janadhvani

Kannada Online News Paper

ನವದೆಹಲಿ ,ಫೆ.26: ಸಿಎಎ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೇಂದ್ರ ಮತ್ತು ದೆಹಲಿಯ ಕೇಜ್ರಿವಾಲ್ ಸರ್ಕಾರ ಎರಡನ್ನೂ ದೂಷಿಸಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿ ಹಿಂಸಾಚಾರದ ಹೊಣೆಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ದೆಹಲಿ ಹಿಂಸಾಚಾರವನ್ನು “ಯೋಜಿತ ಪಿತೂರಿ” ಎಂದು ಕರೆದಿರುವ ಸೋನಿಯಾ ಗಾಂಧಿ, ಕಳೆದ 72 ಗಂಟೆಗಳಲ್ಲಿ ದೆಹಲಿ ಪೊಲೀಸರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ದೆಹಲಿ ಘಟನೆಗೆ ಸಂಬಂಧಿಸಿದಂತೆ ಇಂದು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಸೋನಿಯಾ ಗಾಂಧಿ, “ದೆಹಲಿ ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಈ ಎಲ್ಲರ ಸಾವಿಗೂ ಕಾಂಗ್ರೆಸ್ ಸಂತಾಪ ಸೂಚಿಸುತ್ತದೆ. ಅಲ್ಲದೆ, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗುವ ವಿಶ್ವಾಸವಿದೆ.

ಆದರೆ, ಈ ಗಲಭೆಗೆ ಕೇಂದ್ರ ಸರ್ಕಾರದ ನಿಷ್ಕ್ರಿಯತೆಯೇ ಕಾರಣ. ಹೀಗಾಗಿ ಮೊದಲು ಕೇಂದ್ರ ಸರ್ಕಾರ ಈ ಹಿಂಸಾಚಾರವನ್ನು ಅರಿತುಕೊಳ್ಳಬೇಕು ಮತ್ತು ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

ಈಶಾನ್ಯ ದೆಹಲಿ ಭಾಗದಲ್ಲಿ 20 ಜನರನ್ನು ಬಲಿ ಪಡೆದಿರುವ ಕೋಮು ಹಿಂಸಾಚಾರದ ಕುರಿತು ಚರ್ಚಿಸಲು ಕಾಂಗ್ರೆಸ್ ಉನ್ನತ ನಾಯಕತ್ವ ಇಂದು ಕಾರ್ಯಕಾರಿ ಸಮಿತಿ ಸಭೆಗೆ ಕರೆ ನೀಡಿತ್ತು. ಈ ಸಭೆಯಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಎ.ಕೆ. ಆಂಟನಿ, ಗುಲಾಮ್ ನಬಿ ಆಜಾದ್, ಪಿ. ಚಿದಂಬರಂ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆದರೆ, ವಿದೇಶದ ಪ್ರವಾಸದಲ್ಲಿದ್ದ ಕಾರಣ ರಾಹುಲ್ ಗಾಂಧಿ ಈ ಸಭೆಗೆ ಹಾಜರಾಗಿರಲಿಲ್ಲ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಳಿಕ ಬಿಜೆಪಿ ಎದುರು ಕಾಂಗ್ರೆಸ್ 6 ಪ್ರಶ್ನೆಗಳನ್ನು ಮುಂದಿಟ್ಟಿದೆ.

ಪ್ರಶ್ನೆ1- ದೆಹಲಿ ಗಲಭೆ ನಡೆಯುತ್ತಿದ್ದಾಗ ಕೇಂದ್ರದ ಗೃಹ ಸಚಿವರು ಎಲ್ಲಿದ್ದರು ಮತ್ತು ಕಳೆದ ಭಾನುವಾರದಿಂದ ಅವರು ಏನು ಮಾಡುತ್ತಿದ್ದರು?ಪ್ರಶ್ನೆ 2- ದೆಹಲಿ ಚುನಾವಣೆ ಮುಗಿದ ದಿನಗಳಿಂದ ಇಂದಿನ ವರೆಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ವರದಿಗಳು ಯಾವುವು?

ಪ್ರಶ್ನೆ 3-ಕೇಂದ್ರ ಗೃಹ ಇಲಾಖೆ ಹೇಳಿದಂತೆ ಈ ಗಲಭೆ ಪ್ರಚೋದಿಸಲ್ಪಟ್ಟಿದೆಯೇ?

ಪ್ರಶ್ನೆ 4- ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂಬ ಸ್ಪಷ್ಟ ಸೂಚನೆಗಳು ಇದ್ದಾಗ್ಯೂ ಭಾನುವಾರ ರಾತ್ರಿ ನಿಯೋಜಿಸಲಾದ ಪೊಲೀಸ್ ಪಡೆಯ ಶಕ್ತಿ ಎಷ್ಟು?

ಪ್ರಶ್ನೆ5- ಪರಿಸ್ಥಿತಿ ದೆಹಲಿ ಪೊಲೀಸರ ನಿಯಂತ್ರಣ ಮೀರಿದೆ ಎಂಬುದು ಸ್ಪಷ್ಟವಾದಾಗ ಹೆಚ್ಚುವರಿ ಭದ್ರತಾ ಪಡೆಗಳನ್ನು ತಕ್ಷಣವೇ ಕರೆಯಲಿಲ್ಲವೇಕೆ?

ಪ್ರಶ್ನೆ 6- ಘಟನೆ ನಡೆದಾಗ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಎಲ್ಲಿದ್ದರು ಮತ್ತು ಕಳೆದ ಭಾನುವಾರದಿಂದ ಅವರು ಏನು ಮಾಡುತ್ತಿದ್ದರು?

error: Content is protected !!
%d bloggers like this: