janadhvani

Kannada Online News Paper

ಶುಭ ಸುದ್ದಿ: ಉಮ್ರಾ ಮತ್ತು ಜಮಾಅತ್ ಗಾಗಿ ಮಸ್ಜಿದುಲ್ ಹರಮ್ ಶೀಘ್ರದಲ್ಲೇ ಮುಕ್ತ

ಮಕ್ಕತುಲ್ ಮುಕರ್ರಮಃ|ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿರುವ ಮಕ್ಕಾದ ಮಸ್ಜಿದುಲ್ ಹರಾಮ್ ಸಾರ್ವಜನಿಕರಿಗಾಗಿ ಉಮ್ರಾ ಮತ್ತು ಜಮಾಅತ್ ನಮಾಜ್ ನಿರ್ವಹಣೆಗಾಗಿ ಸಾರ್ವಜನಿಕರಿಗೆ ಮುಕ್ತ ಗೊಳಿಸುವ ಬಗ್ಗೆ ಅಧ್ಯಯನಗಳನ್ನು ನಡೆಸಲಾಗುತ್ತಿದೆ ಎಂದು ಸೌದಿ ಅರೇಬಿಯಾದ ಅಲ್-ಉಕಾದ್ ಪತ್ರಿಕೆ ಉಲ್ಲೇಖಿಸಿದೆ.

ಕಳೆದ ಮಾರ್ಚ್ ಮೊದಲ ವಾರದಲ್ಲಿ, ವಿಶ್ವಾದ್ಯಂತ ಕೋವಿಡ್ ಹರಡುವಿಕೆಯ ವರದಿಯಾದ ಹಿನ್ನೆಲೆಯಲ್ಲಿ ಉಮ್ರಾ ಮತ್ತು ಮದೀನಾ ಸಂದರ್ಶನ ಸೇರಿದಂತೆ ಎರಡೂ ಹರಮ್ ಗಳಿಗೆ ಪ್ರವೇಶವನ್ನು ನಿಷೇಧಿಸಲಾಯಿತು. ಹರಮ್ ನೌಕರರು, ಭದ್ರತಾ ಸಿಬ್ಬಂದಿಗಳಿಗೆ ಮಾತ್ರ ಪ್ರತಿದಿನ ಜಮಾಅತ್ ನಮಾಜ್ ನಿರ್ವಹಣೆಗೆ ಅವಕಾಶವಿತ್ತು.

ಮೊದಲ ಹಂತದಲ್ಲಿ ನಲವತ್ತು ಪ್ರತಿಶತದಷ್ಟು ಜನರಿಗೆ ಪ್ರವೇಶಾನುಮತಿ ಲಭಿಸಲಿದೆ. ಇದಕ್ಕಾಗಿ ಮೊಬೈಲ್ ನಲ್ಲಿ “ತವಕ್ಕಲ್ನಾ” ಆಪ್ ಇನ್ಸ್ಟಾಲ್ ಮಾಡಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಈ ಅಪ್ಲಿಕೇಶನ್ ಮೂಲಕ ಪರವಾನಗಿ ಲಭಿಸಲಿದೆ. ಇದಲ್ಲದೆ, ಹರಮ್‌ನ ದ್ವಾರಗಳನ್ನು ಪ್ರವೇಶಿಸುವ ಮೊದಲು ಮೊಬೈಲ್ ಸಂಖ್ಯೆಗಳನ್ನು ಒದಗಿಸಬೇಕು. ತಾಪಮಾನವನ್ನು ಅಳೆಯುವ ಥರ್ಮಲ್ ಕ್ಯಾಮೆರಾದೊಂದಿಗೆ ಚೆಕ್ ಇನ್ ಮಾಡಿದವರಿಗೆ ಮಾತ್ರ ಹರಮಿನ ಒಳಗಡೆ ಪ್ರವೇಶ.

ರೋಗಲಕ್ಷಣ ಹೊಂದಿರುವವರು ಮತ್ತು ರೋಗಿಗಳೊಂದಿಗೆ ಸಂಪರ್ಕದಲ್ಲಿರುವವರಿಗೆ ಹರಮ್‌ಗೆ ಪ್ರವೇಶ
ಅನುಮತಿಸಲಾಗುವುದಿಲ್ಲ. ಭದ್ರತಾ ಮುನ್ನೆಚ್ಚರಿಕೆಗಳನ್ನು ಸಂಪೂರ್ಣವಾಗಿ ಪಾಲಿಸಿದವರಿಗೆ ಮಾತ್ರ ಪ್ರವೇಶ. ಪೂರ್ಣವಾಗಿ ತ್ವವಾಫ್ ನಿರವಹಿಸುವವರಿಗೆ ಮಾತ್ರವಾಗಿ ಮತ್ವಾಫ್ ಅನುಮತಿಸಲಾಗುತ್ತದೆ.

ತವಾಫ್‌ಗಾಗಿ ಆಗಮಿಸುವವವರು ಪವಿತ್ರ ಹರಮ್‌ನ ಅತಿದೊಡ್ಡ ದ್ವಾರಗಳಲ್ಲಿ ಒಂದಾದ ಕಿಂಗ್ ಅಬ್ದುಲ್ ಅಝೀಝ್ ಗೇಟ್ ಮೂಲಕ ಪ್ರವೇಶಿಸಬೇಕು ಮತ್ತು ಹೊರಬರುವವರು ಜುಸ್ರ್ ನಬಿ ಮತ್ತು ಸಫಾ ಗೇಟ್‌ಗಳ ಮೂಲಕ ಹಿಂತಿರುಗಬೇಕು.

ಜಮಾಅತ್ ನಮಾಜ್ ನಲ್ಲಿ ಪಾಲ್ಗೊಳ್ಳುವ ಜನರು ಹರಮ್‌ನ 94 ಮತ್ತು 89 ಸಂಖ್ಯೆಯ ದ್ವಾರಗಳ ಮೂಲಕ ಹರಮ್ ಪ್ರವೇಶಿಸಬೇಕು. ಇದಕ್ಕೂ ಮೊದಲು, ಮೇ 31 ರಂದು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸಿಕೊಂಡು ಮದೀನಾದ ಮಸ್ಜಿದುನ್ನಬವಿ ಗೆ ಪ್ರವೇಶಾನುಮತಿ ನೀಡಲಾಗಿತ್ತು.

error: Content is protected !! Not allowed copy content from janadhvani.com