ಕುವೈತ್ ಸಿಟಿ: ಕುವೈತ್ನಲ್ಲಿ ಬಂಧನಕ್ಕೊಳಗಾದ ವಿದೇಶಿ ಪ್ರಜೆಗಳನ್ನು ಊರಿಗೆ ವಾಪಸ್ ಕಳುಹಿಸಲು ಕುವೈತ್ ಯೋಜಿಸಿದೆ. ಉಳಿದ ಕಾಲಾವಧಿಯನ್ನು ತಮ್ಮ ಊರಿನ ಜೈಲಿನಲ್ಲಿ ಕಳೆಯುವ ಷರತ್ತಿನ ಮೇಲೆ ಊರಿಗೆ ಕಳುಹಿಸಲು ಕುವೈತ್ ಯೋಜಿಸಿದ್ದು, ಭಾರತ ಸೇರಿದಂತೆ ಏಳು ದೇಶಗಳ ಸಹಕಾರವನ್ನು ಕುವೈತ್ ಬಯಸುತ್ತಿದೆ.
ಕುವೈತ್ನ ಕೇಂದ್ರ ಕಾರಾಗೃಹದಲ್ಲಿ ಹೆಚ್ಚಿನ ಸಂಖ್ಯೆಯ ಕೈದಿಗಳ ದಟ್ಟಣೆಯನ್ನು ಮನಗಂಡು ಈ ತೀರ್ಮಾನಕ್ಕೆ ಕುವೈತ್ ಮುಂದಾಗಿದೆ ಎನ್ನಲಾಗಿದೆ. ಅಗತ್ಯವಿದ್ದಾಗ ಕೈದಿಗಳ ಮರಳುವಿಕೆಗೆ ಸಂಬಂಧಪಟ್ಟ ದೇಶಗಳು ಖಾತರಿ ನೀಡಬೇಕೆಂಬ ಷರತ್ತಿನ ಮೇಲೆ ಕುವೈತ್ ಭಾರತ, ಇರಾನ್, ಈಜಿಪ್ಟ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಸಹಕಾರವನ್ನು ಕೋರಿದ್ದು, ಇವು ಕೈದಿಗಳನ್ನು ವರ್ಗಾವಣೆ ಮಾಡುವ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದ ದೇಶಗಳಾಗಿವೆ.
ರಾಷ್ಟ್ರೀಯ ಭದ್ರತಾ ಅಪರಾಧಿಗಳನ್ನು ಹಸ್ತಾಂತರಿಸುವುದಿಲ್ಲ ಎಂದು ಕುವೈತ್ ಘೋಷಿಸಿದೆ. ಆದರೆ ಕುವೈತ್ ಪ್ರಸ್ತಾಪಕ್ಕೆ ಇರಾನ್ ಮತ್ತು ಇರಾಕ್ ಮಾತ್ರ ಪ್ರತಿಕ್ರಿಯಿಸಿದವು. ಕಳೆದ ಕೆಲವು ದಿನಗಳಲ್ಲಿ, ಇರಾಕ್ 13 ಖೈದಿಳನ್ನು ಮತ್ತು ಇರಾನ್ ಮೂರು ಬ್ಯಾಚ್ ಗಳಲ್ಲಿ 130 ಕೈದಿಗಳನ್ನು ಸ್ವೀಕರಿಸಿದೆ. ಪ್ರಸ್ತುತ ಸುಮಾರು 500 ಭಾರತೀಯ ಖೈದಿಗಳು ವಿವಿಧ ಅಪರಾಧಗಳಿಗೆ ಸಂಬಂಧಿಸಿ ಕುವೈತ್ನ ಜೈಲಿನಲ್ಲಿದ್ದಾರೆ, ಕೈದಿಗಳನ್ನು ಹಸ್ತಾಂತರಿಸುವ ಬಗ್ಗೆ 5 ವರ್ಷಗಳ ಹಿಂದೆ ಭಾರತ ಮತ್ತು ಕುವೈತ್ ನಡುವೆ ಒಪ್ಪಂದ ನಡೆದಿದ್ದವು.