✍️ಕೊಡಂಗಾಯಿ ಕಾಮಿಲ್ ಸಖಾಫಿ
ಹೇಳುವುದು ಸುಲಭ ಮಾಡುವುದು ಕಷ್ಟ ಎಂಬ ಮಾತೊಂದಿದೆ. ಬಹುತೇಕ ಜನ, ಸಂಘ, ಸಂಸ್ಥೆಗಳ ಸ್ಥಿತಿಯು ಇದಕ್ಕೆ ಭಿನ್ನವಲ್ಲ. ಹತ್ತಾರು ಕನಸುಗಳನ್ನು ನನಸು ಮಾಡಲಾಗದೆ ಮನಸ್ಸು ಕೊರೆಯುತ್ತಿರುವವರನ್ನು ಕಾಣಬಹುದು.
ಇದೆಲ್ಲವೂ ನೆನಪಾಗಲು ಒಂದು ಕಾರಣವಿದೆ.
ಕನ್ನಡ ನಾಡಿನ ಸುನ್ನೀ (ಮುಸ್ಲಿಂ) ವಿದ್ಯಾರ್ಥಿಗಳಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ಸದಸ್ಯತ್ವ ಪಡೆದ ಸಂಘಟನೆಯಾಗಿದೆ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್. ರಾಜ್ಯದ ಮಿಕ್ಕ ಜಿಲ್ಲೆಗಳಲ್ಲೂ ಕಾರ್ಯಾಚರಿಸುತ್ತಿರುವ ಈ ಸಂಘಟನೆಯ ಸದಸ್ಯತ್ವ ಪಡೆಯಲು ನಾಡಿನ ಮೂಲೆ ಮೂಲೆಗಳಿಂದ ದೈನಂದಿನ ಬೇಡಿಕೆಗಳು ಬರುವುದನ್ನು ಕಾಣಬಹುದಾಗಿದೆ.
ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಈ ಕಾಲಾವಧಿಯಲ್ಲಿ ನಡೆಸಿದ ಹತ್ತುಹಲವು ಕಾರ್ಯಾಚರಣೆಗಳಲ್ಲಿ ಒಂದಾಗಿದೆ ರಕ್ತದಾನ ಶಿಬಿರ. ಬ್ಲಡ್ ಸೈಬೋ ಮೂಲಕ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಸಿದ ಶಿಬಿರಗಳು ಇದೀಗ 200ಕ್ಕೆ ಬಂದು ತಲುಪಿದೆ. ನವಂಬರ್ 8 ಭಾನುವಾರದಂದು ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಮುಚ್ಚಯಗಳಲ್ಲಿ ಒಂದಾದ ಖ್ವಾಜ ಗರೀಬ್ ನವಾಜ್ ಸ್ಮರಣೆಯ ಮಿತ್ತೂರಿನ ಕ್ಯಾಂಪಸ್ಸಿನಲ್ಲಿ ನಡೆಯುತ್ತಿರುವುದು ಬ್ಲಡ್ ಸೈಬೋದ ಇನ್ನೂರನೇ ಶಿಬಿರವಾಗಿದೆ.
ನಾಡಿನ ಕೆಲವೆಡೆ ಮನುಷ್ಯ-ಮನಸ್ಸುಗಳ ನಡುವೆ ಜಾತಿ-ಧರ್ಮ -ಪಂಗಡಗಳ ಹೆಸರಲ್ಲಿ ರಕ್ತ ಚೆಲ್ಲುವುದನ್ನು ಕಾಣಬಹುದಾಗಿದೆ. ಅದರಲ್ಲೂ ಯವ್ವನಕ್ಕೆ ಕಾಲಿಟ್ಟಂತಹ ಯುವಕರು ಕೂಡಾ ಸಿಲ್ಲಿ ವಿಷಯಗಳಿಗೂ ಕೊಲೆಗಳಲ್ಲಿ ಕೈ ತೊಳೆಯುವಾಗ ಎಸ್ಎಸ್ಎಫ್ ಎಂಬ ಸಂಘಟನೆಯಲ್ಲಿ ಸದಸ್ಯತ್ವ ಪಡೆದ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ 200 ರಕ್ತದಾನ ಶಿಬಿರಗಳನ್ನು ಮಾಡಿ ಸಾವಿರಾರು ಜೀವಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರುವುದು ಗಮನಾರ್ಹವಾಗಿದೆ.
ಬದುಕಿನ ಪ್ರಮುಖ ಅಂಶವಾಗಿದೆ ರಕ್ತ ಎಂಬುವುದು. ಒಂದು ಹನಿ ರಕ್ತಕ್ಕಾಗಿ ಅಂಗಲಾಚುವ ಕುಟುಂಬಗಳು ನೂರು ರೂಪಾಯಿಗಳನ್ನು ಕೂಡಾ ಖರ್ಚು ಮಾಡಲು ಅಸಾಧ್ಯವಾದ ಇಂದಿನ ಸನ್ನಿವೇಶದಲ್ಲಿ ಬದುಕಿನ ಬಂಡಿಯನ್ನು ಮುಂದಕ್ಕೆ ಕೊಂಡೊಯ್ಯಲು ಅಗತ್ಯವಾದ ಉದ್ಯೋಗ ಕೂಡ ಇಲ್ಲದಿರುವ ಈ ಸಂದರ್ಭದಲ್ಲಿ ಕಾಯಿಲೆಗಳ ದಾಸರಾಗಿ ಬದುಕುಳಿಯುವ ಬಯಕೆಯಿಂದ ರಕ್ತಕ್ಕಾಗಿ ಕೈಚಾಚುವುದನ್ನು ಕಾಣುವಾಗ, ಜಾತಿ, ಧರ್ಮ,ವರ್ಣ, ವರ್ಗವನ್ನು ನೋಡದೆ ಅಗತ್ಯವಿರುವ ಎಲ್ಲರಿಗೂ ರಕ್ತವನ್ನು ನೀಡುವ ಮೂಲಕ ಎಸ್‌ಎಫ್‌ಎಫ್ ನ ಕಾರ್ಯಕರ್ತರು ಜೀವ ಉಳಿಸಲು ನೆರವಾಗುವುದು ಮೆಚ್ಚಲೇಬೇಕಾದ ವಿಷಯವಾಗಿದೆ.
ಇದಕ್ಕೆ ನಾಯಕತ್ವ ಕೊಡುತ್ತಿರುವ ಸಂಘಟನೆಯ ರಾಜ್ಯ, ಜಿಲ್ಲಾ ಮತ್ತು ಎಲ್ಲಾ ಘಟಕಗಳ ನಾಯಕರನ್ನು ಅಭಿನಂದಿಸಲೇಬೇಕು. ನಮ್ಮ ಒಂದು ಹನಿ ರಕ್ತದಿಂದ ಒಂದು ವೇಳೆ ಒಂದು ಜೀವವನ್ನಾದರೂ ಉಳಿಸಬಹುದು. ಯಾವುದನ್ನೂ ತಾತ್ಸಾರ ರೂಪದಲ್ಲಿ ಕಾಣಬಾರದು. ಆದುದರಿಂದ ನವಂಬರ್ 8ರಂದು 10 ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಮಿತ್ತೂರು ಕೆಜಿಎನ್ ಕ್ಯಾಂಪಸ್ಸಿನಲ್ಲಿ ನಡೆಯುವ ದಾಖಲೆಯ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಎಸ್‌ಎಫ್‌ಎಫ್ ನೊಂದಿಗೆ ಕೈಜೋಡಿಸೋಣ. ಅಷ್ಟಾದರೂ ನಾವು ಮಾಡದ್ದಿದ್ದರೆ ಈ ಸಮಾಜಕ್ಕೆ ನಮ್ಮಿಂದ ಸಿಗುವ ಉಪಕಾರವಾದರೂ ಏನು.?
ಚಿಂತಿಸಲೇ ಬೇಕು..!