿ ಗೃಹಗಳು ಮತ್ತು ಕ್ಯಾಂಪ್ ಗಳಲ್ಲಿ ಮದುವೆಗಳು, ಸಾಂಸ್ಥಿಕ ಸಭೆಗಳು ಮತ್ತು ಔತಣಕೂಟಕ್ಕೆ 30 ದಿನಗಳವರೆಗೆ ತಡೆ, ವಿಸ್ತರಣೆ ಸಾಧ್ಯತೆಯಿದೆ)
2. ವಿಸ್ತರಿಸಬಹುದಾದ 10 ದಿನಗಳ ಅವಧಿಗೆ ಸಾಮಾಜಿಕ ಸಮಾರಂಭಗಳಲ್ಲಿ 20 ಜನರನ್ನು ಮೀರಬಾರದು.
3. ವಿಸ್ತರಿಸಬಹುದಾದ 10 ದಿನಗಳ ಅವಧಿಗೆ ಎಲ್ಲಾ ಮನರಂಜನಾ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳು ನಿಷೇಧ.
4. ಚಿತ್ರಮಂದಿರಗಳು, ಒಳಾಂಗಣ ಮನರಂಜನಾ ಕೇಂದ್ರಗಳು, ರೆಸ್ಟೋರೆಂಟ್, ಶಾಪಿಂಗ್ ಮಾಲ್ ಮತ್ತು ಜಿಮ್‌ಗಳಲ್ಲಿರುವ ಸ್ವತಂತ್ರ ಒಳಾಂಗಣ ಆಟಗಳ ಸ್ಥಳಗಳು ಮತ್ತು ಕ್ರೀಡಾ ಕೇಂದ್ರಗಳು 10 ದಿನಗಳ ಅವಧಿಗೆ ಮುಚ್ಚಲಾಗುವುದು. ವಿಸ್ತರಣೆ ಸಾಧ್ಯತೆಯಿದೆ.
5: ವಿಸ್ತರಿಸಬಹುದಾದ 10 ದಿನಗಳ ಅವಧಿಗೆ ರೆಸ್ಟೋರೆಂಟ್, ಕೆಫೆ ಮುಂತಾದವುಗಳಲ್ಲಿ ಆಹಾರ ಸೇವೆಗಳನ್ನು ಸ್ಥಗಿತಗೊಳಿಸಿ, ಪಾರ್ಸಲ್ ಸೇವೆಗಳಿಗೆ ಸೀಮಿತಗೊಳಿಸುವುದು.
ಇದನ್ನು ಉಲ್ಲಂಘಿಸುವ ಸ್ಥಾಪನೆಯನ್ನು ನಗರಸಭೆ, ಗ್ರಾಮೀಣ ವ್ಯವಹಾರ ಮತ್ತು ವಸತಿ ಸಚಿವಾಲಯವು 24 ಗಂಟೆಗಳ ಕಾಲ ಮುಚ್ಚಲಿದೆ, ಮತ್ತು ಮೊದಲ ಬಾರಿಗೆ ಉಲ್ಲಂಘನೆ ಪುನರಾವರ್ತನೆಯಾದರೆ 48 ಗಂಟೆಗಳು, ಉಲ್ಲಂಘನೆಯನ್ನು ಎರಡನೇ ಬಾರಿಗೆ ಪುನರಾವರ್ತಿಸಿದರೆ ಒಂದು ವಾರ,ಮೂರನೆಯ ಬಾರಿಯ ಉಲ್ಲಂಘನೆ ಪುನರಾವರ್ತನೆಗೆ ಎರಡು ವಾರಗಳು ಮತ್ತು ಉಲ್ಲಂಘನೆಯನ್ನು ನಾಲ್ಕನೇ ಬಾರಿಗೆ ಪುನರಾವರ್ತಿಸಿದರೆ ಒಂದು ತಿಂಗಳು ಸ್ಥಾಪನೆಯನ್ನು ಮುಚ್ಚಿಡಲಾಗುವುದು.