janadhvani

Kannada Online News Paper

ತನ್ನ ವಿರುದ್ಧದ ಅಪವಾದಗಳನ್ನು ಕಾನೂನು ಬದ್ಧವಾಗಿ ಎದುರಿಸುವೆ- ಎಂ.ಎ.ಯೂಸುಫಲಿ

ದುಬೈ: ರಾಜಕೀಯ ಪ್ರವೇಶಿಸುವ ಉದ್ದೇಶ ಹೊಂದಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿರುದ್ಧದ ಅಪವಾದ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಲುಲು ಗ್ರೂಪ್ ಅಧ್ಯಕ್ಷ ಎಂ.ಎ.ಯೂಸುಫಲಿ ಹೇಳಿದ್ದಾರೆ.ಅವರು ದುಬೈನಲ್ಲಿ ಆನ್‌ಲೈನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಅಪವಾದವನ್ನು ಹರಡುವ ಬೇರೆ ರಾಜ್ಯವನ್ನು ನೋಡಿಲ್ಲ,ನಕಾರಾತ್ಮಕತೆಯನ್ನು ಹರಡುವುದು ಕೆಲವರ ಅಭ್ಯಾಸವಾಗಿ ಮಾರ್ಪಟ್ಟಿದೆ. ಭಾರತದ ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಆದರೆ, ಇದು ಇತರರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ರೂಪದಲ್ಲಾಗಿರಬಾರದು ಎಂದು ಎಂ.ಎ.ಯೂಸುಫಲಿ ಹೇಳಿದರು.

ಇಂತಹಾ ಅಪವಾದಗಳು ವೈಯಕ್ತಿಕವಾಗಿ ತನಗೆ ಯಾವುದೇ ಪರಿಣಾಮ ಬೀರುವುದಿಲ್ಲ, ಆದರೆ 5 ಲಕ್ಷಕ್ಕೂ ಮಿಕ್ಕ ಉದ್ಯೋಗಿಗಳಿಗೆ ನೋವುಂಟು ಮಾಡುತ್ತದೆ. ಆದ್ದರಿಂದ ಕಾನೂನುಬದ್ಧವಾಗಿ ಅದನ್ನು ಎದುರಿಸಲಾಗುವುದು ಎಂದು ಅವರು ತಿಳಿಸಿದರು.

ಕೋವಿಡ್ ಕಾಲದಲ್ಲಿ, ಲುಲು ಗ್ರೂಪ್ ಇ-ಕಾಮರ್ಸ್‌ನಲ್ಲಿ ಶೇಕಡಾ 200 ರಷ್ಟು ಬೆಳವಣಿಗೆಯನ್ನು ಕಂಡಿದೆ. ಮುಂದಿನ ವರ್ಷ ಇದನ್ನು ಶೇ 500 ರಷ್ಟು ಹೆಚ್ಚಿಸುವ ಗುರಿ ಹೊಂದಿದೆ. ಕೋವಿಡ್ ಬಿಕ್ಕಟ್ಟಿನ ನಡುವೆಯೂ ಲುಲು ಗ್ರೂಪ್ 27 ಹೊಸ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಯೂಸುಫಲಿ ಹೇಳಿದರು.

ಯಾವುದೇ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಆಡಳಿತ ಮಂಡಳಿಯನ್ನು ಅರ್ಹ ಗೌರವದಿಂದ ನೋಡಬೇಕು. ಅದು ಪ್ರಜಾಪ್ರಭುತ್ವ ಮರ್ಯಾದೆಯಾಗಿದೆ. ಆದಾಗ್ಯೂ, ತನಗೆ ಹಾಗೂ ತನ್ನ ಸಂಸ್ಥೆಗಳಿಗೆ ಯಾವುದೇ ರಾಜಕೀಯ ಗುರಿಗಳಿಲ್ಲ ಎಂದು ಸ್ಪಷ್ಟಪಡಿಸಿದರು.

error: Content is protected !! Not allowed copy content from janadhvani.com