janadhvani

Kannada Online News Paper

ಟ್ರಂಪ್ ನ್ನು ಸೋಲಿಸಿ, ಅಮೇರಿಕಾದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ ಆಯ್ಕೆ

ವಾಷಿಂಗ್ಟನ್, ನ.೦7:ಇಡೀ ವಿಶ್ವವೆ ಮುಂದಿನ ಅಮೇರಿಕ ಅಧ್ಯಕ್ಷ ಯಾರು ಎಂಬ ಪ್ರಶ್ನೆಗೆ ತೆರೆ ಬಿದ್ದಿದೆ. ಡೊನಾಲ್ಡ್ ಟ್ರಂಪ್ ನಾಲ್ಕು ವರ್ಷದ ಅಧಿಕಾರ ಮುಕ್ತಾಯಗೊಂಡಿದ್ದು ಅಮೆರಿಕಾ ಅಧ್ಯಕ್ಷರಾಗಿ ಜೋ ಬಿಡೆನ್ ಆಯ್ಕೆಯಾಗಿದ್ದಾರೆ. ಭಾರತ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಮತ ಎಣಿಕೆಯಲ್ಲಿ ಅಧ್ಯಕ್ಷ ಸ್ಥಾನಕ್ಕೇರಲು 270 ಮ್ಯಾಜಿಕ್ ನಂಬರ್ ಬೇಕಿತ್ತು. ಆದರೆ ಜೋ ಬಿಡೆನ್ 284 ಮತ ಪಡೆದಿದ್ದಾರೆ. ಡೊನಾಲ್ಡ್ ಟ್ರಂಪ್ 214 ಮತ ಪಡೆದಿದ್ದಾರೆ.ಈ ಹಿಂದೆ ಅಮೆರಿಕ ಉಪಾಧ್ಯಕ್ಷರಾಗಿದ್ದ ಡೆಮಾಕ್ರಟಿಕ್ ಪಕ್ಷದ ’ಜೋ ಬಿಡೆನ್’ ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ 46 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜೋಸೆಫ್ ರಾಬಿನೆಟ್ ಬಿಡೆನ್ ಜೂನಿಯರ್(Joseph Robinette Biden Jr) ಎಂಬ ಹೆಸರಿನ 77 ವರ್ಷದ “ಜೋ ಬಿಡೆನ್” ಎಂದು ಕರೆಯಲ್ಪಡುವ ಇವರು ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಸ್ಕ್ರಾಂಟನ್‌ನಲ್ಲಿ ನವೆಂಬರ್ 20, 1942 ಜನಿಸಿದರು. ತಮ್ಮ ನಾಲ್ಕು ಮಕ್ಕಳಲ್ಲಿ ಇಬ್ಬರು ಮೃತಪಟ್ಟಿದ್ದು, ಐದು ಮೊಮ್ಮಕ್ಕಳನ್ನು ಹೊಂದಿದ್ದಾರೆ. ಪ್ರಸ್ತುತ ಅಮೆರಿಕದ ವಿಲ್ಮಿಂಗ್ಟನ್ ರಾಜ್ಯದ ಡೆಲವೇರ್‌ನಲ್ಲಿ ವಾಸಿಸುತ್ತಿದ್ದಾರೆ.

1972 ರಲ್ಲಿ ಡೆಲವೇರ್‌ನಿಂದ ಮೊದಲ ಬಾರಿ ಸೆನೆಟರ್ ಆಗಿ ಆಯ್ಕೆಯಾಗಿದ್ದ ಇವರು, ಇದುವರೆಗೂ ಆರು ಭಾರಿ ಸೆನೆಟರ್‌ ಆಗಿ ಚುನಾಯಿತರಾಗಿದ್ದಾರೆ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಕಾಲದಲ್ಲಿ 47 ನೇ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಡೆಮಾಕ್ರಟಿಕ್ ಪಕ್ಷದಿಂದ 1988 ಮತ್ತು 2008 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನವನ್ನೂ ಕೋರಿದ್ದರು.

ಸುಮಾರು ಅರ್ಧ ಶತಮಾನದಿಂದ ಸಾರ್ವಜನಿಕ ಜೀವನದಲ್ಲಿರುವ ಬಿಡೆನ್ ತಮ್ಮ ಸರ್ಕಾರದ ಅನುಭವವನ್ನು ಒತ್ತಿಹೇಳುತ್ತಾ, ಅಪಾಯಕಾರಿ ಮತ್ತು ಅನಿಶ್ಚಿತ ಜಗತ್ತಿನಲ್ಲಿ ಸ್ಥಿರವಾಗಿ, ಪರಿಭ್ರಮಿತ ವ್ಯಕ್ತಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕೊರೊನಾ ವೈರಸ್ ಬಿಕ್ಕಟ್ಟು ಪ್ರಾರಂಭವಾಗುತ್ತಿದ್ದಂತೆ, ಮತದಾರರನ್ನು ಸೆಳೆಯಲು ಆರೋಗ್ಯ ರಕ್ಷಣೆ ಮತ್ತು ಅರ್ಥಶಾಸ್ತ್ರ ತಜ್ಞರ ಸಲಹೆಯಂತೆ ಹಲವು ಶಿಫಾರಸುಗಳನ್ನು ರೂಪಿಸಿದ್ದರು. ಕೊರೊನಾ ವೈರಸ್ ಪರೀಕ್ಷೆಗಳನ್ನು ಇನ್ನೂ ಹಚ್ಚು ಮಾಡುವುದು ಮತ್ತು ಉಚಿತಗೊಳಿಸಿವುದು, ರೋಗಿಗಳಿಗೆ ಲಸಿಕೆಯನ್ನು ಕೂಡಾ ಉಚಿತವಾಗಿ ನೀಡುವುದು ಕೂಡಾ ಇವರ ಶಿಫಾರಸ್ಸಿನಲ್ಲಿದೆ. ಅಷ್ಟೇ ಅಲ್ಲದೆ ಮಾಜಿ ಅಧ್ಯಕ್ಷ ಟ್ರಂಪ್ ಕೊರೊನಾ ವೈರಸ್ ಅನ್ನು ನಿರ್ವಹಿಸಿದ್ದನ್ನು ತೀವ್ರವಾಗಿ ಟೀಕಿಸಿದ್ದರು.

error: Content is protected !! Not allowed copy content from janadhvani.com