janadhvani

Kannada Online News Paper

ಭಾರತ್ ಬಂದ್: ರೈತರ ಹೋರಾಟಕ್ಕೆ ಭಾರೀ ಬೆಂಬಲ- ಮಾತುಕತೆಗೆ ಮುಂದಾದ ಅಮಿತ್ ಶಾ

ನವದೆಹಲಿ, ಡಿಸೆಂಬರ್. 08:ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದ ರೈತರು ಕರೆ ಕೊಟ್ಟಿರುವ “ದೆಹಲಿ ಚಲೋ” ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.ಈ ನಡುವೆ ಇಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಸಹ ಯಶಸ್ವಿಯಾಗಿದೆ.

ಪ್ರತಿಭಟನೆಯ ನಡುವೆಯೂ ಸರ್ಕಾರ ಮತ್ತು ರೈತ ಹೋರಾಟಗಾರರ ನಡುವೆ ಈವರೆಗೆ ಐದು ಬಾರಿ ಮಾತುಕತೆ ನಡೆದಿದೆ. ಆದರೆ, ಈವರೆಗೆ ಯಾವ ಮಾತುಕತೆಯೂ ಫಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ರೈತರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಭಾರತ್ ಬಂದ್ ಬೆನ್ನಿಗೆ ಸಚಿವ ಅಮಿತ್ ಶಾ ಅವರ ಈ ನಡೆ ಇದೀಗ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಈ ಕುರಿತು ಮಾಹಿತಿ ನೀಡಿರುವ ರೈತ ಮುಖಂಡ ರಾಕೇಶ್ ಟಿಕೈಟ್, “ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಲು ಸರ್ಕಾರದಿಂದ ಕರೆ ಬಂದಿದೆ. ನಮ್ಮನ್ನು ಸಂಜೆ 7 ಗಂಟೆಗೆ ಸಭೆಗೆ ಬರಲು ಹೇಳಿದ್ದಾರೆ. ದೆಹಲಿಯ ಹೆದ್ದಾರಿಗಳಲ್ಲಿ ನಮ್ಮ ರೈತ ಮುಖಂಡರು ಇದೀಗ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಮುಗಿದ ತಕ್ಷಣ ಸಚಿವರೊಂದಿಗಿನ ಸಭೆಯಲ್ಲಿ ನಾವು ಪಾಲ್ಗೊಳ್ಳಲಿದ್ದೇವೆ” ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕಳೆದ ಸೆಪ್ಟಂಬರ್ ತಿಂಗಳಿನಲ್ಲೇ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಗ್ರೀವಾಜ್ಞೆಯ ಮೂಲಕ ಮೂರೂ ವಿವಾದಾತ್ಮಕ ಕೃಷಿ ಮಸೂದೆಗಳನ್ನು ಜಾರಿಗೆ ತಂದಿತ್ತು. ಅಂದಿನಿಂದಲೂ ಈ ಮಸೂದೆಯನ್ನು ವಿರೋಧಿಸುತ್ತಿರುವ ರೈತರ ಹೋರಾಟ ಈಗ ಉಗ್ರರೂಪ ತಾಳಿದೆ. ಈ ಮೂರು ಹೊಸ ಕಾನೂನುಗಳನ್ನು ಹಿಂಪಡೆಯದ ಹೊರತು ನಮಗೆ ಬೇರೇನೂ ಬೇಕಾಗಿಲ್ಲ ಎಂದು ರೈತ ಸಂಘಟನೆಗಳು ಪಟ್ಟುಹಿಡಿದಿವೆ.

ಈಗಾಗಲೇ ಸರ್ಕಾರ ಮತ್ತು ರೈತ ಮುಖಂಡರ ನಡುವೆ ಐದು ಸುತ್ತಿನ ಮಾತುಕತೆ ನಡೆದಿದ್ದು, ಈ ಎಲ್ಲಾ ಸಭೆಗಳೂ ವಿಫಲವಾಗಿದೆ. ಈ ಕುರಿತು ಬಹಿರಂಗ ಹೇಳಿಕೆ ನೀಡಿದ್ದ ಕೃಷಿ ಸಚಿವ ನರೇಂದ್ರ ತೋಮರ್, “ಸರ್ಕಾರಕ್ಕೆ ಯಾವುದೇ ಅಹಂ ಇಲ್ಲ. ಆದರೆ ಯಾವುದೇ ಕಾರಣಕ್ಕೂ ಈ ಕಾನೂನುಗಳನ್ನು ರದ್ದು ಮಾಡುವುದಿಲ್ಲ” ಎಂದು ಹೇಳಿದ್ದರು.

ಭಾರತ್ ಬಂದ್ಗೆ ಕೃಷಿ ಸಚಿವರ ಈ ಹೇಳಿಕೆಯೂ ಕಾರಣ ಎನ್ನಲಾಗುತ್ತಿದ್ದು, ಇಂದು ದೇಶದಾದ್ಯಂತ ನಡೆಯುತ್ತಿರುವ ಈ ರೈತ ಹೋರಾಟ ಮತ್ತು ಭಾರತ್ ಬಂದ್ ಯಶಸ್ವಿಯಾಗಿದೆ. ಎಲ್ಲಾ ರಾಜ್ಯಗಳಲ್ಲೂ ಬಹುತೇಕ ಜನ ಈ ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಇಂದಿನ ಅಮಿತ್ ಶಾ ಅವರ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ.

error: Content is protected !! Not allowed copy content from janadhvani.com