janadhvani

Kannada Online News Paper

ಲಾಕ್‌ಡೌನ್ ವಿಸ್ತರಣೆ ಓಕೆ, ಸಮಸ್ಯೆಗಳ ನಿವಾರಣೆಯತ್ತ ನಿರ್ಲಕ್ಷ್ಯ ಏಕೆ?

ಯಾವುದೇ ಸೋಂಕಿತರಿಲ್ಲದ ಸೇಫ್ [ಗ್ರೀನ್] ಝೋನ್ ಜಿಲ್ಲೆಗಳಲ್ಲಿ ಲಾಕ್‌ಡೌನ್ ತೆರುವುಗೊಳಿಸುವುದು ಸೂಕ್ತ

✍️ ಎ. ಕೆ. ಉಮರುಲ್ ಫಾರೂಖ್ ಬಿಕ್ಕೋಡು, ಹಾಸನ

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 22ರ ಏಕದಿನ ಜನತಾ ಕರ್ಫ್ಯೂ ಘೋಷಣೆಯನ್ನು ಮೂರು ದಿನಗಳಿಗೂ ಮುನ್ನವೇ ಅಂದರೆ ಮಾರ್ಚ್ 19ಕ್ಕೆ ಪ್ರಕಟಿಸುವ ಮೂಲಕ ಆ ನಿಟ್ಟಿನಲ್ಲಿ ಜನರು ಸಿದ್ದಗೊಳ್ಳಲು ಅಗತ್ಯ ಕಾಲಾವಧಿ ನೀಡಿದ್ದರು.

ಆದರೆ ಮಾರ್ಚ್ 25ರಂದು ದೇಶದಾದ್ಯಂತ ಆರಂಭಗೊಂಡ 3 ವಾರಗಳ ಲಾಕ್ ಡೌನ್ ಘೋಷಣೆಯನ್ನು ಮುನ್ನಾದಿನ ರಾತ್ರಿ 8 ಗಂಟೆಗೆ ಪ್ರಕಟಿಸುವ ಮೂಲಕ ಆ ನಿಟ್ಟಿನಲ್ಲಿ ಸಮರ್ಪಕವಾಗಿ ಸಜ್ಜುಗೊಳ್ಳುವುದಕ್ಕೆ ಜನರಿಗೆ ಅವಕಾಶವನ್ನೇ ನೀಡದೆ ವಂಚಿಸಿದ್ದು ವಿಪರ್ಯಾಸವೇ ಸರಿ. ವಿಶೇಷತಃ ಹೊರ ಜಿಲ್ಲೆ ಅಥವಾ ಅನ್ಯ ರಾಜ್ಯಗಳಲ್ಲಿ ವೃತ್ತಿಯಲ್ಲಿರುವವರು ಲಾಕ್‌ಡೌನ್ ಕಾರಣದಿಂದ ತಂತಮ್ಮ ಮನೆಗಳಿಗೆ ತಲುಪುವುದಕ್ಕೆ ಇದರಿಂದ ಪ್ರಮುಖ ಅಡ್ಡಿಯಾಯಿತು. ಸಾರ್ವಜನಿಕ ವಾಹನಗಳ ಅಲಭ್ಯತೆಯಿಂದಾಗಿ, ಕೆಲವರು ನೂರಾರು-ಸಾವಿರಾರು ಕಿ.ಮೀ. ನಡೆದುಕೊಂಡೇ ತಂತಮ್ಮ ಊರುಗಳಿಗೆ ತೆರಳಬೇಕಾದ ವೇದನಾಜನಕ ಪಜೀತಿ ಇದರಿಂದುಂಟಾಗಿದ್ದು ಅತ್ಯಂತ ಬೇಸರದ ಸಂಗತಿ.

ಕೆಲವರು ಈ ಸಂದರ್ಭದಲ್ಲಿ ಹಸಿವು- ಸುದೀರ್ಘ ನಡಿಗೆಯ ಬಳಲಿಕೆಗಳಿಂದಾಗಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಕೂಡ. ಇಂಥವರನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದು ಸರ್ಕಾರದ ಘೋರ ವೈಫಲ್ಯಕ್ಕೊಂದು ನಿದರ್ಶನವಾಗಿದೆ. ಹೀಗೆ ಅಡಕತ್ತರಿಯಲ್ಲಿ ಸಿಲುಕಿಕೊಂಡವರಲ್ಲಿ ಇನ್ನೂ ತಂತಮ್ಮ ಮನೆಗಳಿಗೆ ತಲುಪಲಾಗದವರಿಗೆ ಈಗಲಾದರೂ ಸರ್ಕಾರ ಅಥವಾ ಸಂಘ-ಸಂಸ್ಥೆಗಳು ಮಾನವೀಯ ನೆಲೆಯಿಂದ ಅಗತ್ಯ ಸಹಕಾರ ಹಸ್ತಗಳನ್ನು ಚಾಚಬೇಕಿದೆ.

ಲಾಕ್‌ಡೌನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಬಗ್ಗೆ ಸರ್ಕಾರ ಈಗಾಗಲೇ ಸುಳಿವು ನೀಡಿದೆ.
ಕೋವಿಡ್-19 ಕಾರಣದಿಂದ ಭಾರತದಲ್ಲಿ ಲಾಕ್‌ಡೌನ್ ಅವಧಿಯನ್ನು ವಿಶ್ವ ಆರೋಗ್ಯ ಸಂಸ್ಥೆ.(W.H.O) ಸೂಚನೆಯನುಸಾರ, ಕೇಂದ್ರ ಸರ್ಕಾರವು ಜೂನ್ ತಿಂಗಳವರೆಗೆ ಮುಂದುವರಿಸುವ ಸಾಧ್ಯತೆ ಇದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆ ಬಗ್ಗೆ ಮಾಧ್ಯಮಗಳ ಮೂಲಕ ಜನರಿಗೆ ತಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂದೇಶ ರವಾನಿಸಿದೆ ಕೂಡ.

ಇರಲಿ, ಲಾಕ್ ಡೌನ್ ಅವಧಿ ವಿಸ್ತರಣೆ ಮಾಡುವ ಬಗ್ಗೆ ಯಾರದ್ದಾದರೂ ಆಕ್ಷೇಪ ಇರಲಾರದು. (ಆದರೆ ಈ ದಿಸೆಯಲ್ಲಿ ನಿರ್ದಿಷ್ಟ ಮಾನದಂಡ ಅನುಸರಿಸುವುದು ಸೂಕ್ತ.) ದೇಶದ ಮಾನವ ಸಂಪನ್ಮೂಲಕ್ಕೆ ಕೋವಿಡ್-19 ಮಾರಕ ಸಾಂಕ್ರಾಮಿಕ ವ್ಯಾಧಿಯ ಕಾರಣದಿಂದ ಯಾವುದೇ ತೊಂದರೆಯಾಗದಿರಲೆಂಬ ಅನಿವಾರ್ಯ ಕಾರಣದಿಂದ ಲಾಕ್‌ಡೌನ್ ಅವಧಿ ಮುಂದುವರಿಸಲೇಬೇಕಾದ ನಿರ್ವಾಹವಿಲ್ಲದ ಪರಿಸ್ಥಿತಿ ಒದಗಿಬಂದರೆ, ಅದನ್ನು ನಾಗರಿಕರು ಪಾಲಿಸಲೇಬೇಕಿದೆ.

ಆದರೆ ಅಷ್ಟರಿಂದಲೇ ಸಮಸ್ಯೆ ಪರಿಹಾರ ಆಗುತ್ತದೆಯೇ? ಖಂಡಿತ ಇಲ್ಲ. ಅದರ ಬದಲು ಮತ್ತಷ್ಟು ತಾಪತ್ರಯಗಳ ಸವಾಲು ಉಲ್ಬಣಗೊಳ್ಳಬಹುದು. ಒಂದೊಮ್ಮೆ ಲಾಕ್‌ಡೌನ್ ಅವಧಿ ಮುಂದುವರಿಯುತ್ತಾ ಹೋದರೆ, ಹಸಿವು, ಸೂಕ್ತ ಆಹಾರೋಪಚಾರಗಳ ಕೊರತೆಯಿಂದ ಅಪೌಷ್ಠಿಕತೆ, ಅನಾರೋಗ್ಯ, ಉದ್ಯೋಗದ ಕುರಿತಾದ ಅಭದ್ರತಾ ಭಾವ, ಮಾನಸಿಕ ಖಿನ್ನತೆ ಮತ್ತಿತರ ಸಮಸ್ಯೆಗಳು ತಲೆದೋರಬಹುದು. ಮಾರುಕಟ್ಟೆ-ಮಳಿಗೆಗಳಲ್ಲಿ ಆಹಾರ ಸಾಮಗ್ರಿ-ಸರಂಜಾಮುಗಳ ದಾಸ್ತಾನು ಇಲ್ಲವಾಗಬಹುದು. ಒಂದೊಮ್ಮೆ ಇದ್ದರೂ ಕೂಡ, ಅದನ್ನು ಖರೀದಿಸಲು ಬಡಜನರಲ್ಲಿ ಹಣ ಖಾಲಿಯಾಗಿರಬಹುದು.

ಅದರಿಂದಾಗಿ ಜನರ ಸಾವಿನ ಪ್ರಮಾಣ ಕೊರೋನಾದಿಂದಾದ ಸಾವಿನ ಸಂಖ್ಯೆಗಿಂತ ಹೆಚ್ಚಳವಾಗಬಹುದು. ಹಾಗಾಗಿ, ಸಮಸ್ತ ಭಾರತೀಯರ ಒಕ್ಕೂರಲ ಆಗ್ರಹವೆಂದರೆ, ಕೇಂದ್ರ ಅಥವಾ ಆಯಾ ರಾಜ್ಯ ಸರ್ಕಾರಗಳು ಕೇವಲ ಲಾಕ್‌ಡೌನ್ ಘೋಷಿಸಿದರಷ್ಟೇ ಅಥವಾ ಅದನ್ನು ಮುಂದುವರಿಸುವ ದಿಸೆಯಲ್ಲಿ ಕಾರ್ಯತಂತ್ರ ಹೆಣೆದರಷ್ಟೇ ಸಾಲದು. ಅಷ್ಟಕ್ಕೇ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸಬಾರದು. ಜನರಿಗೆ ಏನೇನಕ್ಕೂ ಪ್ರಯೋಜನಕ್ಕೆ ಬಾರದ ಅಥವಾ ಕೆಲವೇ ಕೆಲವು ಮಂದಿಗಷ್ಟೇ ಅನುಕೂಲವಾಗುವಂತಹ ವಿಶೇಷ ಪ್ಯಾಕೇಜುಗಳೆಂಬ ಪೊಳ್ಳು ಆಶ್ವಾಸನೆಗಳನ್ನು ನೀಡಿ, ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಬಾರದು. ಬದಲಿಗೆ, ಲಾಕ್‌ಡೌನ್ ಕಾರಣದಿಂದ ಅಥವಾ ಅದರ ವಿಸ್ತರಣೆಯಿಂದ ಎದುರಾಗಬಹುದಾದ ಸಂಕಟ-ತಾಪತ್ರಯಗಳ ಬಗ್ಗೆ ಸೂಕ್ಷ್ಮವಾಗಿ ಅರಿತುಕೊಂಡು ಜನರಿಗೆ ಪೂರಕವಾಗಿ ಸ್ಪಂದಿಸುವಂತಾಗಬೇಕು. ಉದಾಹರಣೆಗೆ: ಕೇರಳ-ತಮಿಳುನಾಡು ಮಾದರಿಯಲ್ಲಿ ದಿನಬಳಕೆಯ ಅಗತ್ಯ ಆಹಾರ ಸಾಮಗ್ರಿಗಳನ್ನು ಉಚಿತವಾಗಿ ಅಥವಾ ಅತ್ಯಂತ ಕಡಿಮೆ ದರದಲ್ಲಿ ನೇರವಾಗಿ ಮನೆ ಬಾಗಿಲಿಗೆ ತಲುಪುವಂತೆ ಸರಬರಾಜು ವ್ಯವಸ್ಥೆ ಮಾಡಬೇಕು.

ದೇಶದ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ಉಳ್ಳವರಿಗೂ ಮಾಸಿಕ ಕನಿಷ್ಠ ರೂ. 5,000ದಿಂದ 10,000 ಗಳ ಸಹಾಯಧನ ನೀಡಬೇಕು. ಈ ರೀತಿಯಲ್ಲಿ ಜನರಿಗೆ ನೆರವಾಗುವುದು ಬಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಂತಮ್ಮ ಕರ್ತವ್ಯಗಳಿಂದ ನುಣುಚಿಕೊಂಡು ಪಲಾಯನವಾದ ಅನುಸರಿಸಿದರೆ, ಜನರು ಸಾಮೂಹಿಕವಾಗಿ ಬೀದಿಗಿಳಿದು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಸಾಮೂಹಿಕ ಪ್ರತಿಭಟನೆ ನಡೆಸುವಂಥ ಪರಿಸ್ಥಿತಿ ಉದ್ಭವಗೊಳ್ಳಬಹುದು. ಒಂದೊಮ್ಮೆ ಸರ್ಕಾರ ಆ ದಿಸೆಯಲ್ಲಿ ಅಸಹಾಯಕ ಧೋರಣೆ ವ್ಯಕ್ತಪಡಿಸಿದರೆ, ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾದ ಡೇಂಜರ್ ಝೋನ್ [ರೆಡ್ ಝೋನ್] ಜಿಲ್ಲೆಗಳು ಹಾಗೂ ಕಡಿಮೆ ಪ್ರಮಾಣದಲ್ಲಿ ಸೋಂಕಿತರಿರುವ ಅಲರ್ಟ್ ಝೋನ್ [ಯೆಲ್ಲೋ ಝೋನ್] ಜಿಲ್ಲೆಗಳಲ್ಲಿ ಲಾಕ್‌ಡೌನ್ ಅವಧಿ ವಿಸ್ತರಿಸಬಹುದು. ಆದರೆ, ಕನಿಷ್ಠ ಪಕ್ಷ ಯಾವುದೇ ಸೋಂಕಿತರಿಲ್ಲದ ಸೇಫ್ ಝೋನ್ [ಗ್ರೀನ್ ಝೋನ್] ಜಿಲ್ಲೆಗಳಲ್ಲಾದರೂ (ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಅಗತ್ಯ ಮಾರ್ಗಸೂಚಿಗಳೊಂದಿಗೆ) ಲಾಕ್ ಡೌನ್ ತೆರವುಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ಪ್ರಬುದ್ಧತೆಯಿಂದ ಕೂಡಿದ ಜಾಗರೂಕತಾ ನಿರ್ಧಾರ ತಾಳಬೇಕಿದೆ.

✍️ ಎ. ಕೆ. ಉಮರುಲ್ ಫಾರೂಖ್ ಬಿಕ್ಕೋಡು, ಹಾಸನ
[ಪ್ರಧಾನ ಸಂಪಾದಕ, ಮಾರ್ದನಿ ಸಾಮಾಜಿಕ ಧ್ವನಿ ಮ್ಯಾಗಝಿನ್]

error: Content is protected !! Not allowed copy content from janadhvani.com