✍🏻Nizzu4ever👁ಉರುವಾಲು ಪದವು
#AppointVPForNRIK
#vicepresident4NRIK
Date: 10/12/2020
ಭಾರತೀಯ ಕಾಲಮಾನ: 4PM
ಯುಎಇ ಕಾಲಮಾನ: 2:30PM
ಸೌದಿ ಕಾಲಮಾನ: 1:30PM
ಹೌದು! ಅನಿವಾಸಿ ಕನ್ನಡಿಗರೆಂದರೆ ಸ್ವಂತ ಕುಟುಂಬವನ್ನು ತೊರೆದು ಹೊಟ್ಟೆಪಾಡಿಗಾಗಿ ವಿದೇಶ ರಾಷ್ಟ್ರಗಳಲ್ಲಿ ದುಡಿಯುವವರು. ಕೇವಲ ಕುಟುಂಬ ಮಾತ್ರವಲ್ಲದೆ ಊರಿನ ಅಭಿವೃದ್ದಿಗಾಗಿ ಸದಾ ಮಿಡಿಯುತ್ತಿರುವ ಹೃದಯವಂತರು. ಊರಿನಲ್ಲಿ ಯಾವುದೇ ಸಂಕಷ್ಟ ಎದುರಾದಾಗಲೂ ಪಕ್ಕನೆ ನೆನಪಿಗೆ ಬರುವುದು ವಿದೇಶದಲ್ಲಿರುವ ಕನ್ನಡಿಗ ಸಹೋದರ ಸಹೋದರಿಯರನ್ನಾಗಿದೆ. ರಾಜ್ಯದಲ್ಲಿ ಪ್ರವಾಹ ಬಂದು ತತ್ತರಿಸಿದಾಗಲೂ, ಬಡವರ ಕಲ್ಯಾಣ, ವಸತಿ ನಿರ್ಮಾಣ ಮುಂತಾದ ಅವಶ್ಯಕತೆಗಳು ಎದುರಾದಾಗ ಅನಿವಾಸಿಗಳು ಸಹಾಯ ಹಸ್ತವನ್ನು ಚಾಚಿ ಕೈ ಹಿಡಿಯುತ್ತಾರೆ.
ಅನಿವಾಸಿ ಕನ್ನಡಿಗರು ಮತ್ತು ರಾಜ್ಯ ಸರಕಾರ ಪರಸ್ಪರ ಕೊಂಡಿಗಳಂತೆ ಇದ್ದು ಕರ್ನಾಟಕದ ಪ್ರಗತಿಗೆ ಬಂಡವಾಳ ಹೂಡಿಕೆ ಮಾಡಿ ಅಭಿವೃದ್ಧಿಗೊಳಿಸಲು ಅನಿವಾಸಿಗಳು ಯಶಸ್ವಿಯಾಗಿದ್ದಾರೆ. ಆದರೆ, ಇಂದು ಅನಿವಾಸಿ ಕನ್ನಡಿಗರ ಕಷ್ಟಗಳಿಗೆ ಸ್ಪಂದಿಸಲು, ತೊಂದರೆಗೀಡಾದಾಗ ಸಹಾಯ ಮಾಡಲು, ಹಲವಾರು ವರ್ಷಗಳು ವಿದೇಶದಲ್ಲಿ ದುಡಿದು ಊರಿಗೆ ತಲುಪಿದಾಗ ಸ್ವಂತ ವ್ಯಾಪಾರಕ್ಕೆ ಸಹಕಾರ ಯಾವುದೂ ಸರಕಾರದ ವತಿಯಿಂದ ಸಿಗುತ್ತಿಲ್ಲವೆನ್ನುವುದು ಖೇದಕರ.
ಕರ್ನಾಟಕ ಮತ್ತು ಅನಿವಾಸಿ ಭಾರತೀಯ ಎಂಬ ಸಮಿತಿ ರಚನೆ ಮಾಡಿದ್ದರೂ ಅದು ಸಮರ್ಪಕವಾಗಿ ಉಪಯೋಗಕ್ಕೆ ಸಿಗುತ್ತಿಲ್ಲ. ಕಾಟಾಚಾರಕ್ಕೊಂದು ಸಮಿತಿ ಚಾಲ್ತಿಯಲ್ಲಿದೆ. ಆದರೆ, ಅದಕ್ಕೆ ಒಬ್ಬರು ಉಪಾಧ್ಯಕ್ಷರನ್ನು ನೇಮಿಸುವಲ್ಲಿ ಸರಕಾರ ವಿಫಲವಾದ ಕಾರಣ ಇಂದು ಅನಿವಾಸಿಗಳ ಅವಶ್ಯಕತೆಗಳಿಗೆ ಸ್ಪಂದಿಸಲು ಸರಿಯಾದ ವ್ಯಕ್ತಿಯನ್ನು ಹುಡುಕಬೇಕಾಗುತ್ತದೆ. ವಿವಿಧ ನಿಗಮ ಮಂಡಳಿಗಳನ್ನು ಸರಕಾರ ಜಾರಿಗೆ ತಂದು ಅದರ ಅಭಿವೃದ್ದಿಗಾಗಿ ಕೋಟಿ ರೂಪಾಯಿಗಳನ್ನು ಘೋಷಣೆ ಮಾಡುತ್ತಿದ್ದರೂ ಅನಿವಾಸಿ ಕನ್ನಡಿಗರ ಬಗ್ಗೆ ತಾತ್ಸಾರ ಮನೋಭಾವ ತೋರುತ್ತಿದೆ.
ಕೋರೋಣ ಸಂದರ್ಭದಲ್ಲಿ ನೀವು ನೋಡಿರಬಹುದು. ವಿವಿಧ ಸಂಘಟನೆಗಳು ಸೇರಿ ಕನ್ನಡಿಗರ ಸಮಸ್ಯೆಗಳನ್ನು ತಿಳಿಸಲು ಡಿಸಿಎಂ, ಶಾಸಕ, ಸಂಸದ ಹೀಗೆ ಒಬ್ಬೊಬ್ಬರೊಂದಿಗೆ zoom ಅಪ್ಲಿಕೇಶನ್ ಮೂಲಕ ಮಾತನಾಡಬೇಕಾದ ಗತಿಗೇಡು ಬಂದೊದಗಿದೆ. ಅನಿವಾಸಿ ಭಾರತೀಯ ಸಮಿತಿಗೆ ಒಬ್ಬ ಸಮರ್ಥ ಉಪಾಧ್ಯಕ್ಷರನ್ನು ನೇಮಿಸಿದರೆ ಅನಿವಾಸಿಗಳು ನೇರವಾಗಿ ಅವರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ಆದರೆ, ಒಂದು ಚಾರ್ಟರ್ ಫ್ಲೈಟ್ ಅನುಮತಿಗಾಗಿ ವಿದೇಶರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳು ಅದೆಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ಅವರಲ್ಲಿ ಕೇಳಿದರೆ ಮಾತ್ರ ತಿಳಿದುಕೊಳ್ಳಬಹುದು. ಎಷ್ಟು ಸಲ ವಿಮಾನ ರದ್ದು ಮಾಡಲಾಯಿತು. ಇದಕ್ಕಾಗಿ ವ್ಯಯಿಸಿದ ಸಮಯಗಳೆಷ್ಟು? ಇದೆಲ್ಲವೂ ಸರಕಾರವೇ ಮುಂದೆ ನಿಂತು ಮಾಡಿಕೊಡಬೇಕಾದ ಕೆಲಸಗಳಲ್ಲವೇ?
ವಿದೇಶ ರಾಷ್ಟ್ರಗಳಲ್ಲಿ ಮರಣ ಹೊಂದಿದ ಮೃತ ಶರೀರವನ್ನು ಊರಿಗೆ ತಲುಪಿಸುವ ಬಗ್ಗೆಯಾಗಲಿ, ಅನಾರೋಗ್ಯ ಪೀಡಿತರನ್ನು ತಾಯ್ನಾಡು ತಲುಪಿಸುವ ಬಗ್ಗೆಯಾಗಲಿ, ವೀಸಾ ಪಾಸ್ಪೋರ್ಟ್ ಸಂಬಂಧ ಪ್ರಕರಣಗಳಲ್ಲಿ ಸಿಲುಕಿ ಒದ್ದಾಡುತ್ತಿರುವವರು ಮೊದಲಾದ ಸಮಸ್ಯೆಗಳು ಅನಿವಾಸಿಗಳನ್ನು ಸುತ್ತುತ್ತಲೇ ಇದೆ. ನಮ್ಮ ನೆರೆಯ ರಾಜ್ಯ ಕೇರಳ ಸರಕಾರವು ಅನಿವಾಸಿಗಳಿಗೆ ಕೊಡುತ್ತಿರುವ ಸೌಲಭ್ಯಗಳು ಅವರ ಕಷ್ಟಗಳಿಗೆ ಸ್ಪಂದಿಸುವ ಸೌಜನ್ಯ ನಿಜಕ್ಕೂ ಅದ್ಭುತ. ಅದರಿಂದಾಗಿಯೇ ಕೇರಳ ಚಿಕ್ಕ ರಾಜ್ಯವಾದರೂ ಜಿಲ್ಲೆಗೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ತಲೆಯೆತ್ತುತ್ತಲಿದೆ. ಅಭಿವೃದ್ಧಿ ಹೊಂದುತ್ತಲೂ ಇದೆ. 100 ಕ್ಕೂ ಅಧಿಕ ಚಾರ್ಟರ್ ಫ್ಲಟ್ ಗಳ ಮೂಲಕ ಕೇರಳಿಗರನ್ನು ತಾಯ್ನಾಡಿ ತಲುಪಿಸಿಕೊಟ್ಟರು.
ಮೂರು ವರ್ಷಗಳಿಂದ ಅನಿವಾಸಿ ಕನ್ನಡಿಗರ ಸಮಿತಿಗೆ ಒಂದು ಉಪಾಧ್ಯಕ್ಷರನ್ನು ನೇಮಿಸಲು ಸಾಧ್ಯವಾಗದ ರಾಜ್ಯ ಸರಕಾರವನ್ನು ಎಚ್ಚರಿಸಬೇಕು. ಅನಿವಾಸಿಗಳ ಕಷ್ಟಗಳನ್ನು ಹೇಳಿಕೊಳ್ಳಲು ಸಮರ್ಥ ನಾಯಕತ್ವ ಸಮಿತಿಗೆ ಇರಬೇಕು. ವಿದೇಶ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ಅನಿವಾಸಿ ಸಂಘಟನೆಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥ ನಾಯಕತ್ವವನ್ನು ಆರಿಸಿ ಕೊಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಇಂದಿನ ಟ್ವಿಟ್ಟರ್ ಕ್ಯಾಂಪೈನ್ ನಲ್ಲಿ ದೇಶ ವಿದೇಶದ ಎಲ್ಲ ಟ್ವಿಟ್ಟರ್ ಖಾತೆ ಹೊಂದಿರುವರು ಮಾನ್ಯ ಮುಖ್ಯಮಂತ್ರಿಯವರನ್ನು ಟ್ಯಾಗ್ ಮಾಡಿ ಮೇಲೆ ತಿಳಿಸಿದ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.