ಬೆಂಗಳೂರು: ಕೊರೋನಾ ಕಾರಣದಿಂದಾಗಿ ತಾತ್ಕಾಲಿಕವಾಗಿ ಮುಂದೂಡಲಾಗಿದ್ದ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಜೂನ್.18 ರಂದು ನಡೆಸಲಾಗಿತ್ತು. ಆದರೆ ಜಯನಗರ 4 ನೇ ಬ್ಲಾಕ್ ನಲ್ಲಿ ನಿನ್ನೆ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಇದೀಗ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದ್ದು ಎಲ್ಲರಲ್ಲೂ ಆತಂಕ ಮೂಡಿಸಿದೆ.
ವಿದ್ಯಾರ್ಥಿನಿ ಕಳೆದ ಒಂದು ವಾರದಿಂದ ಕ್ವಾರಂಟೈನ್‌ಗೆ ಒಳಗಾಗಿದ್ದರು. ಮನೆಯಿಂದ ಹೊರ ಬರುವಂತಿಲ್ಲ ಎಂದು ಕೈಗೆ ಮುದ್ರೆ ಒತ್ತೆಲಾಗಿತ್ತು. ಆದರೆ, ಆಕೆ ಆ ಮುದ್ರೆಯನ್ನು ಅಳಿಸಿ ಹಾಕಿ ಕಣ್ ತಪ್ಪಿಸಿ ಪರೀಕ್ಷೆಗೆ ತೆರಳಿದ್ದಾಳೆ. ಆಕೆಯ ಸ್ವ್ಯಾಬ್ ರಿಪೋರ್ಟ್ ಸಂಬಂಧ ಅಧಿಕಾರಿಗಳಿಗೂ ಆಕೆ ಮಾಹಿತಿ ನೀಡಿರಲಿಲ್ಲ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಒಟ್ಟು 5,95,997 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ 27,022 ವಿದ್ಯಾರ್ಥಿಗಳು ಕೊರೋನಾ ಹರಡುವ ಭಯದಿಂದ ಪರೀಕ್ಷೆಗೆ ಗೈರಾಗಿದ್ದಾರೆಂದು ಪಿಯುಸಿ ಬೋರ್ಡ್ ಮಾಹಿತಿಯನ್ನು ನೀಡಿದೆ. ಬೆಂಗಳೂರು ದಕ್ಷಿಣ ಭಾಗದ 1,646 ವಿದ್ಯಾರ್ಥಿಗಳು ಮತ್ತು ಕಲಬುರಗಿ ಭಾಗದ 1,750 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ರಾಜ್ಯದ 1,016 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಜವಾಬ್ದಾರಿಯನ್ನು ಸರಕಾರ, ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ಅವರಿಗೆ ಸರಕಾರ ವಹಿಸಿತ್ತು. ಹೊರ ರಾಜ್ಯದ 1,889 ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದಾರೆ. ಕೊರೊನಾದಿಂದಾಗಿ ಹೆಚ್ಚುವರಿ 13,528 ಕೊಠಡಿಯಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.