janadhvani

Kannada Online News Paper

ಇನ್ನು ರಾಜ್ಯದಲ್ಲಿ ಲಾಕ್‌ಡೌನ್ ಇರುವುದಿಲ್ಲ – ಮುಖ್ಯಮಂತ್ರಿ

ಬೆಂಗಳೂರು: ಕೊರೊನಾ ಸೋಂಕು ತಡೆಯಲು ಲಾಕ್‌ಡೌನ್‌ ಪರಿಹಾರ ಅಲ್ಲ, ಇನ್ನು ಮುಂದೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲಾಕ್‌ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಜನರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು ಬುಧವಾರದಿಂದ ಲಾಕ್‌ಡೌನ್ ಇಲ್ಲ ಎಂದು ತಿಳಿಸಿದ್ದಾರೆ.

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಲಾಕ್‌ಡೌನ್ ಬದಲಾಗಿ ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರವನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ. ಇದನ್ನು ಪಾಲಿಸದೆ ಇದ್ದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂಜಾಗರೂಕತಾ ಕ್ರಮವಾಗಿ ಹಿರಿಯ ನಾಗರಿಕರು ಮನೆ ಬಿಟ್ಟು ಹೊರಬರಬಾರದು. ಹಿರಿಯ ನಾಗರಿಕರು ಹೆಚ್ಚು ಎಚ್ಚರಿಕೆ ವಹಿಸಬೇಕು ಹಾಗೂ ಮನೆಯಲ್ಲಿ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಬಿಎಸ್‌ವೈ ಮನವಿ ಮಾಡಿಕೊಂಡಿದ್ದಾರೆ.

ತಜ್ಞರ ಸಲಹೆಯಂತೆ ಟ್ರೇಸ್‌, ಟ್ರಾಕ್‌, ಟೆಸ್ಟ್‌, ಟ್ರೀಟ್ ಹಾಗೂ ತಂತ್ರಜ್ಞಾನಕ್ಕೆ ಆದ್ಯತೆ ನೀಡಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಸರಿಸಿದರೆ ಕೋವಿಡ್‌ ತಡೆಯಲು ಸಾಧ್ಯ. ನಮ್ಮಲ್ಲಿ ಸಂಪರ್ಕ ಹಾಗೂ ಪತ್ತೆ ವ್ಯವಸ್ಥೆ ಸಮರ್ಪಕವಾಗಿದೆ. ಅಲ್ಲದೆ ಕೋವಿಡ್‌ ಹಾಗೂ ಕೋವಿಡ್‌ ಅಲ್ಲದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಇದ್ದ ಗೊಂದಲ ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್‌ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷಗಳ ನಾಯಕರು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಬಿಎಸ್‌ವೈ ಮನವಿ ಮಾಡಿಕೊಂಡಿದ್ದಾರೆ. ಕೋವಿಡ್‌ ಭಷ್ಟಾಚಾರದ ಆರೋಪದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ಯಾವುದೇ ರೀತಿಯಲ್ಲಿ ಅವ್ಯವಹಾರ ನಡೆದಿಲ್ಲ. ವಿಪಕ್ಷದ ನಾಯಕರಿಗೆ ಈ ಕುರಿತಾಗಿ ಎಲ್ಲಾ ಮಾಹಿತಿಯನ್ನು ನೀಡಲು ಸರ್ಕಾರ ಸಿದ್ದವಿದೆ. ಸದ್ಯದ ಸಂಕಷ್ಟದ ಅವಧಿಯಲ್ಲಿ ಸರ್ಕಾರದ ಜೊತೆಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

error: Content is protected !! Not allowed copy content from janadhvani.com