janadhvani

Kannada Online News Paper

✍ ಹಾಫಿಝ್ ಮುಹಮ್ಮದ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)

ಮೊನ್ನೆ ಕಾವಳಕಟ್ಟೆ ಜಲಾಲಿಯಾ ಮಜ್ಲಿಸ್‌ನಲ್ಲಿ ಮುಖ್ಯಭಾಷಣ ನಮ್ಮ ಕೆಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಉಸ್ತಾದರಿಗಾಗಿತ್ತು. ಹಾಸ್ಯ ತುಂಬಿದ ಚಿಂತನಾರ್ಹ ಸಕಾಲಿಕವಾದ ಮಾತುಗಳಿಂದ ಸಮೃದ್ಧಗೊಂಡ ಅವರ ಭಾಷಣ ಅದ್ಭುತವಾಗಿತ್ತು. ಕೊನೆಯಲ್ಲಿ ಆ ಧನ್ಯ ಮಜ್ಲಿಸ್‌ನಲ್ಲಿ ಕಾವಳಕಟ್ಟೆ ಹಝ್ರತ್ ರವರು ಅವರಿಗೆ ಶಾಲು ಹೊದಿಸಿ ಸನ್ಮಾನವನ್ನೂ ಮಾಡಿ ಗೌರವಿಸಿದರು.

ಅಂದೇ ಮಧ್ಯಾಹ್ನ ಸುನ್ನೀ ಕೋರ್ಡಿನೇಶನ್ ಸಭೆಯಲ್ಲೂ ಕೂಡ ಪ್ರತ್ಯೇಕವಾಗಿ ಅಭಿನಂದಿಸಿ ಸನ್ಮಾನಿಸಲಾಗಿತ್ತು. ಕಾರಣ ಈ ಬಾರಿ ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡು-ನುಡಿಗೆ ಸಲ್ಲಿಸಿದ ಸೇವೆಗಾಗಿ ಸನ್ಮಾನಿಸಲ್ಪಡುವ ಪ್ರಮುಖರಲ್ಲಿ ನಮ್ಮ ಕೆಎಂ ಅಬುಬಕರ್ ಸಿದ್ದಿಕ್ ಎಂಬುದಾಗಿ ಅವರು ಪ್ರಮುಖರಾಗಿದ್ದಾರೆ. ಕರ್ನಾಟಕದ ಸುನ್ನೀ ಸಾಹಿತ್ಯ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದ ಈ ಕೆಎಂ ಸರ್! ಅಭಿಮಾನಿಗಳಿಂದ ಕೆಎಂ ಸರ್ ಎಂದೂ ಮಲೆನಾಡಿಗರಿಂದ ಕೆಎಂ ಉಸ್ತಾದ್ ಎಂದೂ ಸುನ್ನೀ ಸಂಘಕುಟುಂಬದ ಮಧ್ಯೆ ಕೆಎಂ ಮೋಂಟುಗೋಳಿ ಎಂದೂ ಕರೆಯಲ್ಪಡುವ ಸಕಲ ಕಲಾ ವಲ್ಲಭ!!

ಮಾತಿಗೆ ನಿಂತರೆ ಹೊಟ್ಟೆಹುಣ್ಣಾಗುವಷ್ಟು ನಗಿಸುವ ಹಾಸ್ಯ ತುಂಬಿದ ಮಾತುಗಳು, ಮೈಕ್ ಮುಂದೆ ನಿಂತರೆ ನಿರರ್ಗಳವಾಗಿ ಮಾತನಾಡಬಲ್ಲ ಬಹುಭಾಷಾ ಭಾಷಣ ಕಲೆ, ಲೇಖನಿ ಎತ್ತಿದರೆ ಎಂಥಹವರೂ ಓದಿ ಬಿಡಬಲ್ಲ ಬರಹಗಳು, ಧಾರ್ಮಿಕ ಅರಿವಿನ ಪಾಂಡಿತ್ಯ ಸಂಘಟನಾ ಅನುಭವ, ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಮಸೀದಿಯಲ್ಲಿ ಖತೀಬರಾಗಿಯೂ ಒಂದೇ ಸಮಯದಲ್ಲಿ ನಿಲ್ಲಬಲ್ಲ ಅಸಾಮಾನ್ಯ ಸಾಮರ್ಥ್ಯ ಅದು ಕೆಎಂ ಉಸ್ತಾದರಿಗೆ ಮಾತ್ರವಿರುವ ವಿಶೇಷತೆ!!

ಪ್ರಮುಖ ವಿದ್ವಾಂಸರ ಮಗನಾಗಿ ಹುಟ್ಟಿ ಬೆಳೆದು, ಧಾರ್ಮಿಕ ಲೌಕಿಕ ಶಿಕ್ಷಣವನ್ನು ಕರಗತ ಮಾಡಿಕೊಂಡು, ಬರಹ ಭಾಷಣ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆಗಳನ್ನು ಮಾಡಿ ಐತಿಹಾಸಿಕ ಕರ್ನಾಟಕ ಯಾತ್ರೆಯ ವೇಳೆ ರಾಜ್ಯ ಎಸ್ಸೆಸ್ಸೆಫ್ಫಿನ ಪ್ರಧಾನ ಕಾರ್ಯದರ್ಶಿಯಾಗಿದ್ದು, ಕೊನೆಗೆ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ ಹಿಂದ್ ಸಫರ್ ಯಾತ್ರೆಯ ವೇಳೆ ರಾಷ್ಟ್ರೀಯ ಎಸ್ಸೆಸ್ಸೆಫ್ಫಿನ ಪ್ರಧಾನ ಕಾರ್ಯದರ್ಶಿಯಾಗಿ ದೇಶದ ಉದ್ದಗಲಕ್ಕೂ ಸಂಚರಿಸಿ ಇದೀಗ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿಗಳಾಗಿ ಹಾಗೂ ಎಸ್ಸೆಸ್ಸೆಫ್ ಮುಖವಾಣಿ ಇಶಾರ ಪಾಕ್ಷಿಕದ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ರಾಜ್ಯ ಹಜ್ ಮಂಡಳಿಯ ಸದಸ್ಯರಾಗಿಯೂ, ಅಲ್ ಅನ್ಸಾರ್ ವಾರಪತ್ರಿಕೆಯಲ್ಲೂ ಸಕ್ರೀಯರಾಗಿದ್ದು ಸುನ್ನೀ ಕರ್ನಾಟಕದ ಹೆಮ್ಮೆಯಾಗಿ ಬೆಳೆದು ನಿಂತಿದ್ದಾರೆ.

ಆದ್ದರಿಂದಲೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡು-ನುಡಿಗೆ ಸಲ್ಲಿಸಿದ ಸೇವೆಗಾಗಿ ಅರ್ಹವಾಗಿಯೇ ಸನ್ಮಾನಿಸಲ್ಪಡುತ್ತಿದ್ದಾರೆ!
ಇವರ ಪಕ್ವತೆ ತುಂಬಿದ ಭಾಷಣ, ಪ್ರಬುದ್ಧವಾದ ಬರಹ, ಹಾಸ್ಯ ತುಂಬಿದ ಮಾತುಗಳು ಇವೆಲ್ಲವೂ ಈ ನಾಡಿಗೆ ಇನ್ನಷ್ಟು ಅಗತ್ಯವಿದೆ. ಆದ್ದರಿಂದಲೇ ರಾಜ್ಯ ನೀಡುತ್ತಿರುವ ಈ ಗೌರವ ಅವರ ಅಸಾಮಾನ್ಯ ಸಾಮರ್ಥ್ಯವನ್ನು ಇನ್ನಷ್ಟು ಜನರಿಗೆ ತಲುಪಿಸಲು ಸಹಕಾರಿಯಾಗಬಹುದು.

ಜಗತ್ತಿಗೆ ಶಾಂತಿಯನ್ನು ಸಮಾಧಾನವನ್ನು ಸಹೋದರ್ಯತೆಯನ್ನೂ ಕಲಿಸಿಕೊಟ್ಟ ಇಸ್ಲಾಮಿನ ಬಗ್ಗೆ ತಪ್ಪು ತಿಳುವಳಿಕೆಗಳು, ಕೆಟ್ಟ ಗ್ರಹಿಕೆಗಳು ಧಾರಾಳವಾಗಿರುವ ಈ ಕಾಲದಲ್ಲಿ ಇಂತಹ ಪ್ರಬುದ್ಧರ ಮೂಲಕ ಜನಮನಸ್ಸುಗಳನ್ನು ತಿದ್ದುವ ಕೆಲಸಗಳು ನಡೆಯಬೇಕಿದೆ, ಪವಿತ್ರ ಧರ್ಮದ ಶಾಂತಿಯ ಸ್ಪರ್ಷಗಳು ಜನಮನಗಳಿಗೆ ತಲುಪಿಸುವ ಕಾರ್ಯಗಳು ಇಲ್ಲಿ ಆಗಬೇಕಿದೆ. ಚಾನಲ್ ಚರ್ಚೆಗಳಲ್ಲಿ ಸಾರ್ವಜನಿಕ ಮಾದ್ಯಮಗಳಲ್ಲಿ ಇಸ್ಲಾಮಿನ ನೈಜ ಸಂದೇಶಗಳನ್ನು ಹೇಳಿಕೊಡಲು ನಮ್ಮ ಶಾಫೀ ಸಅದಿ ಉಸ್ತಾದರಂಥಹಾ ಒಂದೆರಡು ವ್ಯಕ್ತಿಗಳನ್ನು ಬಿಟ್ಟರೆ ಬೇರೆ ಯಾರನ್ನೂ ಕೂಡ ನಾವು ಕಾಣುತ್ತಿಲ್ಲ. ಕೆಎಂ ಸರ್ ರಂಥಹಾ ಪ್ರಬುದ್ಧರು ದೃಶ್ಯ-ಶ್ರಾವ್ಯ ಮಾಧ್ಯಮಗಳ ಮೂಲಕ ಸತ್ಯಾಸತ್ಯತೆಗಳನ್ನು ಜನಮನಸ್ಸುಗಳಿಗೆ ತಲುಪಿಸುವಲ್ಲಿ ಮುಂಚೂಣಿಯಲ್ಲಿರಬೇಕಾಗಿದೆ. ಈ ನಿಟ್ಟಿನಲ್ಲಿ ಜನಪರ ಸಂಘಟನೆಗಳು, ಮಾಧ್ಯಮಗಳು ಇಂತಹವರನ್ನು ಕಂಡುಹಿಡಿದು ಪ್ರೋತ್ಸಾಹಿಸಿ ಉತ್ತಮ ಸಂದೇಶಗಳನ್ನು ತಲುಪಿಸುವಲ್ಲಿ ಮುತುವರ್ಜಿ ವಹಿಸಬೇಕಾಗಿದೆ. ಆ ಮೂಲಕ ನಾಡಿನ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಬೇಕಾಗಿದೆ ಎಂದಷ್ಟೇ ನಮ್ಮ ಹಾರೈಕೆ. ಇನ್ನಷ್ಟು ಪ್ರಶಸ್ತಿಗಳು ನಮ್ಮ ಕೆಎಂ ಉಸ್ತಾದ್ ಅವರ ಪಾಲಾಗಲಿ ಎಂಬುವುದು ನಮ್ಮ ಪ್ರಾರ್ಥನೆ, ಅಭಿನಂದನೆಗಳು.

error: Content is protected !!
%d bloggers like this: