ಅಬುಧಾಬಿ: ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ತನ್ನ ವೀಸಾ ನೀತಿಯಲ್ಲಿ ತಿದ್ದುಪಡಿ ಮಾಡಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪೌರತ್ವ ನೀಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಖ್ತೂಂ ಈ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಭಾರತ ಮತ್ತು ಇತರ ದೇಶಗಳ ವೃತ್ತಿಪರರಿಗೆ ಅನುಕೂಲವಾಗಲಿದೆ.
ಎಮಿರೇಟ್ಸ್ ಪಾಸ್ಪೋರ್ಟ್ಗಾಗಿ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
1- ಹೂಡಿಕೆದಾರರು
ಅವರು ಯುಎಇಯಲ್ಲಿ ಭೂಮಿ (ಆಸ್ತಿ) ಹೊಂದಿರಬೇಕು.
2- ವೈದ್ಯರು ಮತ್ತು ತಜ್ಞರು
ವಿಜ್ಞಾನದಲ್ಲಿ ಅಥವಾ ಯುಎಇಯಲ್ಲಿ ಹೆಚ್ಚು ಬೇಡಿಕೆಯಿರುವ ವಿಷಯದಲ್ಲಿ ಪರಿಣತಿ ಹೊಂದಿರಬೇಕು. ಕ್ಷೇತ್ರದಲ್ಲಿ ಕನಿಷ್ಠ ಹತ್ತು ವರ್ಷಗಳ ಅನುಭವ ಹೊಂದಿರಬೇಕು, ವೈಜ್ಞಾನಿಕ ಕೊಡುಗೆಗಳನ್ನು ಮತ್ತು ವೈಜ್ಞಾನಿಕ ಮೌಲ್ಯದ ಅಧ್ಯಯನಗಳನ್ನು ಹೊಂದಿರಬೇಕು. ವಿಶೇಷ ವೈದ್ಯಕೀಯ ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವ ಯಾವುದೇ ಸಂಘಟನೆಯಲ್ಲಿ ಸದಸ್ಯರಾಗಿರಬೇಕು.
3- ವಿಜ್ಞಾನಿಗಳು
ವಿಶ್ವವಿದ್ಯಾಲಯಗಳು ಅಥವಾ ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವ ಸಕ್ರಿಯ ಸಂಶೋಧಕ / ಸಂಶೋಧಕಿಯಾಗಿರಬೇಕು. ತಮ್ಮ ಕ್ಷೇತ್ರದಲ್ಲಿ ಕನಿಷ್ಠ ಹತ್ತು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ವಿಜ್ಞಾನ ಪ್ರಶಸ್ತಿಗಳು / ಆವಿಷ್ಕಾರಗಳಂತಹ ಕೊಡುಗೆಗಳನ್ನು ಹೊಂದಿರಬೇಕು. ಯುಎಇಯ ಮಾನ್ಯತೆ ಪಡೆದ ವೈಜ್ಞಾನಿಕ ಸಂಸ್ಥೆಗಳಿಂದ ಶಿಫಾರಸುಗಳು ಸಹ ಕಡ್ಡಾಯವಾಗಿದೆ.
4- ಸಂಶೋಧಕರು
ಯುಎಇ ಹಣಕಾಸು ಸಚಿವಾಲಯ ಅಥವಾ ಇನ್ನಾವುದೇ ಶ್ರೇಷ್ಠ ಅಂತಾರಾಷ್ಟ್ರೀಯ ಸಂಸ್ಥೆ ಅನುಮೋದಿಸಿರುವ ಒಂದು ಅಥವಾ ಹೆಚ್ಚಿನ ಪೇಟೆಂಟ್‌ಗಳನ್ನು ಹೊಂದಿರುವವರು. ಇದರೊಂದಿಗೆ ಹಣಕಾಸು ಸಚಿವಾಲಯದ ಶಿಫಾರಸನ್ನು ಹೊಂದಿರಬೇಕು.
5- ಸೃಜನಶೀಲ ಪ್ರತಿಭೆಗಳು
ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಕೆಲಸ ಮಾಡುವ ಬುದ್ಧಿಜೀವಿಗಳು ಮತ್ತು ಕಲಾವಿದರು. ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು. ಸಂಬಂಧಪಟ್ಟ ಸರ್ಕಾರಿ ಇಲಾಖೆಯಿಂದ ಶಿಫಾರಸು ಕಡ್ಡಾಯವಾಗಿದೆ.
ಒಬ್ಬ ವ್ಯಕ್ತಿಯು ಪೌರತ್ವಕ್ಕೆ ಅರ್ಹನಾಗಿದ್ದರೆ, ಅವನು ಎಮಿರೇಟ್ಸ್ ನಿಯಮಗಳನ್ನು ಪಾಲಿಸುವ ದೃಢೀಕರಣ ಪತ್ರವನ್ನು ನೀಡಬೇಕು. ಮಾನದಂಡಗಳನ್ನು ಉಲ್ಲಂಘಿಸಿದರೆ ಪೌರತ್ವವನ್ನು ಹಿಂತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆ.ತನ್ನ ದೇಶದ ಪೌರತ್ವವನ್ನು ಕಳೆದುಕೊಳ್ಳದೆ ಯುಎಇ ಪೌರತ್ವವನ್ನು ಪಡೆಯಬಹುದು ಎಂಬುದು ಹೊಸ ನಿರ್ಧಾರದ ವೈಶಿಷ್ಟ್ಯ.
1971ರಲ್ಲಿ ಈ ದೇಶ ನಿರ್ಮಾಣವಾಗಲು ಶ್ರಮಿಸಿದ ಪ್ಯಾಲಸ್ತೀನ್ ಪ್ರಜೆಗಳಿಗೆ ಈ ಹಿಂದೆಯೇ ಪೌರತ್ವ ನೀಡಲಾಗಿದೆ. ಇದೀಗ ದೇಶದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ಹೊಸತಾಗಿ ಪೌರತ್ವ ನೀಡುವ ಗುರಿ ಹೊಂದಿದೆ. ಸದ್ಯ ಆ ದೇಶದಲ್ಲಿ 90 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಇದರಲ್ಲಿ ಶೇ.10ರಷ್ಟು ಮಂದಿ ಮಾತ್ರ ಆ ದೇಶದ ಪೌರತ್ವ ಹೊಂದಿದ್ದಾರೆ.