janadhvani

Kannada Online News Paper

ಮದೀನಾದ ಪ್ರವಾದಿ ಮಸೀದಿ “ಮಸ್ಜಿದುನ್ನಬವಿ”ಸಾರ್ವಜನಿಕ ಪ್ರಾರ್ಥನೆಗೆ ಮುಕ್ತ

ಮದೀನಾ ಮುನವ್ವರಃ: ಕೋವಿಡ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲ್ಪಟ್ಟಿದ್ದ ಮಕ್ಕಾದ ಮಸ್ಜಿದುಲ್ ಹರಾಂ ಹೊರತುಪಡಿಸಿ ದೇಶದ ಎಲ್ಲಾ ಮಸೀದಿಗಳು ಇಂದಿನಿಂದ ಪ್ರಾರ್ಥನೆಗೆ ಮುಕ್ತಗೊಳಿಸಲಾಗಿದೆ.

ಅದೇ ರೀತಿ, ಮಸ್ಜಿದುನ್ನಬವಿ( ಮದೀನಾದ ಪ್ರವಾದಿ ಮಸ್ಜಿದ್) ಅನ್ನು ಹಂತ ಹಂತವಾಗಿ ತೆರೆಯುವಂತೆ ಸೌದಿ ಅರೇಬಿಯಾದ ದೊರೆ ಸಲ್ಮಾನ್ ರಾಜರು ಅನುಮತಿ ನೀಡಿದ್ದಾರೆ.

ಇಂದಿನಿಂದ ಮಸ್ಜಿದುನ್ನಬವಿ ವಿಶ್ವಾಸಿಗಳಿಗೆ ಪ್ರಾರ್ಥನೆಗೆ ಮುಕ್ತಗೊಂಡಿದೆ. ಭಾರೀ ಸುರಕ್ಷತೆ ಮತ್ತು ಜಾಗರೂಕತೆಯಿಂದ ಮಸೀದಿ ಪ್ರವೇಶಕ್ಕೆ ಎರಡೂ ಹರಂಗಳ ಉಸ್ತುವಾರಿ ಇಲಾಖೆ ಸಿದ್ಧತೆಗಳನ್ನು ತಯಾರಿಸಿದೆ.ಪ್ರತಿ ಪ್ರಾರ್ಥನೆಯ ಬಳಿಕ, ಅದನ್ನು ಸೋಂಕುರಹಿತಗೊಳಿಸಲು ಯೋಜನೆ ರೂಪಿಸಲಾಗಿದೆ.

ಮಸೀದಿ ಪ್ರವೇಶಿಸುವವರು ಅರಿತಿರಬೇಕಾದ ಅಂಶಗಳನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • ಮೊದಲ ಹಂತದಲ್ಲಿ, ಮಸೀದಿಯ ಒಟ್ಟು ಜನಸಂಖ್ಯೆಯ ಶೇ. 40ಕ್ಕಿಂತ ಕಡಿಮೆ ಜನರಿಗೆ ಮಾತ್ರ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗಲಿದೆ.
  • ಮಸೀದಿಯ ಅಭಿವೃದ್ಧಿಗೊಳಿಸಿದ ಭಾಗ ಮತ್ತು ಅಂಗಳದಿಂದ ಕಾರ್ಪೆಟ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ.
  • ಇಲ್ಲಿ ಮಾರ್ಬಲ್ ನಲ್ಲಿ ನಮಾಜ್ ನಡೆಯಲಿದೆ.
  • ಕ್ಯಾನ್ ಮತ್ತು ಬಾಟಲಿಗಳಲ್ಲಿ ಝಂಝಂ ನೀರು ಪೂರೈಕೆ ಇರುವುದಿಲ್ಲ.
  • ಮಸೀದಿಯ ಕಾರ್ ಪಾರ್ಕಿಂಗ್ ಶೇ.50 ರಷ್ಟು ಕಾರ್ಯ ನಿರ್ವಹಿಸಲಾಗುವುದು.
  • ಮಸೀದಿ ಮತ್ತು ಪ್ರಾಂಗಣದಲ್ಲಿ ಇಫ್ತಾರ್ ಸುಪ್ರಾಗಳನ್ನು ತೆಗೆದು ಹಾಕಿದ್ದು, ಅದೇ ರೀತಿ ಮುಂದುವರಿಯಲಿದೆ.
  • ಸಣ್ಣ ಮಕ್ಕಳಿಗೆ ಮಸೀದಿ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ.
  • ಪ್ರಾರ್ಥಿಸುವವರ ನಡುವೆ ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ವಿಧಾನಗಳನ್ನು ಜಾರಿಗೆ ತರಲಾಗುವುದು.
  • ಪುರುಷರು ಮಸೀದಿ ಪ್ರವೇಶಕ್ಕಾಗಿ, ಬಾಬುಲ್ ಹಿಜ್ರಾ ನಂ 4, ಬಾಬ್ ಖುಬಾ ನಂ 5, ಬಾಬ್ ಮಲಿಕ್ ಸಊದ್ ನಂಬರ್ 8, ಬಾಬ್ ಇಮಾಮ್ ಬುಖಾರಿ ನಂ 10, ಬಾಬ್ ಮಲಿಕ್ ಫಹದ್ ನಂ 21, ಬಾಬ್ ಮಲಿಕ್ ಅಬ್ದುಲ್ ಅಝೀಝ್ ನಂ 34, ಬಾಬ್ ಮಕ್ಕಾ ನಂ .37 ಎಂಬ ಬಾಗಿಲುಗಳನ್ನು ಬಳಸಬಹುದು.
  • ಮಹಿಳೆಯರಿಗೆ ಝಿಯಾರತ್ ಗಾಗಿ 13, 17, 25 ಮತ್ತು 29 ಎಂಬ ನಾಲ್ಕು ಬಾಗಿಲುಗಳನ್ನು ನಿಗದಿಪಡಿಸಲಾಗಿದೆ.
  • ಮಸೀದಿಗೆ ಆಗಮಿಸುವವರು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ಮುಖಗೌಸುಗಳನ್ನು ಧರಿಸಬೇಕು.
  • ಪಾರ್ಕಿಂಗ್ ಪ್ರದೇಶಗಳ ಶುಲ್ಕವನ್ನು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪಾವತಿಸಬೇಕು.

error: Content is protected !! Not allowed copy content from janadhvani.com