janadhvani

Kannada Online News Paper

ವ್ಯವಸ್ಥಿತ ನಿರ್ವಹಣೆ: ಲಾಕ್ಡೌನ್ ಇಲ್ಲದೆಯೇ ಖತರ್ ಚೇತರಿಕೆ

ದೋಹಾ: ಖತ್ತರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 78 ಸಾವಿರ ದಾಟಿದೆ. ಪ್ರತಿನಿತ್ಯ 1,200-1,300 ಪ್ರಕರಣ ವರದಿಯಾಗುತ್ತಿವೆ. ಆದರೆ ಅಷ್ಟೇ ಸಂಖ್ಯೆಯಲ್ಲಿ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ.

ಈವರೆಗೆ 70 ಜನರು ಮೃತಪಟ್ಟಿದ್ದಾರೆ. ಕತಾರ್ ಸಣ್ಣ ದೇಶವಾದರೂ ಸರ್ಕಾರ ವ್ಯವಸ್ಥಿತವಾಗಿ ವೈದ್ಯಕೀಯ ಸೌಲಭ್ಯ ನಿರ್ವಹಿಸುತ್ತಿರುವ ಕಾರಣ ಹಾಗೂ ಮುಂಜಾಗ್ರತೆಯು ಹೆಚ್ಚಿನ ಅನಾಹುತ ತಪ್ಪಿಸಿದೆ. ಇಲ್ಲಿ ಲಾಕ್ಡೌನ್ ಆಗೇ ಇಲ್ಲ. ಆದರೆ ಶಾಪಿಂಗ್ ಮಾಲ್ಗಳು, ಕ್ಷೌರದಂಗಡಿ, ಪಾರ್ಕ್ಗಳು, ಜನಸಂದಣಿ ಕಾರ್ಯಕ್ರಮಗಳು ಬಂದ್ ಆಗಿವೆ.

ಹೋಟೆಲ್ಗಳಲ್ಲಿ ಪಾರ್ಸೆಲ್ಗಷ್ಟೇ ಅವಕಾಶ ನೀಡಲಾಗಿದೆ. ಮಾಸ್ಕ್ ಬಳಸುವುದು ಹಾಗೂ ಸಾಮಾಜಿಕ ಅಂತರದ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಸರ್ಕಾರಿ ಉದ್ಯೋಗ ಸೇರಿ ದಂತೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ.

ಇದರಿಂದಾಗಿ ಪ್ರಮುಖವಾಗಿ ಟೈಲರ್, ಕಟ್ಟಡ ನಿರ್ವಣ, ಕ್ಷೌರ, ಜಿಮ್ ತರಬೇತುದಾರ, ಟ್ಯಾಕ್ಸಿ ಚಾಲಕರಂತಹ ನೌಕರಿಯಲ್ಲಿದ್ದವರಿಗೆ ಹೆಚ್ಚಿನ ತೊಂದರೆ ಆಗಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ.ಕೆಲಸ ಕಳೆದುಕೊಂಡವರ ಜತೆಗೆ ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರು ಇದ್ದಾರೆ. ಭಾರತಕ್ಕೆ ತೆರಳುವುದಾಗಿ ಸುಮಾರು 3 ಸಾವಿರ ಜನರು ನೋಂದಣಿ ಮಾಡಿಸಿದ್ದಾರೆ.

ಸಂಕಷ್ಟದಲ್ಲಿರುವವರಿಗೆ ಆಹಾರ, ಔಷಧ ಸರಬರಾಜು ಮಾಡುವ ಜತೆಗೆ ಮಾನಸಿಕ ಒತ್ತಡದಲ್ಲಿರುವವರಿಗೆ ಆಪ್ತ ಸಮಾಲೋಚನೆ ಮಾಡುವ ಕಾರ್ಯವನ್ನೂ ಭಾರತೀಯ ಸಮುದಾಯ ಸಂಘಟನೆಗಳಿಂದ ಮಾಡಲಾಗುತ್ತಿದೆ. ಪ್ರತಿನಿತ್ಯ 1800-1900 ಪ್ರಕರಣಗಳು ಬಂದ ಸಮಯದಲ್ಲಿ ಸ್ವಲ್ಪ ಆತಂಕ ಮನೆಮಾಡಿತ್ತು. ಆದರೆ ಈಗ ಜಾಗೃತಿಯಿಂದ ಜನರು ನಡೆದುಕೊಳ್ಳುತ್ತಿದ್ದಾರೆ, ಆರೋಗ್ಯದ ಕುರಿತು ಕಾಳಜಿ ವಹಿಸುವುದರಿಂದ ಕೊರೊನಾ ದೂರಾಗಿಸಬಹುದು ಎಂಬುದನ್ನು ಜನರಿಗೆ ಮನದಟ್ಟಾಗಿದೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!