janadhvani

Kannada Online News Paper

ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಪ್ರಾರ್ಥನಾ ಶಕ್ತಿಯೊಂದೇ ಸಾಕೇ ?-ಪ್ರವಾದಿ ﷺರು ಕೂಡಾ ಈ ವಾದವನ್ನು ಒಪ್ಪುವುದಿಲ್ಲ

ಪ್ರಾರ್ಥನೆಯ ಶಕ್ತಿಯೊಂದೇ ಸಾಕೇ, ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು?

ಪ್ರವಾದಿ ಮುಹಮ್ಮದ್ ﷺರು ಕೂಡಾ ಈ ವಾದವನ್ನು ಒಪ್ಪುವುದಿಲ್ಲ

ಇದು ಅಮೇರಿಕಾದ ಪ್ರಸಿದ್ಧ ವಾರ್ತಾ ಮಾಧ್ಯಮ Newsweek ನಲ್ಲಿ ಪ್ರಕಟಗೊಂಡ ರೈಸ್ ಯುನಿವರ್ಸಿಟಿಯ ಸೋಶಿಯೋಲಜಿ ಪ್ರೊಪೆಸರ್ ಡಾ| ಕ್ರೇಗ್ ಕಾನ್ಸಿಡಿನ್ ರವರ ಲೇಖನದ ಕನ್ನಾಡಾನುವಾದ

✍ ಅನುವಾದ:ನಝೀರ್ ಕೆಮ್ಮಾರ ( ಚೀಫ್ ಅಡ್ಮಿನ್ ,ಜನಧ್ವನಿ)

ಕೋವಿಡ್-19 ಎಂಬ ಸಾಕ್ರಾಮಿಕ ರೋಗವು ಸರಕಾರ ಮತ್ತು ಸುದ್ದಿ ಮಾಧ್ಯಮಗಳನ್ನು ಅತ್ಯಂತ ನಿಖರ ಮತ್ತು ಸಹಾಯಕವಾದ ಸಲಹೆಗಳನ್ನು ಈ ಜಗತ್ತಿನ ಜನರಿಗೆ ನೀಡುವಂತೆ ಒತ್ತಡ ಮಾಡುತ್ತಿದೆ. ಈಗಾಗಲೇ ಪ್ರಪಂಚದ ಎಲ್ಲಾ ಕಡೆಗಳಿಗೆ ಈ ರೋಗ ತಲುಪಿಯಾಗಿದೆ. ಆರೋಗ್ಯ ಕಾರ್ಯಕರ್ತರು ಅತ್ಯಂತ ಬೇಡಿಕೆಯಲ್ಲಿದ್ದಾರೆ. ಅವರ ಜತೆಯಲ್ಲಿ ಈ ಸಾಂಕ್ರಾಮಿಕ ರೋಗದ ಪಸರಿಸುವಿಕೆಯ ಅಧ್ಯಯನದಲ್ಲಿ ತೊಡಗಿರುವ ವಿಜ್ಞಾನಿಗಳೂ ಇದ್ದಾರೆ.

ತಜ್ಞರ ಪೈಕಿ ರೋಗ ನಿರೋಧಕ ತಜ್ಞ ಡಾ. ಅಂತೋನಿ ಫೌಸಿ ಮತ್ತು ವೈದ್ಯಕೀಯ ವರದಿಗಾರ ಡಾ. ಸಂಜಯ್ ಗುಪ್ತಾರವರು ನೀಡಿದ ಸಲಹೆಗಳು ಈ ರೀತಿಯಿದೆ ಉತ್ತಮ ನೈರ್ಮಲ್ಯ ಕಾಪಾಡುವುದು ಮತ್ತು ಕ್ವಾರಾಂಟೈನ್ ಅಥವಾ ಇತರರೊಂದಿಗೆ ಸಂಪರ್ಕ ತಡೆಯುವುದು ಈ ಮಾರಕ ರೋಗದಿಂದ ರಕ್ಷಿಸಿಕೊಳ್ಳಲು ಇರುವ ಸುರಕ್ಷತಾ ಮಾರ್ಗ.

ಸಾಂಕ್ರಾಮಿಕ ರೋಗದ ಸಮಯದಲ್ಲಿ ಉತ್ತಮ ನೈರ್ಮಲ್ಯ ಮತ್ತು ಸಂಪರ್ಕತಡೆಯನ್ನು ಬೇರೆ ಯಾರು ಸೂಚಿಸಿದ್ದಾರೆಂದು ನಿಮಗೆ ತಿಳಿದಿದೆಯೇ?

1,300 ವರ್ಷಗಳ ಹಿಂದೆ ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ﷺ ಮಾರಣಾಂತಿಕ ಕಾಯಿಲೆಗಳ ವಿಷಯಗಳಲ್ಲಿ ಅವರು ಖಂಡಿತವಾಗಿಯೂ “ಸಾಂಪ್ರದಾಯಿಕ” ತಜ್ಞರಲ್ಲದಿದ್ದರೂ, ಪ್ರವಾದಿ ಮುಹಮ್ಮದ್ ﷺ ಅವರು COVID-19 ನಂತಹ ರೋಗದ ಬೆಳವಣಿಗೆಯನ್ನು ತಡೆಗಟ್ಟಲು ಮತ್ತು ಎದುರಿಸಲು ಉತ್ತಮ ಸಲಹೆಯನ್ನು ನೀಡಿದ್ದರು.

ಪ್ರವಾದಿ ಮುಹಮ್ಮದ್ﷺ ಹೇಳಿದರು: “ಒಂದು ದೇಶದಲ್ಲಿ ಪ್ಲೇಗ್ ಹರಡುವುದನ್ನು ನೀವು ಕೇಳಿದರೆ, ಆ ಊರಿಗೆ ಪ್ರವೇಶಿಸಬೇಡಿ; ಆದರೆ ನೀವು ಇರುವಾಗ ಒಂದು ಸ್ಥಳದಲ್ಲಿ ಪ್ಲೇಗ್ ಹರಡಿದರೆ, ಆ ಸ್ಥಳವನ್ನು ಬಿಡಬೇಡಿ.”

ಅವರು ಹೇಳಿದರು: “ಸಾಂಕ್ರಾಮಿಕ ಕಾಯಿಲೆ ಇರುವವರನ್ನು ಆರೋಗ್ಯವಂತರಿಂದ ದೂರವಿಡಬೇಕು.”

ಜನರನ್ನು ಸೋಂಕಿನಿಂದ ಸುರಕ್ಷಿತವಾಗಿರಿಸುವ ಆರೋಗ್ಯಕರ ಅಭ್ಯಾಸಗಳಿಗೆ ಬದ್ಧರಾಗಿರಲು ಮುಹಮ್ಮದ್ﷺರು ಜನರನ್ನು ಬಲವಾಗಿ ಪ್ರೋತ್ಸಾಹಿಸಿದರು.

ಈ ಕೆಳಗಿನ ಹದೀಸ್ ಅಥವಾ ಪ್ರವಾದಿ ಮುಹಮ್ಮದ್ ﷺ ಅವರ ನುಡಿಗಳನ್ನು ಪರಿಗಣಿಸಿ:

“ಶುದ್ಧಿ (ಸ್ವಚ್ಛತೆ) ಯು (ವಿಶ್ವಾಸ) ನಂಬಿಕೆಯ ಭಾಗವಾಗಿದೆ.”

“ನೀವು (ನಿದ್ದೆಯಿಂದ) ಎಚ್ಚರವಾದ ನಂತರ ನಿಮ್ಮ ಕೈಗಳನ್ನು ತೊಳೆಯಿರಿ; ನೀವು ನಿದ್ದೆ ಮಾಡುವಾಗ ನಿಮ್ಮ ಕೈಗಳು ಎಲ್ಲಿ ಚಲಿಸುತ್ತವೆ ಎಂದು ನಿಮಗೆ ತಿಳಿದಿಲ್ಲ.”

“ಆಹಾರದ ಬರಕತ್ತು ತಿನ್ನುವ ಮೊದಲು ಮತ್ತು ನಂತರ ಕೈ ತೊಳೆಯುವುದರಲ್ಲಿ ಅಡಗಿದೆ.”

ಯಾರಾದರೂ ತನ್ನ ಸಹಚರರು ರೋಗಕ್ಕೆ ತುತ್ತಾದರೆ ಯಾವ ರೀತಿಯ ಸಲಹೆಯಾಗಿರಬಹುದು ಪ್ರವಾದಿವರ್ಯರು ﷺ ನೀಡಿದ್ದು?

ಅವರು ಯಾವಾಗಲೂ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿಗಳನ್ನು ಪಡೆಯಲು ಜನರನ್ನು ಪ್ರೋತ್ಸಾಹಿಸುತ್ತಿದ್ದರು: “ವೈದ್ಯಕೀಯ ಚಿಕಿತ್ಸೆಯನ್ನು ಬಳಸಿಕೊಳ್ಳಿ” ಏಕೆಂದರೆ, “ಒಂದು ರೋಗವನ್ನು ಹೊರತುಪಡಿಸಿ (ಮರಣ), ಅದಕ್ಕೆ ಮದ್ದನ್ನು ಸೃಷ್ಟಿಸದೇ ಅಲ್ಲಾಹನು ಯಾವುದೇ ರೋಗವನ್ನು ಸೃಷ್ಟಿಸಿಲ್ಲ” ಎಂದು ಅವರು ಹೇಳಿದ್ದರು.

ಬಹುಮುಖ್ಯವಾಗಿ, ನಂಬಿಕೆ ಮತ್ತು ಕಾರಣಗಳ ಮಧ್ಯೆ ಸಮತೋಲನವನ್ನು ಮಾಡಲು ಅವರು ತಿಳಿದಿದ್ದರು. ಇತ್ತೀಚಿನ ಸಂದರ್ಭಗಳಲ್ಲಿ ಕೊರೋನಾ ವೈರಸ್‌ನಿಂದ ಬಚಾವಾಗಲು ನೈರ್ಮಲ್ಯ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಿಂತ ಪ್ರಾರ್ಥನೆಯೊಂದೇ ದಾರಿ ಎಂಬ ಕೆಲವರ ಸಮರ್ಥನೆಗಳಿಗೆ, ಪ್ರಾರ್ಥನೆಯೊಂದೇ ಔಷದಿ ಅನ್ನುವ ಬಗ್ಗೆ ಪ್ರವಾದಿವರ್ಯರ ಸೂಚನೆ ಯಾವ ರೀತಿ ಇದೆ ನೋಡೋಣ.

ಈ ಕೆಳಗಿನ ಸಂದರ್ಭವನ್ನೊಮ್ಮೆ ಗಮನಿಸಿ, 9ನೇ ಶತಮಾನದ ಪರ್ಷಿಯನ್ ವಿದ್ವಾಂಸ ನಮಗೆ ತಿಳಿಸುತ್ತಾರೆ. ಒಂದು ದಿನ ಪ್ರವಾದಿ ಮುಹಮ್ಮದ್ ﷺರು ಓರ್ವ ಅಹ್‌ರಾಬಿಯಾದ ಮನುಷ್ಯ ತನ್ನ ಒಂಟೆಯನ್ನು ಕಟ್ಟದೇ ಬಿಟ್ಟಿರುವುದನ್ನು ಗಮನಿಸುತ್ತಾರೆ ಮತ್ತು ಆತನೊಂದಿಗೆ ಕೇಳುತ್ತಾರೆ. “ನೀನೇಕೆ ಒಂಟೆಯನ್ನು ಕಟ್ಟದೇ ಬಿಟ್ಟಿದ್ದಿಯಾ?” ಆತ ಉತ್ತರಿಸುತ್ತಾನೆ “ನಾನು ಸೃಷ್ಠಿಕರ್ತನ ಮೇಲೆ ವಿಶ್ವಾಸವನ್ನಿಟ್ಟಿದ್ದೇನೆ” ಆಗ ಪ್ರವಾದಿವರ್ಯರು “ಮೊದಲು ನೀನು ಒಂಟೆಯನ್ನು ಕಟ್ಟಿ ಬಿಡು, ನಂತರ ಅಲ್ಲಾಹನ ಮೇಲೆ ವಿಶ್ವಾಸ (ತವಕ್ಕುಲ್) ಮಾಡು”

ಪ್ರವಾದಿ ಮುಹಮ್ಮದ್ ﷺರು ಮಾನವ ಸಮೂಹಕ್ಕೆ ಧರ್ಮದಿಂದ ಮಾರ್ಗದರ್ಶನ ಪಡೆಯಬೇಕೆಂದು ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಎಲ್ಲರ ಸ್ಥಿರತೆ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಕೈಗೊಳ್ಳುವಂತೆ ಪ್ರೇರಿಪಿಸಿದ್ದಾರೆ.

ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ, ಜನರು ತಮ್ಮ ಸಾಮಾನ್ಯ ತಿಳುವಳಿಕೆಯಿಂದ ವರ್ತಿಸಬೇಕೆಂದು ಅವರು ಬಯಸಿದ್ದರೆನ್ನಬಹುದು.

error: Content is protected !! Not allowed copy content from janadhvani.com