janadhvani

Kannada Online News Paper

SSLC ಫಲಿತಾಂಶ: ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ- ಮುಖ್ಯಮಂತ್ರಿ

ಬೆಂಗಳೂರು,ಆ.10: 2019-20ನೇ ಸಾಲಿನ ಎಸ್ಎಸ್ಎಲ್​​ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಹಾಗಾಗಿ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಶುಭಾಶಯಗಳು ತಿಳಿಸಿದ್ಧಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಯಡಿಯೂರಪ್ಪ, ಇಂದು ಎಸ್​​ಎಸ್​​ಎಲ್​​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ನನ್ನ ಶುಭ ಹಾರೈಕೆಗಳು. ಫಲಿತಾಂಶ ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮ ತಂದೆ, ತಾಯಿ, ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ ಎಂದು ಆತ್ಮಸ್ಥೈರ್ಯ ತುಂಬಿದ್ಧಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಎಸ್ಎಸ್ಎಲ್​​ಸಿ ಪರೀಕ್ಷಾ ಫಲಿತಾಂತ ಪ್ರಕಟಗೊಳ್ಳಲಿದೆ. ಈ ಬಾರಿ ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್​​ಎಂಎಸ್​​​​ ಮೂಲಕ ಫಲಿತಾಂಶ ಬರಲಿದೆ. ಜತೆಗೆ ವೆಬ್​ಸೈಟ್​ನಲ್ಲೂ ಫಲಿತಾಂಶ ಪ್ರಕಟವಾಗಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಗುಂಪು ಗೂಡಬಾರದು ಎಂಬ ದೃಷ್ಟಿಯಿಂದ ಪ್ರತಿ ವಿದ್ಯಾರ್ಥಿಯ ಮೊಬೈಲ್ ಗೆ ಫಲಿತಾಂಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ಫಲಿತಾಂಶ ಬಂದ ಬಳಿಕ ವಿದ್ಯಾರ್ಥಿಗಳನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆ ಮಾಡಬೇಡಿ. ಅವರು ಯಾವ ಕೋರ್ಸನ್ನು ಆಯ್ಕೆ ಮಾಡಿದ್ದರೂ ಆ ಕೋರ್ಸಿಗೆ ಸೇರಿಸಿ ಮುಂದೆ ಚೆನ್ನಾಗಿ ಓದಲು ಹೇಳಿ. ಒಂದು ವೇಳೆ ಅವರ ನಿರೀಕ್ಷೆಗಿಂತ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದಲ್ಲಿ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶವಿರುತ್ತದೆ ಎಂದು ಪೋಷಕರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್​​ ತಿಳಿಸಿದ್ದಾರೆ.

ತಮ್ಮ ಮಕ್ಕಳ ಫಲಿತಾಂಶ ಎಷ್ಟೇ ಆಗಿರಲಿ, ಅವರಿಗೆ ಹೇಳುವಾಗ ನಿಧಾನವಾಗಿ ಪ್ರೀತಿಯಿಂದ ತಿಳಿಸಿ. ಗಳಿಸಿದ ಅಂಕಗಳಿಗೆ ತೃಪ್ತಿ ಪಡುವಂತೆ ಮನವೊಲಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ ಸುರೇಶ್​​ ಕುಮಾರ್​​.

error: Content is protected !! Not allowed copy content from janadhvani.com