janadhvani

Kannada Online News Paper

ಮಂಗಳೂರು ತಲುಪಿದ ಕೆಸಿಎಫ್ ಒಮಾನ್ ಪ್ರಥಮ ಚಾರ್ಟರ್ಡ್ ವಿಮಾನ

ಮಸ್ಕತ್: ಕೋವಿಡ್-19 ಕೊರೋನ ವೈರಸ್ ಹಿನ್ನಲೆಯಲ್ಲಿ ವಿಮಾನ ಹಾರಾಟ ರದ್ದಾಗಿ,ಊರಿಗೆ ತೆರಳಲು ಸಾಧ್ಯವಾಗದೆ ಹಲವಾರು ಕನ್ನಡಿಗರು ಸಂಕಷ್ಟಕ್ಕೊಳಗಾಗಿರುವುದನ್ನು ಮನಗಂಡು ಕೆಸಿಎಫ್ ಒಮಾನ್ ಆಯೋಜಿಸಿದ ಇಂಡಿಗೋ ಚಾರ್ಟರ್ಡ್ ವಿಮಾನವು ಇಂದು ಮಧ್ಯಾಹ್ನ ಮಂಗಳೂರು ತಲುಪಿತು.

ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಆಯೋಜಿಸಿದ ಚಾರ್ಟಡ್ ವಿಮಾನವು ಸಂಕಷ್ಟದಲ್ಲಿದ್ದ ನೂರಾರು ಕನ್ನಡಿಗರ ಪಾಲಿಗೆ ಬಹುದೊಡ್ಡ ಆಸರೆಯಾಗಿ ಮೂಡಿತು.

ಅನಾರೋಗ್ಯಕ್ಕೊಳಗಾದವರು, ಗರ್ಭಿಣಿಯರು, ಸಣ್ಣಮಕ್ಕಳು, ವೀಸಾ ಕಾಲಾವದಧಿ ಮುಗಿದವರು, ಉದ್ಯೋಗ ಕಳೆದು ಕೊಂಡವರು ಮೊದಲಾದ ಪ್ರಯಾಣಿಕರು ಸುರಕ್ಷಿತವಾಗಿ ತಾಯ್ನಾಡು ತಲುಪಿದರು.

ಯಾತ್ರೆಯ ನೊಂದಾವಣಿಯಿಂದ ಪ್ರಾರಂಭಿಸಿ, ಅಗತ್ಯ ದಾಖಲೆಗಳು ಮತ್ತು ಪಾಲಿಸ ಬೇಕಾದ ಆರೋಗ್ಯ ಸಂಬಂಧಿತ ಸಂಪೂರ್ಣ ಮಾಹಿತಿಯನ್ನು, ಕೆಸಿಎಫ್ ಪ್ರತೀ ಪ್ರಯಾಣಿಕರಿಗೆ ನೀಡಿದ್ದು,ಕೋರೋನಾ ಹರಡುವಿಕೆಯ ಮುನ್ನೆಚ್ಚರಿಕೆಯಾಗಿ ಪ್ರಯಾಣದ ಸಂದರ್ಭದಲ್ಲಿ ಧರಿಸಬೇಕಾದ ಸಂಪೂರ್ಣ ಸುರಕ್ಷಾ ಕವಚ (PPE) ಮತ್ತು ಲಘು ಉಪಹಾರವನ್ನು ಸಂಘಟನೆಯ ವತಿಯಿಂದ ನೀಡಲಾಗಿತ್ತು.

ತನ್ನ ಪ್ರಯಾಣಿಕರ ಸುರಕ್ಷೆ ಮತ್ತು ಉತ್ತಮ ಸೇವೆಯ ಉದ್ದೇಶವನ್ನಿಟ್ಟು ಕೊಂಡು ಪ್ರತೀಯೋರ್ವರೊಂದಿಗೆ ಸಂಘಟನೆಯ ಕಾರ್ಯಕರ್ತರು ನಿರಂತರ ಸಂಪರ್ಕದಲ್ಲಿದ್ದು, ಕ್ವಾರಂಟೈನ್ ಮುಗಿಸಿ ಮನೆ ಸೇರುವ ವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ.

ಇಂತಹ ಹಲವಾರು ಸಮಾಜ ಮುಖಿ ಚಟುವಟಿಕೆಗಳ ಮುಖಾಂತರ ಕೆಸಿಎಫ್, ಸಾರ್ವಜನಿಕ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಪ್ರಸ್ತುತ ಚಾರ್ಟರ್ ವಿಮಾನದ ವ್ಯವಸ್ಥೆ ಮತ್ತು ಅರ್ಪಣಾ ಮನೋಭಾವ ಹೊಂದಿರುವ ಕಾರ್ಯಕರ್ತರ ಸೇವಾ ವೈಖರಿಯು ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ.

ಕೆಸಿಎಫ್ ಆಯೋಜಿಸಿದ ಚಾರ್ಟರ್ ವಿಮಾನದ ಯಶಸ್ವಿಯಲ್ಲಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, ಕೇಂದ್ರ ಮತ್ತು ರಾಜ್ಯ ಸರಕಾರಗಳ ಮತ್ತು ಒಮಾನ್ ಭಾರತೀಯ ರಾಯಭಾರ ಕಚೇರಿಯ ಸಹಕಾರವು ಮರೆಯಲಸಾಧ್ಯ.

ಅಗತ್ಯವಿರುವ ಸರ್ಕಾರೀ ಅನುಮತಿಯನ್ನು ಪಡೆಯುವಲ್ಲಿ ಸಹಕರಿಸಿದ, ಕರ್ನಾಟಕ ರಾಜ್ಯ, ದ. ಕ. ಜಿಲ್ಲಾಧಿಕಾರಿ , ಕರ್ನಾಟಕ ಮುಸ್ಲಿಂ ಜಮಾಅತ್,ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಹಾಗೂ ಸಹಕರಿಸಿದ ಎಲ್ಲರಿಗೂ ಕೆಸಿಎಪ್ ಒಮಾನ್ ಕೃತಜ್ಞತೆ ಸಲ್ಲಿಸಿದೆ.

ಮಳೆಯನ್ನೂ ಲೆಕ್ಕಿಸದೆ, ಲಗೇಜುಗಳನ್ನು ಸ್ವತಃ ಹೆಗಲಮೇಲೇರಿಸಿ, ಹೋಟೆಲ್ ಗಳಿಗೆ ಸಾಗಿಸುವುದರಿಂದ ಹಿಡಿದು ಕ್ವಾರಂಟೈನ್ ಸಮಯದುದ್ದಕ್ಕೂ ಪ್ರಯಾಣಿಕರ ಎಲ್ಲಾ ಅಗತ್ಯತೆಗಳನ್ನು ಕೇಳಿ ತಿಳಿದುಕೊಂಡು ಪರಿಹರಿಸುತ್ತಾ ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿರುವ SSF ಕಾರ್ಯಕರ್ತರನ್ನು ಕೆಸಿಎಫ್ ನೇತಾರರು ಮತ್ತು ಪ್ರಯಾಣಿಕರು ಮನತುಂಬಿ ಪ್ರಶಂಸಿಸಿದರು.

ಅವಿಶ್ರಾಂತ ಕಾರ್ಯಾಚರಣೆ ಮೂಲಕ ಈ ಧ್ಯೇಯವನ್ನು ಸಾಧಿಸುವಲ್ಲಿ ದುಡಿದ ಸಂಘಟನೆಯ ಎಲ್ಲಾ ಕಾರ್ಯಕರ್ತರಿಗೆ ಮತ್ತು ವಿಮಾನವು ಮಂಗಳೂರಿಗೆ ತಲುಪಿದೊಡನೆ ಪ್ರಯಾಣಿಕರ ಎಲ್ಲ ರೀತಿಯ ಸೇವೆಗಳ ಉಸ್ತುವಾರಿ ವಹಿಸಿಕೊಂಡು ಸದಾ ಕಾರ್ಯನಿರತರಾಗಿರುವ ರಾಜ್ಯ SYS ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ಗಳ ಎಲ್ಲಾ ನಾಯಕರಿಗೆ ಕೆಸಿಎಫ್ ಒಮಾನ್ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದೆ ಎಂದು KCF ಒಮಾನ್ ನಾಯಕರು ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com