ದಕ್ಷಿಣ ಕನ್ನಡ ಜಿಲ್ಲೆಯ ಜನರ ಮಹತ್ವಾಕಾಂಕ್ಷಿ ಯೋಜನೆಯೊಂದು ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಅತೀ ಕಡಿಮೆ ಸಮಯದಲ್ಲಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಅಭಿವೃದ್ಧಿ ಕಾಮಗಾರಿ ತಾಂತ್ರಿಕ ಕಾರಣದಿಂದ ಅರ್ಧಕ್ಕೆ ನಿಲ್ಲುವಂತಾಗಿದೆ.
ಅಭಿವೃದ್ಧಿ ಕಾಮಗಾರಿಗಾಗಿ ಈಗಾಗಲೇ ಬೆಟ್ಟ ಗುಡ್ಡಗಳನ್ನು ಅಗೆಯಲಾಗಿದ್ದು, ಈ ಗುಡ್ಡಗಳು ಮಳೆಗೆ ಬೀಳುವ ಸ್ಥಿತಿಯಲ್ಲಿದೆ. ಅಲ್ಲದೆ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಮಳೆ ನೀರು ಕೃಷಿಭೂಮಿಯನ್ನು ಸೇರುವ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗ್ರಹಣ ಬಡಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿ.ಸಿ. ರೋಡ್ ನಿಂದ ಅಡ್ಡಹೊಳೆವರೆಗಿನ 75 ಕಿಲೋಮೀಟರ್ ವ್ಯಾಪ್ತಿಯ ಹೆದ್ದಾರಿಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಗೊಳಿಸಲು ಯೋಜನೆ ಹಾಕಿಕೊಂಡಿತ್ತು. ಈ ಸಂಬಂಧ 2017 ರಲ್ಲಿ L & T ಕಂಪನಿಗೆ 821 ಕೋಟಿ ರೂಪಾಯಿಯ ಕಾಮಗಾರಿಯನ್ನೂ ಒಪ್ಪಿಸಲಾಗಿತ್ತು. ಇದರಲ್ಲಿ ರಸ್ತೆ ನಿರ್ಮಾಣದ ಜೊತೆಗೆ 14.5 ಕಿಲೋಮೀಟರ್ ಸರ್ವೀಸ್ ರಸ್ತೆ, ಎರಡು ಫ್ಲೈ ಓವರ್, ಎರಡು ದೊಡ್ಡ ಸೇತುವೆ, 14 ಸಣ್ಣ ಸೇತುವೆ, 9 ಅಂಡರ್ ಪಾಸ್ ಹಾಗೂ ಟಾಲ್ ಪ್ಲಾಝಾ ಸೇರ್ಪಡೆಯಾಗಿವೆ.
ಕಾಮಗಾರಿಯನ್ನು ಅತ್ಯಂತ ವೇಗವಾಗಿ ಆರಂಭಿಸಿದ್ದ ಕಂಪನಿಗೆ 45 ಮೀಟರ್ ರಸ್ತೆಯನ್ನು ಅಗಲೀಕರಣಗೊಳಿಸಲು ಹಲವು ತೊಡಕುಗಳು ಎದುರಾಗಿತ್ತು. ನೇರ ರಸ್ತೆಯನ್ನು ನಿರ್ಮಿಸಬೇಕಾದ ಅನಿವಾರ್ಯತೆಯಿದ್ದ ಕಾರಣ ಹಲವು ಖಾಸಗಿ ಜಮೀನುಗಳನ್ನು ಖರೀದಿಸಿ ಅವುಗಳನ್ನು ರಸ್ತೆಗಳನ್ನಾಗಿ ಪರಿವರ್ತಿಸಲಾಗಿತ್ತು.
ಈ ನಡುವೆ ಸುಮಾರು 21 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅರಣ್ಯ ಭೂಮಿಯ ಬಳಕೆಯ ಅನಿವಾರ್ಯತೆಯೂ ಇದ್ದ ಕಾರಣ ಅರಣ್ಯ ಇಲಾಖೆಯ ಅನುಮತಿಯ ಸಮಸ್ಯೆಯೂ ಎದುರಾಗಿತ್ತು. ಅಲ್ಲದೆ ಭಾರೀ ಮಳೆಯ ಕಾರಣ ಬೆಟ್ಟ ಗುಡ್ಡಗಳನ್ನು ಅಗೆದು ರಸ್ತೆ ಮಾಡಿದ್ದ ರಸ್ತೆಯ ಮೇಲೆ ಮತ್ತೆ ಕಲ್ಲು ಮಣ್ಣುಗಳು ಬೀಳಲಾರಂಭಿಸಿತ್ತು. ಈ ಕಾರಣಕ್ಕಾಗಿ ಒಮ್ಮೆ ನಿರ್ಮಿಸಿದ್ದ ರಸ್ತೆಯನ್ನು ಮತ್ತೆ ನಿರ್ಮಿಸಬೇಕಾದ ಸ್ಥಿತಿಯೂ ಬಂದೊದಗಿತ್ತು.
ಹೀಗಾಗಿ ಸುಮಾರು 108 ಕೋಟಿ ರೂಪಾಯಿಗಳ ನಷ್ಟ ಪರಿಹಾರ ನೀಡುವಂತೆ ಕಂಪನಿಯು ಹೆದ್ದಾರಿ ಪ್ರಾಧಿಕಾರವನ್ನು ವಿನಂತಿಸಿತ್ತು. ಆದರೆ ಈ ವಿನಂತಿಗೆ ಮನ್ನಣೆ ನೀಡದ ಕಾರಣಕ್ಕಾಗಿ ಕಂಪನಿಯು ರಸ್ತೆ ನಿರ್ಮಾಣ ಕಾಮಗಾರಿಯಿಂದ ಹಿಂದೆ ಸರಿದಿದೆ. ಈ ಬಾರಿ ಮತ್ತೆ ಮಳೆ ಆರಂಭಗೊಂಡಿದ್ದು, ರಸ್ತೆಗಾಗಿ ಅಗೆದಿರುವ ಬೆಟ್ಟ-ಗುಡ್ಡಗಳ ಮಣ್ಣು ಯಾವ ಸಮಯದಲ್ಲಾದರೂ ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ.
ಮಳೆಗಾಲ ಬಂದಾಗ ಅರ್ಧಕ್ಕೆ ನಿಲ್ಲಿಸಿದ ಕಾಮಗಾರಿಯ ದುಷ್ಪರಿಣಾಮ ಜನರ ಮೇಲಾಗುತ್ತಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಮತ್ತೆ ಹೆದ್ದಾರಿ ಕಾಮಗಾರಿಯನ್ನು ಆರಂಭಿಸಬೇಕು ಎನ್ನುವ ಒತ್ತಡ ಸಾರ್ವಜನಿಕರಿಂದ ಕೇಳಿಬರಲಾರಂಭಿಸಿದೆ.
ಹೆದ್ದಾರಿಯ ಕಾಮಗಾರಿಯನ್ನು ಅತ್ಯಂತ ತುರ್ತಾಗಿ ಆರಂಭಿಸಿದ್ದ ಕಂಪನಿ 30 ತಿಂಗಳ ಒಳಗೆ ಕಾಮಗಾರಿಯನ್ನು ಬಿಟ್ಟುಕೊಡುವ ಸಾಧ್ಯತೆಯೂ ಇತ್ತು. ಮಳೆಯಿಂದಾದ ನಷ್ಟಕ್ಕೆ ಹೆದ್ದಾರಿ ಇಲಾಖೆ ತಾಂತ್ರಿಕ ಅಡಚಣೆಗಳಲ್ಲಿ ಕೊಂಚ ಬದಲಾವಣೆ ಮಾಡಿ ಪರಿಹಾರ ನೀಡಿದ್ದರೆ, ಇಷ್ಟೊತ್ತಿಗಾಗಲೇ ಹೆದ್ದಾರಿ ಪ್ರಯಾಣಿಕರ ಸಂಚಾರಕ್ಕೆ ಸಿದ್ಧಗೊಳ್ಳುತ್ತಿತ್ತು