janadhvani

Kannada Online News Paper

ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು KCF ಮನವಿ

ಮಂಗಳೂರು: ಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಪ್ರದಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಡಾ. ಸುಬ್ರಹ್ಮನ್ಯ ಜಯಶಂಕರ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ರೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಕರ್ನಾಟಕ ಕಲ್ಚರಲ್ ಫೌಡೇಶನ್ ಮನವಿ ಮಾಡಿದೆ.

ಈ ಬಗ್ಗೆ ಪತ್ರ ಜಂಟಿ ಪತ್ರ ಬರೆದಿರುವ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಶಾಫಿ ಸಅದಿ ಮತ್ತು ಕೆ.ಸಿ.ಎಫ್ ಅಧ್ಯಕ್ಷ ಡಾ. ಶೇಕ್ ಬಾವ, ದೇಶದ ಆರ್ಥಿಕ ಬೆಳವಣಿಗೆಯ ಹಿಂದೆ ಅನಿವಾಸಿ ಭಾರತೀಯರ ಅಪಾರ ಪರಿಶ್ರಮವಿದೆ. ದೇಶ ಅವರ ಜೀವದ ಒಂದು ಭಾಗ. ಅನಿವಾಸಿ ಅನ್ನುವುದೇ ಮೂಲತಃ ಸಾಹಸೀ ಬದುಕು. ನಮ್ಮ ದೇಶದ ಅಭಿವೃದ್ಧಿಯಲ್ಲಿ ವಲಸಿಗರು ಮಹತ್ವದ ಪಾತ್ರ ವಹಿಸುತ್ತಾರೆ.ಇದೀಗ ಅವರು ಕಳವಳಕ್ಕೆ ಒಳಗಾಗುವ ಪರಿಸ್ಥಿತಿ ಇದೆ.

ಅನೇಕ ವಲಸಿಗರು ಫ್ಲ್ಯಾಟ್‌ಗಳಲ್ಲಿ ಹತ್ತು ಅಥವಾ ಹದಿನೈದು ಮಂದಿ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಇಂತಹ ಅನೇಕ ಮಂದಿಯಿದ್ದು, ಕೊಲ್ಲಿಯಾದ್ಯಂತದ ಸರಕಾರಗಳು ಅವರನ್ನು ಚೆನ್ನಾಗಿ ನೋಡಿಕೊಂಡಿದ್ದರೂ, ಕೊರೋನ ಪ್ರಪಂಚದಾದ್ಯಂತ ಹರಡುತ್ತಿರುವಂತೆ ಭಾರತೀಯ ನಾಗರಿಕರು ವಿದೇಶಗಳಲ್ಲಿ ಸುರಕ್ಷಿತ ಪರಿಸ್ಥಿತಿಗಳನ್ನು ಅನುಭವಿಸುತ್ತಿದ್ದಾರೆಯೇ ಎಂಬುದನ್ನು ಸರಕಾರ ಖಚಿತಪಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಗತ್ಯ ಆರೋಗ್ಯ ತಪಾಸಣೆಗಾಗಿ ಭಾರತದಿಂದ ವಿಶೇಷ ವೈದ್ಯಕೀಯ ತಂಡವನ್ನು ಕಳುಹಿಸಲು ಸರಕಾರ ಮುಂದಾಗಬೇಕು. ಲಾಕ್‌ಡೌನ್ ಮುಗಿದ ಕೂಡಲೇ ಕೊಲ್ಲಿಯಿಂದ ಊರಿಗೆ ಮರಳಲು ಬಯಸುವವರಿಗೆ ತಪಾಸಣೆಯ ನಂತರ ವಿಶೇಷ ವಿಮಾನವನ್ನು ಒದಗಿಸಬೇಕು. ಸರಿಯಾದ ಪರೀಕ್ಷೆ ಮತ್ತು ಸುರಕ್ಷಿತ ಕೊರೆಂಟೈನ್ ಏರ್ಪಡಿಸುವ ಮೂಲಕ ನಮ್ಮ ನಾಗರಿಕರು ಮರಳಿ ಬರುವ ಸನ್ನಿವೇಶ ಒದಗಿಸಬೇಕು ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.

ವಲಸಿಗರಿಗೆ ಆಹಾರ ಪದಾರ್ಥಗಳನ್ನು ತಲುಪಿಸುವುದು, ಅಗತ್ಯ ಔಷಧಿಗಳನ್ನು ಒದಗಿಸುವುದು, ರೋಗ ತಡೆಗಟ್ಟಲು ಹ್ಯಾಂಡ್ ಸ್ಯಾನಿಟೈಜರ್ ಮತ್ತು ಮುಖವಾಡವನ್ನು ತಲುಪಿಸುವ ಕಾರ್ಯದಲ್ಲಿ ಸರಕಾರ ಸಕ್ರಿಯ ಮೇಲ್ವಿಚಾರಣೆ ಮಾಡಬೇಕು ಎಂದು ಸಂಘಟನೆ ತಮ್ಮ ಪತ್ರದಲ್ಲಿ ವಿನಂತಿಸಿದೆ.
ಭಾರತ ದೇಶದ ಪೌರರೆಂಬ ನೆಲೆಯಲ್ಲಿ ತಮ್ಮ ಹುಟ್ಟೂರಿಗೆ ವಾಪಾಸ್ಸಾಗುವ ಮೂಲಭೂತ ಹಕ್ಕನ್ನು ವಿಶ್ವದ ವಿವಿಧ ದೇಶಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯರೆಲ್ಲರೂ ಅನುಭವಿಸಲು ಸರಕಾರ ಶ್ರಮಿಸಬೇಕು.

ವಿವಿಧ ರಾಜ್ಯಕ್ಕೆ ಮರಳುವವರನ್ನು ಅವರ ಆರೋಗ್ಯ ವಿಚಾರಣೆ – ತಪಾಸಣೆ ನಡೆಸಿ ಐಸೊಲೇಶನ್ ಅಥವಾ ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಸಾರ್ವಜನಿಕ ಕಟ್ಟಡಗಳು, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಶಾಲಾ ಕಾಲೇಜು ಕಟ್ಟಡಗಳನ್ನು ಅನಿವಾಸಿಗಳು ರೋಗ ಮುಕ್ತಿ ಹೊಂದುವ ತನಕ ತಾತ್ಕಾಲಿಕ ವಸತಿಗಳಾಗಿ ಮಾರ್ಪಡಿಸಲು ಸರಕಾರ ವ್ಯವಸ್ಥೆ ಮಾಡಬೇಕೆಂದು ಸಂಘಟನೆ ಸಂಬಂಧಪಟ್ಟವರಲ್ಲಿ ವಿನಂತಿಸಿದೆ.

error: Content is protected !! Not allowed copy content from janadhvani.com