ಮಂಗಳೂರು: ಕರ್ತವ್ಯ ನಿರತ ಮಂಗಳೂರು ಸಿಸಿಬಿ ಪೊಲೀಸರು ನಗರದ ಹೊರವಲಯದ ಕುತ್ತಾರಿನ ಬಾರ್ ಒಂದರಲ್ಲಿ ಆರೋಪಿಯೊಂದಿಗೆ ಪಾರ್ಟಿ ನಡೆಸಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಸೂಕ್ತ ತನಿಖೆಗೆ ಮಂಗಳೂರು ಪೋಲೀಸ್ ಕಮಿಷನರ್ ಶಶಿಕುಮಾರ್ ಆದೇಶ ನೀಡಿದ್ದಾರೆ.
ಮಂಗಳೂರು ಸಿಸಿಬಿಯ 8 ಮಂದಿ ಪೋಲೀಸ್ ಸಿಬ್ಬಂದಿಗಳು ಮಂಗಳೂರು ಹೊರವಲಯದ ಕುತ್ತಾರಿನ ಬಾರ್ ಸಮೀಪದ ಬಸ್ ನಿಲ್ದಾಣದ ಬಳಿ ತಮ್ಮ ಕರ್ತವ್ಯ ನಿರತ ಟಿ ಟಿ ವಾಹನವನ್ನು ನಿಲ್ಲಿಸಿ, ಪ್ರಮುಖ ಆರೋಪಿಯೊಂದಿಗೆ ಪಾರ್ಟಿ ನಡೆಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು,ಇಂತಹ ಲಜ್ಜೆಗೆಟ್ಟ ಪೊಲೀಸರು ಸಿಸಿಬಿ ಯಂತಹ ಉನ್ನತ ಮಟ್ಟದ ತನಿಖಾ ಸಂಸ್ಥೆಯಲ್ಲಿ ಮುಂದುವರೆಯುವುದು ಎಷ್ಟು ಸೂಕ್ತ ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.
ರೌಡಿಗಳು,ಅಕ್ರಮಿಗಳ ಹೆಡೆ ಮುರಿ ಕಟ್ಟಬೇಕಾದ ಸಿಸಿಬಿ ಪೊಲೀಸರೇ ಅಕ್ರಮಿಗಳ ಜೊತೆ ಸೇರಿ ಈ ರೀತಿ ಪಾರ್ಟಿ ಮಾಡೋದಾದರೆ ಜನಸಾಮಾನ್ಯರಿಗೆ ಇವರಿಂದ ನ್ಯಾಯ ಮರೀಚಿಕೆಯ ವಿಷಯವೇ ಆಗಿದೆ. ಈ ಬಗ್ಗೆ ನೂತನ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಅವರ ಗಮನಕ್ಕೆ ತರಲಾಗಿದ್ದು,ಪೋಲೀಸ್ ಆಯುಕ್ತರು ತನಿಖೆಗೆ ಆದೇಶ ನೀಡಿದ್ದಾರೆ. ಇಂತಹ ಲಜ್ಜೆಗೆಟ್ಟ ಸಿಸಿಬಿ ಸಿಬ್ಬಂದಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಷ್ಟೆ.