ಅಬುಧಾಬಿ: ಕೋಟಿಗಳ ಬಹುಮಾನ ಭರವಸೆ ನೀಡಿ ವಂಚನೆ- 142 ಮಂದಿ ಬಂಧನ

ಅಬುಧಾಬಿ: ಕೋಟಿ ರೂ.ಗಳ ಬಹುಮಾನ ಲಭಿಸಿರುವುದಾಗಿ ನಕಲಿ ಭರವಸೆ ನೀಡಿ ವಂಚಿಸಿದ ಆರೋಪದಡಿ 142 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಭರವಸೆ ನೀಡುವವರ ಬಲೆಗೆ ಬೀಳದಂತೆ ಪೊಲೀಸರು ಎಚ್ಚರಿಕೆ ನೀಡಿದರು. ಅಬುಧಾಬಿ ಪೊಲೀಸರು 13 ಗ್ಯಾಂಗ್‌ಗಳ 142 ಜನರನ್ನು ಬಂಧಿಸಿದ್ದಾರೆ.

ವಂಚಕರ ಗ್ಯಾಂಗ್, ದೂರವಾಣಿ ಅಥವಾ ಎಸ್ಸೆಮ್ಮೆಸ್ ಮೂಲಕ ಕೋಟ್ಯಂತರ ರೂ. ಲಭಿಸಿರುವುದಾಗಿ ಸಂದೇಶವನ್ನು ಕಳುಹಿಸಿ, ಮೊತ್ತವನ್ನು ವರ್ಗಾಯಿಸಲು ಬ್ಯಾಂಕ್ ಖಾತೆ ಸಂಖ್ಯೆ, ರಹಸ್ಯ ಸಂಖ್ಯೆ ಮತ್ತು ಒಟಿಪಿಯನ್ನು ಕೇಳಲಾಗುತ್ತದೆ. ಇದನ್ನು ಸ್ವೀಕರಿಸಿದ ನಂತರ, ಖಾತೆಯ ಮೇಲೆ ಹಿಡಿತ ಸಾಧಿಸುವ ಗ್ಯಾಂಗ್ ಸಂಪೂರ್ಣ ಮೊತ್ತವನ್ನು ವಶಪಡಿಸಿ ಕೊಳ್ಳುತ್ತದೆ.

ಯಾವುದಾದರೂ ವ್ಯವಹಾರ ನಡೆಸುವ ವೇಳೆ ಗ್ರಾಹಕನು ವಂಚಿತನಾದ ಬಗ್ಗೆ ತಿಳಿಯುತ್ತಾನೆ. ಭಾರತೀಯರು ಸೇರಿದಂತೆ ಅನೇಕ ವಿದೇಶಿಯರು ಮೋಸ ಹೋಗಿದ್ದಾರೆ. 2019ರಿಂದ ಈ ವರ್ಷ ಫೆಬ್ರವರಿ 9ರವರೆಗೆ 142 ಜನರನ್ನು ಬಂಧಿಸಲಾಗಿದೆ. ದುಬೈ ಮತ್ತು ಅಜ್ಮಾನ್ ಮೂಲದ ವಂಚನಾ ಜಾಲವನ್ನು ಆಯಾ ಎಮಿರೇಟ್ಸ್‌ನಲ್ಲಿ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ.

ಸುಳ್ಳು ಭರವಸೆಗಳಿಂದ ಮೋಸಹೋಗಬಾರದು ಅಥವಾ ಗೌಪ್ಯ ಮಾಹಿತಿಯನ್ನು ರವಾನಿಸಬಾರದು ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಸಮಯಕ್ಕೆ ಸರಿಯಾಗಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ. ಎಟಿಎಂ ವಹಿವಾಟುಗಳನ್ನು ಎಚ್ಚರಿಕೆಯಿಂದ ಮಾಡುವಂತೆಯೂ ಪೊಲೀಸರು ಎಚ್ಚರಿಸಿದ್ದಾರೆ.

ಇಂತಹ ಹಗರಣಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವ್ಯಾಪಕ ಜಾಗೃತಿ ಮೂಡಿಸಲಾಗಿದೆ. ಜನರು ಹೆಚ್ಚಾಗಿ ಸೇರುವ ಕಡೆಗಳಲ್ಲಿ ಮಲಯಾಳಂ, ಉರ್ದು, ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಈ ಕುರಿತು ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಸುಳ್ಳು ಫೋನ್ ಕರೆ ಬಂದರೆ 800 2626 ಗೆ ಕರೆ ಮಾಡಬೇಕೆಂದು ಪೊಲೀಸರು ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!