janadhvani

Kannada Online News Paper

ವೆನ್ಝ್ ಅಬ್ದುಲ್ ಅಝೀಝ್ ಹತ್ಯೆ ಯತ್ನ :ಆರೋಪಿಗಳನ್ನು ಬಂಧಿಸದಿದ್ದಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು: ಕೈಕಂಬ ಪರಿಸರದಲ್ಲಿ ಇತ್ತೀಚೆಗೆ ವೆನ್ಝ್ ಬಟ್ಟೆ ಅಂಗಡಿ ಮಾಲೀಕರಾದ ಅಬ್ದುಲ್ ಅಝೀಝ್ ಅವರನ್ನು ಹತ್ಯೆಗೈಯಲು ಭೀಕರ ತಲವಾರು ದಾಳಿ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ನ.23ರಂದು ಬಜ್ಪೆ ಪೋಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಗುರುಪುರ ಕೈಕಂಬ ಮುಸ್ಲಿಂ ಒಕ್ಕೂಟ ತಿಳಿಸಿದೆ.

ಸಾಮಾಜಿಕ, ಶೈಕ್ಷಣಿಕ, ಬಡವರ ಕಲ್ಯಾಣ ಕಾರ್ಯಗಳಿಗಾಗಿ ನಿರಂತರವಾಗಿ ದುಡಿಯುತ್ತಿದ್ದ, ವಿವಿಧ ಮುಸ್ಲಿಂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ಅಝೀಝ್ ರನ್ನು ನವೆಂಬರ್ 15ರಂದು ರಾತ್ರಿ ಅಕ್ರಮಿಗಳು ತಲವಾರು ದಾಳಿ ನಡೆಸಿ ಹತ್ಯೆಗೆ ಶ್ರಮಿಸಿದ್ದರು. ಗಂಭೀರ ಗಾಯಗೊಂಡಿರುವ ಅಝೀಝ್ ರವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೈಕಂಬ ಪರಿಸರದ ಕೆಲವು ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಬ್ದುಲ್ ಅಝೀಝ್ ರವರ ಹತ್ಯೆಗೆ ಈ ಮುಂಚೆಯೂ ಮನೆಯೊಳಗೆ ನುಗ್ಗಿ ಪ್ರಯತ್ನ ನಡೆಸಲಾಗಿತ್ತು. ಈ ಬಗ್ಗೆ ಬಜ್ಪೆ ಪೋಲೀಸ್ ಠಾಣೆಗೆ ದೂರನ್ನು ನೀಡಲಾಗಿತ್ತಾದರೂ ಆರೋಪಿಗಳ ವಿರುದ್ಧ ಈ ತನಕ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ವರ್ಷದ ಹಿಂದೆ ಮಸೀದಿಯ ಆಡಳಿತ ಸಮಿತಿಯೊಂದರಲ್ಲಿ ನಡೆದ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ಸ್ಥಳದಲ್ಲಿರದ ಅಬ್ದುಲ್ ಅಝೀಝ್ ರನ್ನು ಒಂದು ವರ್ಷದ ಬಳಿಕ ಪ್ರಕರಣದ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಹಲವು ನಿಗೂಢತೆಗೆ ಕಾರಣವಾಗಿದೆ.

ಇದೀಗ ಅಬ್ದುಲ್ ಅಝೀಝ್ ರವರ ಮೇಲೆ ನಡೆದ ಮಾರಾಣಾಂತಿಕ ಹಲ್ಲೆ ಪ್ರಕರಣದಲ್ಲೂ ಆರೋಪಿಗಳನ್ನು ಬಂಧಿಸುವಲ್ಲಿ ಬಜ್ಪೆ ಪೋಲೀಸರು ಆಸಕ್ತಿ ತೋರುವಂತೆ ಕಾಣುತ್ತಿಲ್ಲ.ಹತ್ಯೆ ಯತ್ನ ನಡೆದು ವಾರವೇ ಕಳೆದರೂ, ಪ್ರಕರಣವನ್ನು ಭೇದಿಸಿಸದಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.

ಸಾಮಾಜಿಕ ಕಾರ್ಯಕರ್ತರ ಸೇವಾ ಚಟುವಟಿಕೆಗಳನ್ನು ಹಿಂಸೆಯ ಮೂಲಕ ಹತ್ತಿಕ್ಕಲು ಯತ್ನಿಸುವ ಸಮಾಜ ಘಾತುಕ ಶಕ್ತಿಗಳ ಹುಟ್ಟಡಗಿಸುವುದು ಪೋಲೀಸ್ ಇಲಾಖೆಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಅಬ್ದುಲ್ ಅಝೀಝ್ ರ ಹತ್ಯೆ ಯತ್ನದ ನೈಜ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ನ್ಯಾಯ ಒದಗಿಸಿ ಕೊಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದ್ದಾರೆ.

ಈ ಪ್ರಕರಣದ ಆರೋಪಿಗಳ ಬಂಧನ ಕಾರ್ಯವು ಇನ್ನಷ್ಟು ವಿಳಂಬಗೊಂಡಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ನಾಯಕರ ನಿಯೋಗವು ರಾಜ್ಯದ ಗೃಹಮಂತ್ರಿ ಯನ್ನು ಭೇಟಿಯಾಗಿ ಪ್ರಕರಣದ ಸಂಪೂರ್ಣ ವಿವರಗಳನ್ನು ನೀಡಿ ಮನವಿ ಸಲ್ಲಿಸಲಾಗುತ್ತದೆ.

ಅಶ್ರಫ್ ಕಿನಾರ ಮಂಗಳೂರು
(ಕೋ ಆರ್ಡಿನೇಟರ್ ‌ಕರ್ನಾಟಕ ಮುಸ್ಲಿಂ ಜಮಾಅತ್), ನಿಯಾಜ್ ವೆನ್ಝ್, ಬದ್ರುದ್ದೀನ್ ವೆನ್ಝ್ (ಅಬ್ದುಲ್ ಅಝೀಝ್ ಸಹೋದರರು),ರಿಯಾಝ್ ಬಿಕರ್ನಕಟ್ಟೆ, ಬಸರಿಯಾ ಮೇಘಾ ಕೈಕಂಬ,
ಮಕ್ದೂಮ್ (ಅಬ್ದುಲ್ ಅಝೀಝ್ ಸಹೋದರಿ ಪುತ್ರ) ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

error: Content is protected !! Not allowed copy content from janadhvani.com