ಚೆನ್ನೈ, ಡಿ 14:- ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಕ್ತಿ ಅವಿರ್ಭವಿಸುವ ಸಾಧ್ಯತೆಗಳು ಕಂಡುಬರುತ್ತಿವೆ.ಮಕ್ಕಲ್ ನೀದಿ ಮಯ್ಯಂ ಅಧ್ಯಕ್ಷ, ನಟ ಕಮಲ್ ಹಾಸನ್, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸದುದ್ದೀನ್ ಉವೈಸಿ ನಡುವೆ ‘ಮೈತ್ರಿ’ ಏರ್ಪಡುವ ಲಕ್ಷಣಗಳು ಗೋಚರಿಸುತ್ತಿವೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಎಂಬ ಮಾಹಿತಿಲಭ್ಯವಾಗಿದೆ. ಇಬ್ಬರೂ ನಾಯಕರು ಪ್ರಾಥಮಿಕವಾಗಿ ಈಗಾಗಲೇ ಒಂದು ಅಂದಾಜಿಗೆ ಬಂದಿದ್ದಾರೆ ಎಂದು ಹೇಳಲಾಗಿದ್ದು, ಸೋಮವಾರ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಕಾರ್ಯಕರ್ತರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಉವೈಸಿ ಪ್ರಮುಖ ಘೋಷಣೆ ಮಾಡುವ ನಿರೀಕ್ಷೆಯಿದೆ.
ಜನವರಿ ಅಂತ್ಯದಲ್ಲಿ ಚೆನ್ನೈಗೆ ಆಗಮಿಸಲಿರುವ ಅಸದುದ್ದೀನ್ ಓವೈಸಿ ಮೈತ್ರಿ ಕುರಿತಂತೆ ಅಂತಿಮ ರೂಪ ನೀಡಲಿದ್ದಾರೆ. ತಮಿಳುನಾಡಿನಲ್ಲಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಿರ್ಧರಿಸಿದೆ. ಈ ಎಲ್ಲಾ 25 ಸ್ಥಾನಗಳಲ್ಲಿ ಕಮಲ್ ಹಾಸನ್ ಜೊತೆ ಮೈತ್ರಿ ಮಾಡಿಕೊಳ್ಳಲು ಉವೈಸಿ ನಿರ್ಧರಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತೆ ತಮಿಳುನಾಡಿನಲ್ಲೂ ಜಯ ಸಾಧಿಸಬೇಕು ಎಂದು ಓವೈಸಿ ಆಶಿಸಿದ್ದಾರೆ.
ತಮಿಳುನಾಡಿನಲ್ಲಿ ಈಗಾಗಲೇ ಹಲವು ಮುಸ್ಲಿಂ ಪಕ್ಷಗಳಿವೆ. ಅವರೆಲ್ಲರನ್ನೂ ಒಂದು ಗೂಡಿಸಲು ಉವೈಸಿ ಪ್ರಯತ್ನಿಸಲಿದ್ದಾರೆ. ” ಎಲ್ಲಾ ಮುಸ್ಲಿಂ ಪಕ್ಷಗಳನ್ನು ಒಟ್ಟುಗೂಡಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಉವೈಸಿ ಬಯಸಿದ್ದಾರೆ. ಕಮಲ್ ಹಾಸನ್ ಪಕ್ಷ, ಇತರ ಸಣ್ಣ ಪಕ್ಷಗಳೊಂದಿಗೆ ಉವೈಸಿ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂದು ಎಂಐಎಂ ಮೂಲಗಳು ತಿಳಿಸಿವೆ.
ವೆಲ್ಲೂರು, ರಾಣಿಪೇಟ್ , ತಿರುಪತ್ತೂರು, ಕೃಷ್ಣಗಿರಿ, ರಾಮನಾಥಪುರಂ, ಪುದುಕೊಟ್ಟೈ, ತಿರುಚ್ಚಿ, ಮಧುರೈ ಹಾಗೂ ತಿರುನೆಲ್ವೇಲಿ ಪ್ರದೇಶಲ್ಲಿರುವ ಮುಸ್ಲಿಮ ಬಾಹುಳ್ಯ ಆಧರಿಸಿ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ತಮಿಳುನಾಡಿನಲ್ಲಿ ಅಸ್ತಿತ್ವ ಸ್ಥಾಪಿಸಲು ನಿರ್ಧರಿಸಿದೆ.