ಮಂಗಳೂರು: ಪಡೀಲ್ ಎರಡನೇ ರೈಲ್ವೇ ಕೆಳ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಗುರುವಾರದಿಂದ ವಾಹನ ಸಂಚಾರಕ್ಕೆ ತೆರೆದುಕೊಂಡಿದೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಗುರುವಾರ ಪಡೀಲ್ ರೈಲ್ವೇ ಕೆಳ ಸೇತುವೆಯನ್ನು ಉದ್ಘಾಟಿಸಿದರು.
ರಾ.ಹೆ.75ರ ಪಡೀಲ್‌ನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಾಣವಾಗಿದೆ. ಮಳೆ ನೀರು ಹರಿದು ಹೋಗುವ ಪ್ರದೇಶವಾದ್ದರಿಂದ ನೆಲಮಟ್ಟದಿಂದ ಸುಮಾರು 1.5 ಮೀ.ಎತ್ತರ ಮಣ್ಣು ಹಾಕಿ ರೈಲ್ವೇ ಇಲಾಖೆ ಸೇತುವೆ ಕಾಮಗಾರಿ ನಿರ್ವಹಿಸಿದೆ. ಭಾರತೀಯ ರೋಡ್ ಕಾಂಗ್ರೆಸ್ ನಿಯಮಾವಳಿಯಂತೆ 5.50 ಮೀ. ಎತ್ತರವಿದೆ.
ಆರ್‌ಟಿಒ ನಿಯಮದಂತೆ ಕಂಟೈನರ್ ಸಹಿತ ಒಂದು ವಾಹನವು ಗರಿಷ್ಠ 4.8 ಮೀ. ಎತ್ತರವನ್ನು ಮಾತ್ರ ಹೊಂದಿರಬಹುದಾಗಿದೆ ಎಂಬುದು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರ. ಪಾದಚಾರಿಗಳಿಗೆ ಸಂಚರಿಸಲು ಅನುವಾಗುವಂತೆ ಹೊಸ ಅಂಡರ್‌ಪಾಸ್‌ನಲ್ಲಿ ಸೌಕರ್ಯವಿದೆ. ಮಳೆ ನೀರು ನಿಲ್ಲದಂತೆ, ಮಳೆಗಾಲದಲ್ಲಿ ಸಮಸ್ಯೆ ಆಗದಂತೆ ಚರಂಡಿ ಕಾಮಗಾರಿ ಮಾಡಲಾಗಿದೆ.
ಸುರತ್ಕಲ್‌ನಿಂದ ಬಿಸಿರೋಡ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿದು ಅನೇಕ ವರ್ಷಗಳೇ ಕಳೆದಿದೆ. ಆದರೆ ಪಡೀಲ್‌ನಲ್ಲಿ ಮಾತ್ರ 2 ರೈಲ್ವೇ ಅಂಡರ್‌ಬ್ರಿಡ್ಜ್ ನಿರ್ಮಾಣ ಕುಂಟುತ್ತಲೇ ಸಾಗಿತ್ತು. ಮೊದಲ ಕೆಳಸೇತುವೆ ಬಾಕ್ಸ್ ಪುಶ್ಶಿಂಗ್ ತಂತ್ರಜ್ಞಾನದಲ್ಲಿ 2015ರಲ್ಲಿ ಆರಂಭವಾಗಿತ್ತು.
ಒಂದು ವರ್ಷದಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ 2017ರ ಅಂತ್ಯದಲ್ಲಿ ಪೂರ್ಣಗೊಂಡಿತ್ತು. ಇದಕ್ಕೆ ಸಮನಾಂತರವಾಗಿ ಎರಡನೇ ಸೇತುವೆಯ ಕೆಲಸ 2018ರ ಜನವರಿಯಲ್ಲಿ ಆರಂಭವಾಗಿದ್ದು, ಕಾಮಗಾರಿ ಪೂರ್ಣಗೊಳ್ಳಲು ಎರಡು ವರ್ಷ ಹಿಡಿಯಿತು. ಹೀಗಾಗಿ ಕಳೆದ ಐದು ವರ್ಷಗಳಿಂದ ಪಡೀಲ್‌ನಲ್ಲಿ ಮಳೆಗಾಲದಲ್ಲಿ ವಾಹನ ದಟ್ಟಣೆ ಸಾಮಾನ್ಯವಾಗಿತ್ತು. ಇದೀಗ ಪಡೀಲ್‌ನ ಎರಡೂ ಅಂಡರ್‌ಪಾಸ್ ವಾಹನ ಸಂಚಾರಕ್ಕೆ ಮುಕ್ತಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಕಡಿಮೆಯಾಗಬಹುದು.
ಪಡೀಲ್‌ನಲ್ಲಿ ರೈಲ್ವೇ ಕೆಳ ಸೇತುವೆ ರಸ್ತೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕುಸಿತ ಕಾಣಿಸಿಕೊಂಡು ದೊಡ್ಡ ಪ್ರಮಾಣದ ಹೊಂಡ ನಿರ್ಮಾಣಗೊಂಡಿತ್ತು. ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವಾಗ ರೋಲರ್‌ನಲ್ಲಿ ಡಾಮರು ಸಮತಟ್ಟುಗೊಳಿಸುವ ವೇಳೆ ಡಾಮರು ರಸ್ತೆ ಕುಸಿದು ಸುಮಾರು 3 ಅಡಿ ಆಳದಷ್ಟು ದೊಡ್ಡದಾದ ಗುಂಡಿಯಾಗಿತ್ತು. ಈ ಅಂಡರ್‌ಪಾಸ್ ನ ಒಳಗಡೆ ಒಳಚರಂಡಿ ಹರಿದುಹೋಗುತ್ತಿದ್ದು, ಕಾಮಗಾರಿ ನಡೆಯುವ ವೇಳೆ ಈ ವಿಷಯ ಅರಿಯದೆ ಕಾಮಗಾರಿ ನಡೆಸಿದ್ದರಿಂದ ಈ ಘಟನೆ ನಡೆದಿತ್ತು. ಇದೀಗ ಮರು ಕಾಮಗಾರಿ ನಡೆಸಿ ಸರಿಪಡಿಸಲಾಗಿದೆ.