ರಿಯಾದ್: ಸೌದಿಯಲ್ಲಿ ಕೋವಿಡ್ ತಡೆಗಟ್ಟುವ ಕ್ರಮಗಳ ಭಾಗವಾಗಿ ಪಾಲಿಸಬೇಕಾದ ಸೂಚನೆಗಳನ್ನು ಗೃಹ ಸಚಿವಾಲಯ ಮಾರ್ಪಡಿಸಿದೆ. ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಇಂದಿನಿಂದ ಹೊಸ ನಿಯಮಗಳು ಅನ್ವಯವಾಗುತ್ತವೆ.
ಕೋವಿಡ್ ತಡೆಗಟ್ಟುವ ಕ್ರಮಗಳ ಭಾಗವಾಗಿ ಹೊಸ ನಿರ್ದೇಶನಗಳನ್ನು ನೀಡಲಾಗಿದೆ.ಇದರನ್ವಯ ಮುಖ ಮತ್ತು ಬಾಯಿಯನ್ನು ಮುಚ್ಚುವಂತೆ ಮುಖವಾಡ ಧರಿಸದೆ ಹೊರಬರುವುದನ್ನು ದಂಡ ವಿಧಿಸಬೇಕಾದ ಪ್ರಕರಣವೆಂದು ಗಣಿಸಲಾಗಿದೆ. ದಂಡ ಒಂದು ಸಾವಿರ ರಿಯಾಲ್ ಆಗಿರುತ್ತದೆ. ಈ ದಂಡವನ್ನು ವ್ಯಕ್ತಿಗಳು ಸ್ವತಃ ಪಾವತಿಸಬೇಕಾಗುತ್ತದೆ. ಎರಡನೇ ಬಾರಿಗೆ ಮುಖವಾಡವಿಲ್ಲದೆ ಸಿಕ್ಕಿದರೆ ದಂಡ ದ್ವಿಗುಣಗೊಳ್ಳುತ್ತದೆ.
ವಾಣಿಜ್ಯ ಕೇಂದ್ರಗಳು ಮತ್ತು ಮಾಲ್‌ಗಳಿಗೆ ಪ್ರವೇಶಿಸುವಾಗ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಸಮ್ಮತಿಸದಿರುವುದು, ಹೆಚ್ಚಿನ ತಾಪಮಾನದ ಸಂದರ್ಭದಲ್ಲಿ ಹೆಚ್ಚಿನ ತಪಾಸಣೆ ಸೂಚನೆಗಳನ್ನು ನಿರ್ಲಕ್ಷಿಸುವುದನ್ನು ಅಪರಾಧವೆಂದು ಪರಿಗಣಿಸಿ ಸಾವಿರ ರಿಯಾಲ್ ದಂಡ ವಿಧಿಸಲಾಗುತ್ತದೆ.
ಇಂದಿನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಸಂಸ್ಥೆಗಳು ಕೋವಿಡ್ ತಡೆಗಟ್ಟುವ ಉಪಕ್ರಮದಲ್ಲಿ ಸೂಚಿಸಿರುವ ಸೂಚನೆಗಳನ್ನು ಸಹ ಪಾಲಿಸಿರಬೇಕು.
ಸಂಸ್ಥೆಗೆ ಪ್ರವೇಶಿಸುವ ಮೊದಲು ದೇಹದ ಉಷ್ಣತೆಯ ತಪಾಸಣೆಯ ವ್ಯವಸ್ಥೆ, ನಿರ್ದಿಷ್ಟ ಸ್ಥಳಗಳಲ್ಲಿ ಸ್ಯಾನಿಟೈಜರ್ ಲಭ್ಯತೆ ಮತ್ತು ನೌಕರರು ಮುಖವಾಡಗಳು ಮತ್ತು ಕೈಗವಸುಗಳನ್ನು ಧರಿಸಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಂತಾದವು ಸಲಹೆಗಳಲ್ಲಿ ಸೇರಿದೆ. ಉಲ್ಲಂಘಿಸುವ ಸಂಸ್ಥೆಗಳಿಗೆ 10,000 ರಿಯಾಲ್ ವರೆಗೆ ದಂಡ ವಿಧಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ.