janadhvani

Kannada Online News Paper

ಕೊರೋನಾ ನಿಯಂತ್ರಣಕ್ಕೆ ಕರ್ನಾಟಕ ಮಾದರಿ- ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ, ಸೋಂಕಿನ ನಿಯಂತ್ರಣಕ್ಕೆ ಕರ್ನಾಟಕ ಮಾದರಿಯನ್ನು ಅನುಸರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಕರ್ನಾಟಕದಲ್ಲಿ ಸೋಂಕಿತರ ಸಂಪರ್ಕ ಉಳ್ಳವರನ್ನು ಶೀಘ್ರ ಪತ್ತೆ ಮಾಡುತ್ತಿರುವುದಕ್ಕೆ ಹಾಗೂ ಮನೆ–ಮನೆ ಆರೋಗ್ಯ ಸಮೀಕ್ಷೆ ಕೈಗೊಂಡಿರುವುದಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಕೋವಿಡ್ ಹರಡುವಿಕೆ ತಡೆಗಟ್ಟುವ ಸಲುವಾಗಿ ಕರ್ನಾಟಕದಲ್ಲಿ ಈಗಾಗಲೇ 1.5 ಕೋಟಿಗೂ ಹೆಚ್ಚು ಮಂದಿಯ ಸಮೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ.‘ಈ ಉತ್ತಮ ಕ್ರಮಗಳನ್ನು ಸ್ಥಳೀಯ ಆದ್ಯತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುವಂತೆ ಮತ್ತು ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಅನುಷ್ಠಾನಗೊಳಿಸುವಂತೆ ಇತರ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ’ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಸೋಂಕಿತರ ಸಂಪರ್ಕವಿದ್ದವರನ್ನು ಶೀಘ್ರ ಪತ್ತೆ ಮಾಡುವ ಕಾರ್ಯದಿಂದಾಗಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತಿದೆ ಎಂದು ಕೇಂದ್ರ ಹೇಳಿದೆ. ಕೋವಿಡ್‌ ನಿರ್ವಹಣೆಯಲ್ಲಿ ಮೊಬೈಲ್ ಆ್ಯಪ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿರುವುದಕ್ಕೂ ಕರ್ನಾಟಕವನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ.

ಶುಕ್ರವಾರ ಬೆಳಗ್ಗಿನ ಲೆಕ್ಕಾಚಾರದ ಪ್ರಕಾರ, ದೇಶದಾದ್ಯಂತ ಒಂದು ದಿನದ ಅವಧಿಯಲ್ಲಿ 13,586 ಹೊಸ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. 336 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

error: Content is protected !! Not allowed copy content from janadhvani.com