ನವದೆಹಲಿ,ಡಿ.24:ಟೋಲ್ಗಳಲ್ಲಿ ನಗದು ರಹಿತ ವಹಿವಾಟಿಗೆ ನಿರ್ಧರಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, 2021ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿದೆ.
ಜ. 1, 2021 ರಿಂದ ಈ ಫಾಸ್ಟ್ಯಾಗ್ ಕಡ್ಡಾಯ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಒಂದು ವೇಳೆ ವಾಹನಗಳು ಫಾಸ್ಟ್ಯಾಗ್ ಹೊಂದಿಲ್ಲದಿದ್ದರೆ ದುಪ್ಪಟ್ಟು ಹಣ ತೆರಬೇಕಾಗುತ್ತದೆ. ಟೋಲ್ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಸರಾಗ ಚಲನೆ ಹಾಗೂ ಇಂಧನ ಉಳಿತಾಯ ಸೇರಿದಂತೆ ಇನ್ನಿತರ ಕಾರಣಗಳಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಜನವರಿ 1 ರಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಡಿ. 31ರ ಮಧ್ಯರಾತ್ರಿಯಿಂದಲೇ ನಗದು ಶುಲ್ಕ ವ್ಯವಸ್ಥೆ ರದ್ದಾಗಲಿದ್ದು, ಎಲ್ಲಾ ವಾಹನಗಳಿಗೂ ಈ ಫಾಸ್ಟ್ಯಾಗ್ ಕಡ್ಡಾಯವಾಗಿರಲಿದೆ. ಈಗಾಗಲೇ ಫಾಸ್ಟ್ಯಾಗ್ ಚಾಲ್ತಿಯಲ್ಲಿದ್ದು, ಶೇ 80 ರಷ್ಟು ವಾಹನಗಳು ಈ ವ್ಯವಸ್ಥೆ ಹೊಂದಿದೆ. ಉಳಿದ 20 ರಷ್ಟು ವಾಹನಗಳು ಈ ಫಾಸ್ಟ್ಯಾಗ್ ವ್ಯಾಪ್ತಿಗೆ ಒಳಪಡಬೇಕಿದೆ. ಒಂದು ವೇಳೆ ಈ ವಾಹನಗಳು ಡಿ. 30ರೊಳಗೆ ಫಾಸ್ಟ್ಯಾಗ್ ಹೊಂದಿಲ್ಲದಿದ್ದರೆ, ಟೋಲ್ಪ್ಲಾಜ್ದಲ್ಲಿ ಸಂಚಾರ ಮಾಡಲು ದುಪ್ಪಟ್ಟು ಶುಲ್ಕ ಪಾವತಿಸುವುದು ಅನಿವಾರ್ಯವಾಗಲಿದೆ.
FASTag ಅಂದರೇನು?
ಫಾಸ್ಟ್ಯಾಗ್ ಎಂಬುದು ಬಹುಪಯೋಗಿ ಹಣ ಪಾವತಿ ವ್ಯವಸ್ಥೆಯಾಗಿದೆ. ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ (IHMCL) ಈ ಟ್ಯಾಗ್ಗಳನ್ನು ತಯಾರಿಸುತ್ತದೆ. ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನವನ್ನು ಹೊಂದಿರುವ ಸ್ಟಿಕರ್ ಇದಾಗಿದೆ. ಇದನ್ನು ಕಾರಿನ ವಿಂಡ್ ಶೀಲ್ಡ್ನಲ್ಲಿ ಅಂಟಿಸಬೇಕು. ಹೆದ್ದಾರಿಯಲ್ಲಿ ಟೋಲ್ ಮೂಲಕ ಸಾಗುವಾಗ ರೇಡಿಯೋ ಫ್ರೀಕ್ವೆನ್ಸಿಯಿಂದ ನಿಮ್ಮ ಕಾರಿನ ಗುರುತನ್ನು ಆಟೊಮ್ಯಾಟಿಕ್ ಆಗಿ ಪತ್ತೆ ಮಾಡಲಾಗುತ್ತದೆ. ಟೋಲ್ನಲ್ಲಿ ಹಣ ಪಾವತಿ ಮಾಡಲು ಕಾಯುವ ಅವಶ್ಯಕತೆ ಇರುವುದಿಲ್ಲ. ನಿಗದಿತ ದರವನ್ನು ಅದೇ ಮುರಿದುಕೊಳ್ಳುತ್ತದೆ. ಟೋಲ್ಗಳಲ್ಲಿ ಹತ್ತಾರು ನಿಮಿಷ ವ್ಯಯಿಸುವ ಪ್ರಮೇಯ ತಪ್ಪುತ್ತದೆ.
ಈ ಫಾಸ್ಟ್ಯಾಗ್ ಗನ್ನು ಟೋಲ್ನಲ್ಲಷ್ಟೇ ಅಲ್ಲ ವಿವಿಧೆಡೆ ಬಳಕೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ. ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಹಾಕಿಸಲು, ಪಾರ್ಕಿಂಗ್ನಲ್ಲಿ ಹಣ ಪಾವತಿ ಮಾಡಲು ಇತ್ಯಾದಿ ಕಾರ್ಯಗಳಿಗೆ ಫಾಸ್ಟ್ಯಾಗ್ ಬಳಕೆಯಾಗುವ ದಿನಗಳು ಹತ್ತಿರವಿದೆ.