janadhvani

Kannada Online News Paper

ವೆನ್ಲಾಕ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆಸಲ್ಲಿಸುತ್ತಿರುವ ಝಲೀನಾ ಬಜ್ಪೆ ,ಸಮುದಾಯದ ಹೆಮ್ಮೆ

ಇಬ್ಬರು ಪುಟ್ಟ ಮಕ್ಕಳನ್ನೂ, ಕುಟುಂಬವನ್ನೂ ಬಿಟ್ಟು ಕೊರೊನಾ ವೈರಸ್ ಎಂಬ ಈ ಅಪಾಯಕಾರಿ ಸಂಧರ್ಭದಲ್ಲಿಯೂ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆಸಲ್ಲಿಸುತ್ತಿರುವ ಸಮುದಾಯದ ಹೆಮ್ಮೆ ಝಲೀನಾ ಬಜ್ಪೆ.

ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ನ ಈ ಸಮಯದಲ್ಲಿ ಬಿಡುವಿಲ್ಲದೇ ತಮ್ಮ ಜೀವದ ಹಂಗಿಲ್ಲದೇ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ನರ್ಸ್ ಗಳ ತಂಡದಲ್ಲಿ ಓರ್ವರು ಝಲೀನಾ ಬಜ್ಪೆ. ಬಜ್ಪೆಯ ದಿವಂಗತ ಬಿ.ಎ ಝಕರಿಯಾ ಹಾಗೂ ಝಬೀನಾ ದಂಪತಿಗಳ ಪುತ್ರಿಯಾಗಿರುವ ಇವರ ಈ ಸೇವೆಯು ಶ್ಲಾಘನೀಯ.

ಇವರ ತಾಯಿ ಝಬೀನಾರವರು ಈ ಮೊದಲು ದ.ಕ.ಜಿಲ್ಲೆಯ ಕಟೀಲು ಸೇರಿದಂತೆ ವಿವಿಧ ಆಸ್ಪತ್ರೆ ಗಳಲ್ಲಿ ಸುಮಾರು 38 ವರ್ಷಗಳ ಸ್ಟಾಫ್ ನರ್ಸ್ ಆಗಿ ಸಮಾಜಕ್ಕೆ ತನ್ನ ಸೇವೆ ಮಾಡಿದ್ದು ಈಗ ನಿವೃತ್ತಿಯಾಗಿದ್ದಾರೆ.

ಎರಡು ಹೆಣ್ಣು ಮಕ್ಕಳ ತಾಯಿಯಾದರೂ ಮನೆಯವರನ್ನು ಮತ್ತು ಮಗುವಿನ ಚಿಂತೆ ಬಿಟ್ಟು ರೋಗಿಗಳ ಪಾಲಿಗೆ ಆಸರೆಯಾದ ಝಲೀನಾ ಬಜ್ಪೆ ಇವರ ಸೇವೆ ಶ್ಲಾಘನೀಯವಾಗಿದೆ. ಅನಾರೋಗ್ಯಕ್ಕೆ ತುತ್ತಾದ ಅಥವಾ ಕೋವಿಡ್-19 ಕೊರೋನಾ ಸೋಂಕು ಬಾಧಿತರ ರೋಗಿಗಳ ಸೇವೆಯಲ್ಲಿ ಮಗ್ನರಾಗಿ ತನ್ನ ಸೇವೆಯನ್ನು ನಿಸ್ವಾರ್ಥವಾಗಿ ಸಲ್ಲಿಸುತ್ತಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ಈ ಸಹೋದರಿ ಮೂರು ದಿನಗಳ ಕಾಲ ಬಿಡುವಿಲ್ಲದೆ ಕೊರೊನಾ ವಿರುಧ್ದ PPE ಯ ರಕ್ಶಾ ಕವಚ ತೊಟ್ಟು ಮನೆ ಮಕ್ಕಳ ಸಂಪರ್ಕಕ್ಕೆ ಸಿಗದೆ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ.ಅಷ್ಟೇ ಅಲ್ಲದೆ ಆ ಮೂರು ದಿನದ ನಂತರ ಇರುವ ಅಷ್ಟೇ ದಿನದ ಬಿಡುವಿನ ವೇಳೆಯಲ್ಲಿ ತನ್ನ ಕುಟುಂಬದೊಂದಿಗೆ ಬಹಳ ಆತಂಕದಿಂದಲೇ ದಿನಕಳೆಯುವಂತಾಗಿದೆ.

ಇವರಲ್ಲಿ ಸ್ನೇಹಿತರೊಬ್ಬರು ಕೊರೊನಾ ಪೀಡಿತ ರೋಗಿಗಳ ಶುಶ್ರೂಷೆಯ ಅಪಾಯಗಳ ಬಗ್ಗೆ ಚರ್ಚಿಸಿದಾಗ “ಸರ್ವಶಕ್ತನಾದ ಅಲ್ಲಾಹನು ನನ್ನ ಈ ಕರ್ತವ್ಯವನ್ನೇ ನನಗೆ ಜೀವನಾಧಾರವಾಗಿ ನೀಡಿದ್ದಾನೆ. ಒಂದು ವೇಳೆ ನನ್ನ ಈ ಸೇವೆಯಿಂದಾಗಿ ಇನ್ನೊಬ್ಬರ ಜೀವ ಉಳಿಸಲು ಸಾಧ್ಯವಾಗುವುದಾದರೆ, ಅದೇ ನನಗೆ ಅಲ್ಲಾಹನಿಂದ ಸಿಗುವ ಅತ್ಯುತ್ತಮ ಪ್ರತಿಫಲ ಎಂದು ಭಾವಿಸುತ್ತೇನೆ” ಎಂದು ಪ್ರತಿಕ್ರಿಯಿಸುವಾಗ ಅವರ ಆ ಕಣ್ಣಂಚಿನಲ್ಲಿ ಸಾರ್ಥಕತೆಯ ಭಾವವು ನಲಿದಾಡಿತ್ತು.

ಜೀವ ಭಯ ಹಾಗೂ ಸುರಕ್ಷಾ ನೆಪಹೇಳಿಕೊಂಡು ರಜೆ ಹಾಕಿ ಕೆಲಸಕ್ಕೆ ಹಾಜರಾಗದೆ ಮನೆಯಲ್ಲಿ ಕುಳಿತಿರುವ ಕೆಲವು ವೈದ್ಯರು ಹಾಗೂ ಸ್ಟಾಫ್ ಗಳ ಮಧ್ಯೆ ಸೋಂಕು ಬಾಧಿತರ ನಡುವೆ ಜೀವ ಪಣವಿಟ್ಟು ಚಿಕಿತ್ಸೆ ಹಾಗೂ ಸೇವೆ ನೀಡಿ, ರೋಗಿಗಳ ಜೀವ ಉಳಿಸಲು ಪ್ರಮುಖ ಪಾತ್ರವಹಿಸುವ ಝಲೀನಾ ಬಜ್ಪೆ ಸಮುದಾಯದ ಹೆಮ್ಮೆ.

error: Content is protected !! Not allowed copy content from janadhvani.com