janadhvani

Kannada Online News Paper

ದ.ಕ.ಜಿಲ್ಲೆಯಲ್ಲಿ 12 ದಿನಗಳಿಂದ ಕೊರೋನಾ ಪಾಸಿಟಿವ್ ಪ್ರಕರಣವಿಲ್ಲ

ಮಂಗಳೂರು,ಏ.16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ವೈದ್ಯಕೀಯ ತಂಡವು ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಮಾಡುತ್ತಿದೆ. ಅದರಂತೆ ಗುರುವಾರ ಮತ್ತೆ 16 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ಈ ಮಧ್ಯೆ ಗುರುವಾರ ಸ್ವೀಕರಿಸಲ್ಪಟ್ಟ 16 ಮಂದಿಯ ವರದಿಯು ನೆಗೆಟಿವ್ ಆಗಿದೆ. ಇದು ದ.ಕ.ಜಿಲ್ಲೆಯ ಮಟ್ಟಿಗೆ ಸಮಾಧಾನಕರ ಅಂಶವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ 12 ದಿನಗಳಿಂದ ಒಂದೇ ಒಂದು ಹೊಸ ಪ್ರಕರಣಗಳು ಇಲ್ಲ. ಇದಷ್ಟೇ ಅಲ್ಲದೇ 12 ಸೋಂಕಿತರಲ್ಲಿ, 10 ತಿಂಗಳ ಮಗು ಸೇರಿದಂತೆ 9 ಮಂದಿ ಗುಣಮುಖರಾಗಿದ್ದಾರೆ.

ಇನ್ನು ಹೋಂ ಕ್ವಾರಂಟೈನ್‌ನಲ್ಲಿ ಇದ್ದ ಬಹುತೇಕ ಮಂದಿ ಯಾವುದೇ ರೋಗ ಲಕ್ಷಣಗಳಿಲ್ಲದೇ 28 ದಿನಗಳ ಅವಧಿ ಪೂರೈಸಿದ್ದಾರೆ.
ಸೋಂಕಿತರ ಪ್ರಾಥಮಿಕ ಮತ್ತು ಎರಡನೇ ಹಂತದ ಸಂಪರ್ಕಿತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಬಹುತೇಕ ನೆಗೆಟಿವ್‌ ಬಂದಿವೆ.

ಫೀವರ್ ಕ್ಲಿನಿಕ್‌ ಪಾತ್ರ ಮಹತ್ತರ: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಹರಡದಂತೆ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ ಫೀವರ್‌ ಕ್ಲಿನಿಕ್‌ನ ಪಾತ್ರ ದೊಡ್ಡದಾಗಿದೆ. ಮಾರ್ಚ್‌ 31 ರಿಂದಲೇ ಜಿಲ್ಲೆಯಾದ್ಯಂತ 13 ಫೀವರ್‌ ಕ್ಲಿನಿಕ್‌ಗಳನ್ನು ಜಿಲ್ಲಾಡಳಿತ ಆರಂಭಿಸಿದೆ. ಫೀವರ್ ಕ್ಲಿನಿಕ್‌ಗಳಲ್ಲಿ ಗುರುವಾರ ಒಟ್ಟು 58 ಮಂದಿಯನ್ನು ತಪಾಸಣೆ ಮಾಡಲಾಗಿದ್ದು, ಒಟ್ಟಾರೆ 334 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಈ ಮೂಲಕ ಕೋವಿಡ್–19 ಸೋಂಕಿನ ಲಕ್ಷಣ ಇದ್ದವರನ್ನು ಸುಲಭದಲ್ಲಿ ಪತ್ತೆ ಮಾಡಲು ಸಾಧ್ಯವಾಗಲಿದ್ದು, ಇದುವರೆಗೆ ಅಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ದಣಿವರಿಯದ ಆಶಾ ಕಾರ್ಯಕರ್ತೆಯರು: ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡುವುದನ್ನು ತಡೆಯುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರವೂ ಪ್ರಮುಖವಾಗಿದೆ. ದಣಿವಿಲ್ಲದೇ ನಿರಂತರವಾಗಿ ಜಿಲ್ಲೆಯಾದ್ಯಂತ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುವ ಕೆಲಸವನ್ನು ಈ ಕಾರ್ಯಕರ್ತೆಯರು ಮಾಡಿದ್ದಾರೆ. ಅಲ್ಲದೇ ವಿದೇಶದಿಂದ ಬಂದವರು, ಅವರ ಸಂಪರ್ಕಕ್ಕೆ ಬಂದವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಈ ಅಂಕಿ–ಸಂಖ್ಯೆಗಳ ಸಹಾಯದಿಂದಲೇ ಜಿಲ್ಲಾಡಳಿತವು ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸುವುದು ಸುಲಭವಾಯಿತು. ಮೊದಲು ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವರನ್ನು ಮಾತ್ರ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಆಶಾ ಕಾರ್ಯಕರ್ತೆಯರ ಮಾಹಿತಿಯ ಪರಿಣಾಮವಾಗಿ ಬೇರೆ ವಿಮಾನ ನಿಲ್ದಾಣಗಳ ಮೂಲಕ ಜಿಲ್ಲೆಗೆ ಬಂದಿರುವವರನ್ನು ಪತ್ತೆ ಮಾಡಿ, ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇದರಿಂದಾಗಿ ಸುಮಾರು 6 ಸಾವಿರ ಜನರು ಹೋಂ ಕ್ವಾರಂಟೈನ್‌ಗೆ ಒಳಗಾದರು.

error: Content is protected !! Not allowed copy content from janadhvani.com