ಮಂಗಳೂರು, ಮಾ 18:- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ಮಂಗಳೂರು ನಗರಕ್ಕೆ ಭೇಟಿ ನೀಡಿ ನೋವೆಲ್ ಕೊರೊನಾ ವೈರಸ್ ಸೋಂಕು ಹಬ್ಬುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡಿರುವ ವಿವಿಧ ಕ್ರಮಗಳನ್ನು ಮಂಗಳವಾರ ಪರಿಶೀಲಿಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೊನಾ ವೈರಸ್ ತಡೆ ಗಟ್ಟಲು ರಾಜ್ಯ ಆರೋಗ್ಯ ಇಲಾಖೆ ಅತ್ಯುತ್ತಮ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈವರೆಗೆ ೧ ಲಕ್ಷದ ೭೫ ಸಾವಿರ ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು ಒಟ್ಟು ೧೦ ಪಾಸಿಟೀವ್ ಪ್ರಕರಣಗಳು ವರದಿಯಾಗಿವೆ. ಶಂಕಿತ ವ್ಯಕ್ತಿಗಳ ರಕ್ತ, ಕಫ ಮತ್ತಿತರ ಮಾದರಿಗಳ ಪರೀಕ್ಷಾ ಪ್ರಯೋಗಾಲಯವನ್ನು ಸದ್ಯದಲ್ಲಿಯೇ ವೆನ್ ಲಾಕ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದರು.
ಔಷಧಿ ಅಂಗಡಿ ವ್ಯಾಪಾರಿಗಳು ಮುಖಗವುಸು ಮತ್ತಿತರ ವೈದ್ಯಕೀಯ ಪರಿಕರಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಬಾರದು ಎಂದು ತಾಕೀತು ಮಾಡಿದ ಸಚಿವ ಶ್ರೀರಾಮುಲು ಒಂದೊಮ್ಮೆ, ದುಬಾರಿ ಬೆಲೆಗಳಿಗೆ ಮಾರಾಟ ಮಾಡಿದರೆ ಅಂತಹ ಅಂಗಡಿ ಮಾಲೀಕರ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾಸರಗೋಡಿನ ವ್ಯಕ್ತಿಯೊಬ್ಬನಿಗೆ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು ಜಿಲ್ಲಾಡಳಿತ ಈ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ, ಆತನ ಕುಟುಂಬ ಹಾಗೂ ಸ್ನೇಹಿತ ಸಂಪರ್ಕರನ್ನು ಸಾಧಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು.