janadhvani

Kannada Online News Paper

ಉದ್ಯಮಿಯ ಮಗಳು ಇಸ್ಲಾಂಗೆ ಮತಾಂತರ: ಲವ್ ಜಿಹಾದ್ ಅಲ್ಲ – ಎನ್ಐಎ

ನವದೆಹಲಿ: ಚೆನ್ನೈ ಮೂಲದ ಉದ್ಯಮಿಯೊಬ್ಬರ ಕುಟುಂಬದ ಯುವತಿ ಇಸ್ಲಾಂಗೆ ಮತಾಂತರವಾಗಿ ಬಾಂಗ್ಲಾದೇಶದ ರಾಜಕೀಯ ನಾಯಕನ ಪುತ್ರನೊಂದಿಗೆ ವಿವಾಹವಾದ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ಐಎ ತನಿಖೆ ಕೈಗೊಂಡಿದ್ದು, ಇದು ಲವ್ ಜಿಹಾದ್ ಎಂಬುದನ್ನು ದೃಢೀಕರಿಸುವ ಯಾವುದೇ ಸಾಕ್ಷ್ಯ ಪತ್ತೆಯಾಗಿಲ್ಲ ಎಂದು ತಿಳಿಸಿದೆ.

ಈ ಮದುವೆಯನ್ನು ಕೆಲವು ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಎಂದು ಆರೋಪಿಸಿದ್ದವು. ಭಾರತದಲ್ಲಿ ಸರ್ಕಾರವಾಗಲೀ, ನ್ಯಾಯಾಲಯವಾಗಲೀ ಇದುವರೆಗೆ ಲವ್ ಜಿಹಾದ್ ಇದೆ ಎಂಬುದನ್ನು ಒಪ್ಪಿಕೊಂಡಿಲ್ಲ.

ಲಂಡನ್‌ನಲ್ಲಿ ಜತೆಗೆ ಓದುತ್ತಿದ್ದ ಈ ಯುವತಿ ಹಾಗೂ ಬಾಂಗ್ಲಾದೇಶದ ರಾಜಕಾರಣಿಯ ಪುತ್ರನ ವಿವಾಹವನ್ನು ಲವ್‌ಜಿಹಾದ್ ಪ್ರಕರಣ ಎಂದು ಹಿಂದುತ್ವ ಸಂಘಟನೆಗಳು ದೂರಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಭಾರತೀಯ ಯುವತಿಯನ್ನು ವಾಟ್ಸ್ಆ್ಯಪ್ ಮೂಲಕ ವಿಚಾರಣೆಗೆ ಗುರಿಪಡಿಸಿತ್ತು.

ಈ ಅಂತರ್ ಧರ್ಮೀಯ ವಿವಾಹ ’ಲವ್‌ ಜಿಹಾದ್’ ಎನ್ನಲು ಯಾವುದೇ ಪುರಾವೆ ತನಿಖೆ ವೇಳೆ ಎನ್‌ಐಎಗೆ ಸಿಕ್ಕಿಲ್ಲ. ಪತಿಯ ಜತೆಗೆ ತಾನು ಸಂತೋಷದಿಂದ ಇದ್ದು, ಸ್ವ-ಇಚ್ಛೆಯಿಂದ ಇಸ್ಲಾಂಗೆ ಮತಾಂತರ ಹೊಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಗಿ ಉನ್ನತ ಮೂಲಗಳು ಹೇಳಿವೆ.

ಬಾಂಗ್ಲಾದೇಶದ ಮಾಜಿ ಸಂಸದ ಹಾಗೂ ಬಿಎನ್‌ಪಿ ನಾಯಕರೊಬ್ಬರ ಪುತ್ರ ತಮ್ಮ ಪುತ್ರಿಯನ್ನು ಲಂಡನ್‌ನಲ್ಲಿ ಅಪಹರಿಸಿದ್ದಾಗಿ ಚೆನ್ನೈ ಮೂಲದ ಉದ್ಯಮಿ ದೂರು ನೀಡಿದ್ದರು. ಆಕೆಯನ್ನು ಬಲವಂತದಿಂದ ಬಾಂಗ್ಲಾದೇಶಕ್ಕೆ ಒಯ್ದು ಇಸ್ಲಾಂಗೆ ಮಾತಾಂತರಿಸಲಾಗಿದೆ ಎಂದು ಆಪಾದಿಸಿದ್ದರು. ಯುವತಿ ಬಾಂಗ್ಲಾದೇಶದ ರಾಜಕಾರಣಿಯ ಪುತ್ರನ ಜತೆ ಲಂಡನ್‌ನಲ್ಲಿ ಅಧ್ಯಯನ ಮಾಡುತ್ತಿದ್ದರು.

ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ಪೊಲೀಸರು ಎನ್‌ಐಎಗೆ ಮನವಿ ಮಾಡಿಕೊಂಡಿದ್ದರು. ಪೋಷಕರ ಹೇಳಿಕೆ ದಾಖಲಿಸಿಕೊಂಡ ಬಳಿಕ ವಾಟ್ಸ್ಆ್ಯಪ್ ಮೂಲಕ ಯುವತಿಯನ್ನು ಎನ್‌ಐಎ ಅಧಿಕಾರಿಗಳು ಪ್ರಶ್ನಿಸಿದ್ದರು.