janadhvani

Kannada Online News Paper

ಲಾಕ್‌ಡೌನ್: ಸಂಕಷ್ಟಕ್ಕೀಡಾದವರಿಗೆ ಸಂಬಂಧಪಟ್ಟ ಇಲಾಖೆ ಆಸರೆಯಾಗಬೇಕು

ಕೊರೋನಾ ಭೀತಿ ಕಾರಣದಿಂದಾಗಿ ಲಾಕ್ ಡೌನ್ ಸಂಕಷ್ಟ ಎದುರಾಗಿರುವುದರಿಂದ ಉದ್ಭವಗೊಂಡಿರುವ ಸಮಸ್ಯೆಗಳ ನಿವಾರಣೆಗೆ ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆ ಮಾದರಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ, ರಾಜ್ಯ-ಜಿಲ್ಲಾ ವಕ್ಫ್ ಮಂಡಳಿಗಳು ಕೂಡ ಸಂಕಷ್ಟಪೀಡಿತ ಅಲ್ಪಸಂಖ್ಯಾತ ಸಮುದಾಯಕ್ಕೆ ಆಸರೆಯಾಗಲಿ.

✍️ ಎ. ಕೆ. ಉಮರುಲ್ ಫಾರೂಖ್ ಬಿಕ್ಕೋಡು, ಬೇಲೂರು
(ಪ್ರಧಾನ ಸಂಪಾದಕ, ಮಾರ್ದನಿ ಸಾಮಾಜಿಕ ಧ್ವನಿ ಮ್ಯಾಗಝಿನ್, ಸೆಸ್ಮಾ ರಾಜ್ಯ ಮುಖ್ಯ ಕಾರ್ಯದರ್ಶಿ, ಎಮ್ಮೆಸ್ಸೆಸ್ ಸೌತ್ ಇಂಡಿಯಾ ಮಂಡಳಿ ಮಹಾ ಪ್ರಧಾನ ಕಾರ್ಯದರ್ಶಿ &ರಾಜ್ಯ ಮುಖ್ಯ ಸಂಘಟನಾ ಸಂಚಾಲಕ, JDS ಕರ್ನಾಟಕ ರಾಜ್ಯ ಪ್ಲ್ಯಾನಿಂಗ್ ಕೌನ್ಸಿಲ್)


ಕರ್ನಾಟಕದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮಂದಿ ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯಾಚರಿಸುತ್ತಿದ್ದರೆ, ಅಲ್ಪಸಂಖ್ಯಾತರಲ್ಲಿ ಬಹುಸಂಖ್ಯಾತರಾದ ಮುಸ್ಲಿಮರ ಪ್ರಾರ್ಥನಾಲಯಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕಟ್ಟಡ ವಗೈರೆಗಳು ವಕ್ಫ್ ಇಲಾಖೆ ಅಧೀನಕ್ಕೆ ಒಳಪಟ್ಟಿವೆ.

ಅಂತೆಯೇ ಹಿಂದೂ ದೇವಾಲಯಗಳಿಗೆ ಅನುಬಂಧಿತವಾಗಿ ಕಾರ್ಯಾಚರಿಸಲು ರಾಜ್ಯದಲ್ಲಿ ಮುಜರಾಯಿ ಅಥವಾ ಧಾರ್ಮಿಕ ದತ್ತಿ ಇಲಾಖೆ ಅಸ್ತಿತ್ವದಲ್ಲಿದೆ.
ಕೊರೋನಾ ಭೀತಿ ಕಾರಣ ಲಾಕ್‌ಡೌನ್ ಸಂಕಷ್ಟ ಎದುರಿಸುತ್ತಿರುವ ಜನರಿಗೆ ರಾಜ್ಯದ ಆಯ್ದ ಎ ಗ್ರೇಡ್ ದೇವಾಲಯಗಳಿಂದ ಹಸಿವಿನಿಂದ ನರಳುತ್ತಿರುವ ಜನರಿಗೆ ಆಹಾರ ಪೂರೈಕೆ ಮಾಡುವ ದಿಸೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜನತೆಯ ಬೇಡಿಕೆಗೆ ಸ್ಪಂದಿಸುವತ್ತ ಗಮನ ಹರಿಸಿದೆ.

ಗ್ರಾಮಗಳು-ಪಟ್ಟಣಗಳು ಎಂಬ ವ್ಯತ್ಯಾಸವಿಲ್ಲದೆ ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಕಾರ್ಮಿಕರು ಸೇರಿದಂತೆ ಬಡವರು, ನಿರ್ಗತಿಕರು ಲಾಕ್‌ಡೌನ್ ಕಾರಣದಿಂದ ಸೂಕ್ತ ಆಹಾರೋಪಚಾರಗಳಿಗೆ ದಾರಿಗಾಣದೆ ಹತಾಶರಾಗಿದ್ದಾರೆ. ಕೆಲವು ಕಡೆಗಳಲ್ಲಿ ಅಂಥವರಿಗೆ ಆಸರೆಯಾಗಿ ಸಾಮಾಜಿಕ ಸಂಘಸಂಸ್ಥೆಗಳು ಸ್ಪಂದನೆ ವ್ಯಕ್ತಪಡಿಸುತ್ತಿದ್ದರೂ, ಎಲ್ಲೆಡೆ ಅಂಥ ಸಹಕಾರ ಹಸ್ತಗಳ ಉದಾರತನಗಳು ಕಂಡುಬರುತ್ತಿಲ್ಲ.

ನಾಡಿನೆಲ್ಲೆಡೆ ಎಲ್ಲಾ ಧರ್ಮೀಯರ ಪ್ರಾರ್ಥನಾಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ಸ್ಥಗಿತಗೊಂಡಿದ್ದು, ಅಂತೆಯೇ ಅಲ್ಲಿಗೆ ಜನರ ಪ್ರವೇಶಕ್ಕೂ ನಿಷೇಧ ಹೇರಲಾಗಿದೆ. ವಿವಿಧ ಇಲಾಖೆಗಳಿಗೆ ಸರ್ಕಾರವು ಪ್ರತೀ ವರ್ಷದ ಬಜೆಟ್ (ಆಯವ್ಯಯ)ನಲ್ಲಿ ನಿಗದಿತ ಆರ್ಥಿಕ ಮೊತ್ತವನ್ನು ಮೀಸಲಿಡುತ್ತದೆ. ಅಂತೆಯೇ ಧಾರ್ಮಿಕ ದತ್ತಿ (ಮುಜರಾಯಿ), ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಇಲಾಖೆಗಳಿಗೂ ನಿಗದಿತ ಪ್ರಮಾಣದ ಸಾವಿರಾರು ಕೋಟಿ ರೂ. ಗಳಿಗೂ ಹೆಚ್ಚಿನ ಮೊತ್ತಗಳು ಹಂಚಿಕೆಯಾಗಿರುತ್ತದೆ.

ಆದರೆ ಸದ್ಯದ ಮಟ್ಟಿಗೆ ಪ್ರಾರ್ಥನಾಲಯಗಳಿಗೆ ಬೀಗ ಹಾಕಲಾಗಿದ್ದು, ಅಲ್ಲಿಗೆ ಭಕ್ತರ ಪ್ರವೇಶವೂ ಸ್ಥಗಿತಗೊಂಡಿದೆ. ಹಾಗಾಗಿ ಅವುಗಳಿಗೆ ಸಂಬಂಧಿಸಿದ ಇಲಾಖೆಗಳಿಗೆ ಮೀಸಲಿಟ್ಟ ಹಣವೂ ಪ್ರಸ್ತುತ ವಿನಿಯೋಗವಾಗದೆ ಬೊಕ್ಕಸದಲ್ಲೇ ಉಳಿಯುವಂತಾಗಬಹುದು. ಅಂಥ ಕೋಟ್ಯಾಂತರ ರೂಪಾಯಿಗಳ ಮೊತ್ತವು ಪ್ರಸ್ತುತ ಲಾಕ್‌ಡೌನ್ ಕಾರಣದಿಂದ ಎದುರಾಗಿರುವ ಸಂಕಷ್ಟಗಳ ನಿವಾರಣೆಗೆ ವೆಚ್ಚಗೆಯ್ಯಬೇಕಾಗಿದೆ.

ಈಗಾಗಲೇ ಸೂಚಿಸಿದಂತೆ, ಧಾರ್ಮಿಕ ದತ್ತಿ ಇಲಾಖೆಯನ್ನು ಮಾದರಿಯಾಗಿಟ್ಟುಕೊಂಡು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಗಳಂಥ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶ್ರಮಿಸುವಂಥ ಇಲಾಖೆಗಳು ಹಾಗೂ ವಕ್ಫ್ ಮಂಡಳಿಯು ತಮ್ಮ ಸಮುದಾಯದ ಜನರ ಹಸಿವು ನೀಗಿಸಲು ಪೂರಕವಾಗಿ ಸ್ಪಂದಿಸುವಂತಾಗಬೇಕು.

ವಕ್ಫ್ ಇಲಾಖೆಯು ಕೇವಲ ಮಸೀದಿ, ಮದರಸಾ, ಖಬರ್ ಸ್ಥಾನಗಳಿಗೆ ಸಂಬಂಧಿಸಿದ ವಿಚಾರಗಳಿಗಷ್ಟೇ ತಮ್ಮ ಕಾರ್ಯಾಚರಣೆಯನ್ನು ಸೀಮಿತಗೊಳಿಸುವ ಬದಲಿಗೆ ತೀರಾ ಕಷ್ಟಕರ ಜೀವನ ನಡೆಸುತ್ತಿರುವವರಿಗೆ ಆಸರೆಯಾಗುವ ನಿಟ್ಟಿನಲ್ಲಿ ಕೂಡ ಕಾರ್ಯೋನ್ಮುಖಗೊಳ್ಳಬೇಕಾಗಿದೆ.

ಲಾಕ್‌ಡೌನ್-ಕರ್ಫ್ಯೂ ಜಾರಿಯಲ್ಲಿರುವ ಈ ಸಂದರ್ಭದಲ್ಲಂತೂ ಸೂಕ್ತ ಆಹಾರ ಸಾಮಗ್ರಿಗಳ ಕೊರತೆಯಿಂದಾಗಿ ಹಸಿವು, ಅಪೌಷ್ಟಿಕತೆ, ಕಸುಬು-ಉದ್ಯೋಗವಿಲ್ಲದ ಅಭದ್ರತಾ ಭಾವ ಹಾಗೂ ಮಾನಸಿಕ ಖಿನ್ನತೆಗಳನ್ನು ಹೋಗಲಾಡಿಸಲು, ತನ್ಮೂಲಕ ಅಸಂಖ್ಯಾತ ಅಸಹಾಯಕರ ಅಮೂಲ್ಯ ಜೀವ ಉಳಿಸಲು ಸಂಬಂಧಪಟ್ಟವರು ತಕ್ಷಣವೇ ಸೂಕ್ತ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಮುನ್ನಡೆಯಬೇಕಾಗಿದೆ.

ತಂತಮ್ಮ ಇಲಾಖೆಗಳಿಗೆ ಮೀಸಲಿಟ್ಟಿರುವ ಕೋಟ್ಯಾಂತರ ಮೊತ್ತವನ್ನು ವ್ಯರ್ಥಗೊಳಿಸುವಂತಾಗಬಾರದು. ಅದರ ಬದಲಾಗಿ, ಬಡಜನರಿಗೆ, ಕೆಳ ಮಧ್ಯಮ ವರ್ಗದವರಿಗೆ ಅಥವಾ ಧನಿಕರಾಗಿದ್ದೂ ಈ ಸಂದರ್ಭದಲ್ಲಿ ಅಸಹಾಯಕರಾಗಿರುವವರಿಗೆ ನೇರವಾಗಿ ಮನೆ ಬಾಗಿಲಿಗೆ ಆಹಾರ ಪದಾರ್ಥಗಳು ಪೂರೈಕೆಯಾಗುವಂತೆ ಹಾಗೂ ಇಂತಿಷ್ಟು ಪರಿಹಾರ ಹಣವನ್ನು ನೀಡುವ ದಿಸೆಯಲ್ಲಿ ವಿನಿಯೋಗಿಸಲು ತಕ್ಷಣವೇ ಕ್ರಿಯಾಶೀಲಗೊಳ್ಳಬೇಕಾಗಿದೆ.

ವಿಶೇಷತಃ ವಕ್ಫ್ ಇಲಾಖೆಯನ್ನು ಪ್ರತಿನಿಧಿಸುವ ವಕ್ಫ್ ಮಂಡಳಿ ಕೂಡ ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯೋನ್ಮುಖಗೊಳ್ಳಬೇಕಾಗಿದೆ. ವಕ್ಫ್ ಇಲಾಖೆ-ಮಂಡಳಿಗಳ ಅಧೀನದಲ್ಲಿರುವ ಮಸೀದಿ -ಮದರಸಾಗಳಲ್ಲಿ ಕಡಿಮೆ ವೇತನ ಪಡೆದುಕೊಂಡು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಖತೀಬರು, ಮುಅದ್ಸಿನ್ ಗಳು, ಮದರಸಾ ಅಧ್ಯಾಪಕರುಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಪರಿಹಾರ ಮೊತ್ತವನ್ನು ನೀಡಲು ಮುಂದಾಗಬೇಕಾಗಿದೆ.

ತಮಗೆ ತಿಳಿದಂತೆ, ಸಾಚಾರ್ ಆಯೋಗದ ವರದಿಯನುಸಾರ ನಾಡಿನ ಬಹುತೇಕ ಮುಸ್ಲಿಮರು ದಲಿತರಿಗಿಂತಲೂ ಹೀನಾಯವಾದ ದುಸ್ತರ ಬದುಕು ಅನುಭವಿಸುತ್ತಿದ್ದಾರೆ. ಅಂಥವರಿಗೆ ಇಂಥ ಕ್ಲಿಷ್ಟಕರ ಸಂದರ್ಭದಲ್ಲಂತೂ ತುರ್ತು ಸಹಕಾರ ಹಸ್ತ ಚಾಚುವುದು ಅನಿವಾರ್ಯವಾಗಿದೆ.

ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೆ, ನಾಡಿನ ಪ್ರತಿಯೊಂದು ಜನಸಮುದಾಯಗಳ ಜನರ ನಿರೀಕ್ಷೆಗನುಸಾರ ಮುಜರಾಯಿ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ವಕ್ಫ್ ಇಲಾಖೆ-ಮಂಡಳಿಗಳು ಸೇರಿದಂತೆ ಪ್ರತಿಯೊಂದು ಇಲಾಖೆಗಳು ಪ್ರಸ್ತುತ ಲಾಕ್‌ಡೌನ್ ಕಾರಣದಿಂದ ಸೂಕ್ತ ಆಹಾರೋಪಚಾರಗಳಿಗೆ ಕೊರತೆಯುಂಟಾಗಿರುವ ಹಾಗೂ ಉದ್ಯೋಗವಿಲ್ಲದಿರುವುದರಿಂದ ಹಣವಿಲ್ಲದೆ ಹತಾಶರಾಗಿರುವವರಿಗೆ ಸಹಕಾರ ಹಸ್ತ ಚಾಚಬೇಕಾದ ಅವಶ್ಯಕತೆಯಿದೆ.ತನ್ಮೂಲಕ ಬಹಳ ಕಷ್ಟಕರ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸುವ ಮನೋಸ್ಥೈರ್ಯಗಳನ್ನು ನಾಡಿನ ಎಲ್ಲಾ ಜನರಿಗೆ ಮೂಡಿಸುವಂತೆ ಮಾಡಬೇಕಿದೆ.

ಕಷ್ಟಕಾಲದಲ್ಲಿ ಅಸಹಾಯಕರ ಪಾಲಿಗೆ ಆಪದ್ಭಾಂದವರಾಗಿ ಕರ್ತವ್ಯ ನಿರ್ವಹಿಸುವಂಥ ಸಾಮಾಜಿಕ ಸಂಘಸಂಸ್ಥೆಗಳು ಹಾಗೂ ಉದಾರ ವ್ಯಕ್ತಿಗಳಿಗೆ ಸರ್ಕಾರ, ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಆಡಳಿತಗಳು ಹಾಗೂ ಪೊಲೀಸ್ ಪಡೆಗಳು ಪ್ರೋತ್ಸಾಹಿಸಿ, ಹುರಿದುಂಬಿಸುವ ಕಾರ್ಯ ನಡೆಸಬೇಕೇ ವಿನಃ ಅಂಥವರನ್ನು ನಿರುತ್ಸಾಹಗೊಳಿಸಬಾರದು.

ಕೊನೆಯ ನುಡಿ: ಏಪ್ರಿಲ್ 01. ದೇಶದ ಆರ್ಥಿಕ ರಂಗಕ್ಕೆ ಹೊಸ ವರ್ಷ. ಹಾಗಾಗಿ ಆರ್ಥಿಕ ವರ್ಷದ ಏಪ್ರಿಲ್ ತಿಂಗಳ ಪ್ರಥಮ ವಾರದಲ್ಲೇ ಆರ್ಥಿಕ ಸಹಕಾರಕ್ಕೆ ಸಂಬಂಧಿಸಿದ ನಮ್ಮ ಪ್ರಸ್ತಾಪಗಳ ಈಡೇರಿಕೆಗೆ ಪೂರಕ ಸ್ಪಂದನೆ ತೋರ್ಪಡಿಸುವುದು ಅರ್ಥಪೂರ್ಣವಾಗಬಹುದು. ತನ್ಮೂಲಕ ಹೊಸ ಆರ್ಥಿಕ ವರ್ಷ (2020-2021)ವನ್ನು ಸಾಮಾಜಿಕ ಕಳಕಳಿಯ ಮೂಲಕ ಬರಮಾಡಿಕೊಂಡು ಸ್ವಾಗತಿಸಿದ ಆತ್ಮತೃಪ್ತಿಯನ್ನೂ ಹೊಂದಬಹುದು.

error: Content is protected !! Not allowed copy content from janadhvani.com