janadhvani

Kannada Online News Paper

✒ ಉನೈಸ್ ಸಖಾಫಿ

ದೇಶಾದ್ಯಂತ ತನ್ನ ಕಬಂಧ ಭಾಹುಗಳನ್ನು ಚಾಚುತ್ತಿರುವ ನೋವೆಲ್ ಕೊರೋನ ವೈರಸ್ ವಿರುದ್ಧ ಜಾತಿ, ಪಂಗಡ, ಸಮುದಾಯ, ಎಂಬ ಭೇದವನ್ನು ಬದಿಗಿಟ್ಟು ಎಲ್ಲರೂ ಒಟ್ಟಾಗಿ ಹೋರಾಡುತ್ತಿರುವಾಗ, ಕೆಲವೊಂದು ಕಾಮಾಲೆ ಪೀಡಿತ ದೃಶ್ಯ ,ವಾರ್ತಾ,ಮಾದ್ಯಮಗಳು ತನ್ನ ಮತೀಯ ವಿಷವನ್ನು ಕಕ್ಕುತ್ತಿದ್ದು,ಅದರಲ್ಲೂ ಕನ್ನಡ ಮಾದ್ಯಮಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಪ್ಪತ್ತನಾಲ್ಕು ಗಂಟೆಯೂ ಅದರಲ್ಲೇ ನೇತಾಡುತ್ತಿರುವುದನ್ನು ನೋಡುವಾಗ ಹೇಸಿಗೆ ಹುಟ್ಟಿಸುತ್ತದೆ.

ಈ ಮತೀಯ ಚಾನೆಲ್‌ಗಳು ಸಮೂಹದಲ್ಲಿ ಕೋಮು ವೈಷಮ್ಯವನ್ನು ಹರಡಿ, ಕೋಮು ಗಲಭೆ ಎಬ್ಬಿಸಿ, ಅದರ ಮೂಲಕ ಅಶಾಂತಿಯ ವಾತಾವರಣವನ್ನುಂಟು ಮಾಡಿ, ಅದರ ಲಾಭವನ್ನು ತನ್ನ ಕೃಪಾಪೋಷಿತ ಪಕ್ಷಕ್ಕೆ ಸಮರ್ಪಿಸುವ ಹುನ್ನಾರವನ್ನು ಹೊಂದಿದ್ದು, ಅದಕ್ಕಾಗಿ ಅದು ಒಂದು ನಿರ್ದಿಷ್ಟ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದೆ.

ಈ ಮಾಧ್ಯಮಗಳಿಗೆ ಲಾಕ್ ಡೌನ್ (ದಿಗ್ಬಂಧನ) ನಿಂದಾಗಿ ಹಲವು ಕಡೆ ಹಲವಾರು ಬಿಕ್ಷುಕರು, ಕೂಲಿ ಕಾರ್ಮಿಕರು ಬವಣೆ ಪಡುತ್ತಿರುವುದು ಕಾಣಿಸುವುದಿಲ್ಲ. ನಮ್ಮದೇ ರಾಜ್ಯದ ಬೆಳಗಾವಿಯಲ್ಲಿ ಲಾಕ್ ಡೌನ್ ಆದೇಶದ ಬಳಿಕ ಬಸ್ ನಿಲ್ದಾಣ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅಲ್ಲಿನ ಹೋಟೇಲುಗಳು ಮುಚ್ಚಿದ್ದರಿಂದ ಅನ್ನ, ನೀರು ಸಿಗದೆ ಒಬ್ಬ ಬಿಕ್ಷುಕ ದಾರುಣವಾಗಿ ಮೃತಪಟ್ಟಿದ್ದೋ, ಅಗತ್ಯ ವಸ್ತುಗಳ ಖರೀದಿಗಾಗಿ ಅಳಿಯನ ಜೊತೆ ದಿನಸಿ ಖರೀದಿಗಾಗಿ ಅಂಗಡಿಯೊಂದರ ಮುಂದೆ ನಿಂತಿದ್ದಾಗ ಯಾವುದೇ ಮುನ್ನೆಚ್ಚರಿಕೆ ನೀಡದೆ ಪೋಲೀಸರು ಲಾಠಿ ಬೀಸಿ, ಥಳಿಸಿದ ಪರಿಣಾಮ ಆ ಅಮಾಯಕ ಆದಿವಾಸಿ ವ್ಯಕ್ತಿ ಮೃತಪಟ್ಟಿದ್ದೋ ಮುಖ್ಯವಾಗಲಿಲ್ಲ.
ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ,ಅಲ್ಲಿನ ಐಸಿಯುಗೆ ಬೀಗ ಹಾಕಲಾಗಿದ್ದು, ಹಲವು ಪ್ರಯತ್ನಗಳ ಬಳಿಕ ಐಸಿಯುನ ಬಾಗಿಲು ಹೊಡೆಯಲಾಯಿತಾದರೂ ಈ ವೇಳೆಗಾಗಲೇ ಮಹಿಳೆಯ ಆರೋಗ್ಯ ಸ್ಥಿತಿ ಕ್ಷೀಣಿಸಿ ಕೊನೆಯುಸಿರೆಳೆದ ಘಟನೆಗಳು ಕಾಣಲ್ಲ. ಕ್ವಾರಂಟೈನ್ ಗೆ ಒಳಪಟ್ಟದ್ದಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಈ ಮಾಧ್ಯಮಗಳಿಗೆ ಬೇಕಿಲ್ಲ.

ಆದರೆ ತಬ್ಲೀಗ್ ಜಮಾಅತ್ ನಡೆಸಿದೆ ಎನ್ನಲಾದ ಕಾರ್ಯ ಕ್ರಮವು ಅವರಿಗೆ ತಿಳಿದದ್ದೇ ತಡ ತಮ್ಮ ಎಂದಿನ ಧಾಟಿಯಲ್ಲಿ ಒಂದು ನಿರ್ದಿಷ್ಟ ಸಮುದಾಯವು ಈ ಮಹಾಮಾರಿಯನ್ನು ಭಾರತಕ್ಕೆ ತಂದಿದ್ದು, ಅದರ ಉಗಮವು ನಿಜಾಮುದ್ದೀನ್ ಆಗಿದೆಯೆನ್ನುತ್ತಾ ಆ ಸೋಂಕು “ಕೊರೋನ 786” “ಕೊರೋನ ಜಿಹಾದ್” “ತಬ್ಲೀಗ್ ಜಿಹಾದ್” ಎಂಬ ಹೊಸ ಹೆಸರಿನೊಂದಿಗೆ ಮತಾಂತರವಾಯಿತು.

ವಿಪರ್ಯಾಸವೆಂದರೆ ಇಂತಹದೊಂದು ಉಲ್ಲಂಘನೆಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದೇ ಆದಿತ್ಯ ನಾಥ್. ಪ್ರಧಾನ ಮಂತ್ರಿಯು “ಜನತಾ ಕರ್ಫ್ಯೂ” ಸಂದೇಶ ನೀಡಿದಾಗಲೇ ಅತ್ತ ಆದಿತ್ಯನಾಥ್ ‘ಅಯೋಧ್ಯೆಯಲ್ಲಿ ರಾಮನವಮಿ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಸಮಾರಂಭದಲ್ಲಿ ಭಾಗವಹಿಸುವವರನ್ನು ರಾಮ ಕಾಪಾಡುತ್ತಾನೆ’ ಎಂದು ಒಬ್ಬ ಮುಖ್ಯಮಂತ್ರಿಯೇ ಧರ್ಮವನ್ನು ಮುಂದೊಡ್ಡಿ, ಬೇಜಾವಾಬ್ದಾರಿತನವನ್ನು ಪ್ರದರ್ಶಿಸಿಸುವಾಗ ಅವರ ಹಿಂಬಾಲಕರ ಸ್ಥಿತಿ ಹೇಗಿರಬಹುದು ಎಂದು ಊಹಿಸಿ? ಆದರೆ ತಮ್ಮ ಹೇಳಿಕೆಯನ್ನು ಅನಿವಾರ್ಯವಾಗಿ ಅವರು ಹಿಂಪಡೆಯ ಬೇಕಾಯಿತು.

ಪ್ರಧಾನಿಯವರ ಜನತಾ ಕರ್ಫ್ಯೂವನ್ನು ಬೀದಿ ಮೆರವಣಿಗೆ ಮಾಡಿ ಅವರ ಹಿಂಬಾಲಕರು ನೀರು ಪಾಲು ಮಾಡಿದ್ದು ನಮಗೆ ಗೊತ್ತಿರುವ ಸಂಗತಿ. ಮಾತ್ರವಲ್ಲ ಕೊಲ್ಕತ್ತಾದ ಬೆಲಿಯಾ ಘಾಟ್ ಮಾನಿಕ್ ವಾಲಾ ದೇವಾಲಯಗಳಲ್ಲಿ ,ಶಿರಡಿ ಸಾಯಿ ಬಾಬಾ ದೇವಾಲಯದಲ್ಲಿ, ತೆಲಂಗಾಣದ ಶ್ರೀ ಸೀತಾರಾಮ್ ಚಂದ್ರ ಸ್ವಾಮಿ ದೇವಾಲಯದಲ್ಲಿ ನಡೆದ ಉತ್ಸವದಲ್ಲಿ ಭಾರೀ ಪ್ರಮಾಣದ ಭಕ್ತಾದಿಗಳು ಸೇರಿರುವುದು ಮಾದ್ಯಮಗಳೇ ವರದಿ ಮಾಡಿದೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಬೃಹತ್ ರಥಯಾತ್ರೆ ನಡೆದು ಸರಕಾರದ ಲಾಕ್ ಡೌನ್ ಉದ್ದೇಶವನ್ನು ತಮಾಷೆಗೀಡು ಮಾಡಿತು. ಅದನ್ನು ತಡೆದ ಪೋಲೀಸರ ಮೇಲೆಯೇ ಕಲ್ಲು ತೂರಾಟ ನಡೆದು ಹಲವು ಪೊಲೀಸರು ಗಾಯಗೊಂಡಿದ್ದರು. ಹಾಗೂ ರಾಮ ನವಮಿಯ ಹೆಸರಿನಲ್ಲೂ ಜನರು ಲಾಕ್ ಡೌನ್ ಉಲ್ಲಂಘಿಸಿದ್ದರು.

ನಿಯಮ ಪಾಲಿಸಿ ಜನರಿಗೆ ಮಾದರಿಯಾಗ ಬೇಕಾದ ಜನಪ್ರತಿನಿಧಿಗಳು ಅದನ್ನು ಉಲ್ಲಂಘಿಸಿದಾಗ ಯಾವನೇ ಅಧಿಕಾರಿ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ .ಇಷ್ಟೆಲ್ಲಾ ನಿಯಮ ಉಲ್ಲಂಘನೆಗಳು ಜನಪ್ರತಿನಿಧಿಗಳೆನಿಸಿಕೊಂಡವರಿಂದಲೇ ನಡೆದಿದ್ದರೂ,
ಇವೆಲ್ಲವನ್ನೂ ಒಂದು ಬದಿಗೆ ಸರಿಸಿ ಕೇವಲ ಒಂದು ಸಮುದಾಯದ ಮೇಲೆ ಹರಿಹಾಯುವವರ ಉದ್ಧೇಶವೇನೆಂದು ಪ್ರಜ್ಞಾವಂತರು ಅರಿತಿರಬೇಕು.

ಯಾವುದೇ ಬಂಡವಾಳವಿಲ್ಲದೆ ಕಾಲ ಹರಣ ಮಾಡುತ್ತಿದ್ದ, ಕೆಲವು ರಾಜಕೀಯ ಪುಣ್ಯಾತ್ಮರು ತಮ್ಮ ರಾಜಕೀಯ ಭವಿಷ್ಯವನ್ನು ಹುಡುಕಲು, ಬಿಲದಿಂದ ಹೊರಬರಲಾರಂಬಿಸಿದ್ದು. ಕೊರೋನ ಮಹಾಮಾರಿಯಿಂದ ದೈಹಿಕವಾಗಿ ದೂರವಾದರೂ ಭಾವನಾತ್ಮಕವಾಗಿ ಒಂದಾಗಿ ಬಾಳಲು ಕಲಿತ ಜನರ ಮಧ್ಯೆ, ಕೋಮು ಬೆಂಕಿ ಹಚ್ಚಿ ಅದರ ಲಾಭವನ್ನು ಪಡೆಯಲು ಯತ್ನಿಸುವವರ ದುರುದ್ದೇಶವನ್ನು ಎಲ್ಲರೂ ಒಟ್ಟಾಗಿ ವಿಫಲಗೊಳಿಸ ಬೇಕಾಗಿದೆ.

error: Content is protected !! Not allowed copy content from janadhvani.com