janadhvani

Kannada Online News Paper

ಬಸ್ ನಲ್ಲಿ ಕಿರುಕುಳ: ಯುವತಿಯ ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್

ಮಂಗಳೂರು: ಯುವತಿಯೋರ್ವರು ತಾನು ಪ್ರಯಾಣಿಸುತ್ತಿದ್ದ ಬಸ್‌‌ನಲ್ಲಿ ತನಗಾದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆ.ಎಸ್‌.ಹೆಗ್ಡೆಯಿಂದ ಖಾಸಗಿ ಬಸ್‌‌ನಲ್ಲಿ ಪಂಪ್‌ವೆಲ್‌‌ಗೆ ಹೋಗುತ್ತಿದ್ದ ಸಂದರ್ಭ ಸಹ ಪ್ರಯಾಣಿಕ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿದ್ದಾರೆ. ಈ ಘಟನೆ ಜ.14ರಂದು ನಡೆದಿದ್ದು, ಈ ಬಗ್ಗೆ ಯುವತಿ ತನ್ನ ಇನ್‌‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ಇದೀಗ ಆ ಪೋಸ್ಟ್‌ ವೈರಲ್‌ ಆಗಿದೆ.

ಇಂದು (14-01-2021)ರಂದು ಮಧ್ಯಾಹ್ನ 3.45ರ ಸುಮಾರಿಗೆ ನಾನು ಮಹೇಶ್‌‌ ಬಸ್‌ನಲ್ಲಿ ಪಂಪ್‌ವೆಲ್‌ಗೆ ತೆರಳುತ್ತಿದ್ದೆ. ಈ ವೇಳೆ (ಚಿತ್ರದಲ್ಲಿರುವ) ವ್ಯಕ್ತಿ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯ ನಿಲ್ದಾಣದಿಂದ ಬಸ್‌ಗೆ ಹತ್ತಿದ್ದು, ನನ್ನ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದಾನೆ. ಈ ವೇಳೆ ಆತ ಫೋನ್‌ನಲ್ಲಿ ಮಾತನಾಡುವುದರಲ್ಲಿ ನಿರತರಾಗಿರುವಂತೆ ವರ್ತಿಸುತ್ತಿದ್ದನು. ಆದರೆ, ಆತ ಇನ್ನೊಂದು ಕೈಯಲ್ಲಿ ನನ್ನನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದಾನೆ. ಇದರಿಂದ ನಾನು ಸರಿದು ಕುಳಿತೆ. ಆದರೆ, ಆತ ನನ್ನನ್ನು ಸ್ಪರ್ಶಿಸುತ್ತಲೇ ಇದ್ದ. ಈ ವೇಳೆ ನಾನು ಕೂಗಿಕೊಂಡೆ. ಸ್ವಲ್ಪ ಸಮಯದ ಬಳಿಕ ಆತ ಅವನು ನನ್ನಲ್ಲಿ ಕ್ಷಮೆ ಕೇಳಿ ಹಿಂಬದಿಯ ಸೀಟ್‌ನಲ್ಲಿ ಕುಳಿತುಕೊಂಡ.

ಬಳಿಕ ಮೂರು ಸ್ಟಾಪ್‌ ಕಳೆದು ಆತ ಮತ್ತೊಂದು ಬಸ್‌ನಿಂದ ಇಳಿಯುವುದನ್ನು ನೋಡಿದೆ. ಆದರೆ, ಆತ ಮತ್ತೆ ಮಹೇಶ್‌ ಬಸ್‌ಗೆ ಹತ್ತಿ ಪುನಃ ನನ್ನ ಬಳಿ ಬಂದು ಕುಳಿತುಕೊಂಡ. ಅಲ್ಲದೇ, ಪುನಃ ನನ್ನನ್ನು ಸ್ಪರ್ಶಿಸಲು ಆರಂಭಿಸಿದ. ಈ ವೇಳೆ ನಾನು ಆತನಲ್ಲಿ ಪುರುಷರ ಸೀಟ್‌ನಲ್ಲಿ ಕುಳಿತುಕೊಳ್ಳಲು ಹೇಳಿದೆ. ಆದರೆ, ಆತ ನನ್ನ ಮಾತನ್ನು ನಿರಾಕರಿಸಿ ಪುನಃ ಸ್ಪರ್ಶಿಸಲು ಆರಂಭಿಸಿದ. ದುರಾದೃಷ್ಟವೆಂದರೆ, ಈ ರೀತಿ ನಡೆಯುತ್ತಿದ್ದರೂ ಕೂಡಾ ಉಳಿದ ಪ್ರಯಾಣಿಕರು, ನಿರ್ವಾಹಕ, ಚಾಲಕ ನನ್ನನ್ನು ನೋಡುತ್ತಿದ್ದಾರೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಿಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ. ಇದರಿಂದ ಈ ರೀತಿಯಾದ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಎಂದು ಎಚ್ಚರಿಕೆ ನೀಡಿದೆ. ಈ ವೇಳೆ ಆತ ಮಾಸ್ಕ್‌‌ ತೆಗೆದು ಫೋಟೋಗೆ ಪೋಸ್‌ ನೀಡಿ ಧನ್ಯವಾದಗಳು ಎಂದು ಹೇಳಿದ.

ಜಾಗೃತಿ ಮೂಡಿಸುವ ಸಲುವಾಗಿ ನಾನು ಈ ಪೋಸ್ಟ್‌ ಮಾಡಿದ್ದೇನೆ. ಸಾಮಾನ್ಯವಾಗಿ ಕೆಲಸ, ಕಾಲೇಜಿಗೆ ಹೋಗುವ ಸಂದರ್ಭ ಸಾರ್ವಜನಿಕ ಸಾರಿಗೆಯನ್ನು ಬಳಸುವ ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ಈ ರೀತಿಯಾಗಿರಬಹುದು. ಆದರೆ, ಇದು ಇದೇ ಮೊದಲ ಬಾರಿ ಅಲ್ಲ. ದುರಾದೃಷ್ಟವಶಾತ್‌‌, ಶೇ.99ರಷ್ಟು ಮಹಿಳೆಯರಿಗೆ ಈ ರೀತಿಯಾದ ಅನುಭವಿದ್ದರೂ ಕೂಡಾ ತಮ್ಮ ಘನತೆ ಹಾಗೂ ಭವಿಷ್ಯಕ್ಕೆ ಹೆದರಿ ಈ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾವುದೇ ಕಾನೂನು, ಪೊಲೀಸರು, ಯಾರೇ ಆದರೂ ಕೂಡಾ ಬಂದು ನಿಮಗೆ ಸಹಾಯ ಮಾಡುವುದಿಲ್ಲ. ಬದಲಾಗಿ ರಿಯಾಲಿಟಿ ಶೋ ನೋಡುವ ರೀತಿ ನಿಂತು ನೋಡುತ್ತಿರುತ್ತಾರೆ.

ಈ ಪೋಸ್ಟ್‌ ಅನ್ನು ಓದುವ ಮಹಿಳೆಯರು ಅಥವಾ ಪುರುಷರು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಸಾಧ್ಯವಾದಷ್ಟು ಈ ಪೋಸ್ಟ್‌‌ ಅನ್ನು ಶೇರ್‌ ಮಾಡಿ. ಇದರಿಂದ ಈ ರೀತಿಯಾದಲ್ಲಿ ಮಹಿಳೆಯು ಅಥವಾ ಹುಡುಗಿಯರು ಮೌನವಾಗಿರುವ ಬದಲು ಧ್ವನಿ ಎತ್ತುತ್ತಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತೇವೆ- ಪೋಲೀಸ್ ಕಮಿಷನರ್

ಘಟನೆಗೆ ಸಂಬಂಧಪಟ್ಟಂತೆ ಮಾತನಾಡಿದ ನಗರದ ಪೋಲೀಸ್ ಕಮಿಷನರ್ ಶಶಿಕುಮಾರ್, ನಗರದ ಮಹೇಶ್ ಬಸ್ ಅಲ್ಲಿ ನಡೆದ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ಫೋಟೋ ಮತ್ತು ಘಟನೆಯ ಮಾಹಿತಿ ನಮ್ಮ ಗಮನಕ್ಕೆ ಬಂದಿದ್ದು ತಪ್ಪಿತಸ್ಥನ ವಿರುದ್ದ ಅತೀ ಶೀಘ್ರದಲ್ಲಿ ಕ್ರಮವನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.

error: Content is protected !! Not allowed copy content from janadhvani.com