janadhvani

Kannada Online News Paper

ಮಂಗಳೂರು: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಆದಿತ್ಯ ರಾವ್ ಎಂಬ ಭಯೋತ್ಪಾದಕನನ್ನು ಸ್ಥಳೀಯ ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

ಕಸ್ಟಡಿ ಅವಧಿ ಮುಗಿದ ಕಾರಣದಿಂದ ಆರೋಪಿಯನ್ನು ಶನಿವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಯನ್ನು ಮತ್ತೆ ವಶಕ್ಕೆ ನೀಡುವಂತೆ ಪೊಲೀಸರು ಅರ್ಜಿ ಸಲ್ಲಿಸಲಿಲ್ಲ. ಆದಿತ್ಯ ರಾವ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಕಿಶೋರ್‌ ಕುಮಾರ್‌ ಕೆ.ಎನ್‌. ಆದೇಶ ಹೊರಡಿಸಿದರು.

ಕಳೆದ 10 ದಿನಗಳ ಪೊಲೀಸ್ ಬಂಧನದಲ್ಲಿ ಆರೋಪಿ ಆದಿತ್ಯ ರಾವ್ ನನ್ನು ನಗರದ ವಿವಿಧ ಕಡೆಗಳಿಗೆ ಮತ್ತು ಉಡುಪಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿತ್ತು. ಹೊಟೇಲೊಂದರಲ್ಲಿ ಆದಿತ್ಯ ರಾವ್ ಕೆಲಸ ಮಾಡಿಕೊಂಡಿದ್ದಾಗ ಆತ ಉಳಿದುಕೊಂಡಿದ್ದ ಕೊಠಡಿಗೆ ಸಹ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಜನವರಿ 20ರಂದು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾಗಿತ್ತು. ಜ.22ರಂದು ಆದಿತ್ಯ ರಾವ್‌ ಬೆಂಗಳೂರಿನ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ಜ.23ರಂದು ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹತ್ತು ದಿನಗಳ ಕಾಲ ತನಿಖಾ ತಂಡದ ವಶಕ್ಕೆ ನೀಡಲಾಗಿತ್ತು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಎಂದು ಕೇಳಿದಾಕ್ಷಣ ತೀವ್ರ ಚುರುಕುಗೊಂಡಿದ್ದ ಕನ್ನಡ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಊಹಾಪೋಹಗಳನ್ನು ಬಿತ್ತರಿಸಿ, ಇಡೀ ಕರಾವಳಿಯನ್ನೇ ಉಗ್ರರ ತಾಣವೆಂಬಂತೆ ಬಣ್ಣಿಸಲಾಗಿತ್ತು. ರಿಮೋಟ್ ಕಂಟ್ರೋಲ್ ನಿಯಂತ್ರಿತ ಉಗ್ರ ಗ್ರನೇಡ್ ಸ್ಪೋಟಕವೆಂದೆಲ್ಲಾ ಬಿತ್ತರಿಸಿದ ಮಾಧ್ಯಮಗಳು, ಭಯೋತ್ಪಾದಕ ಮುಸ್ಲಿಮ್ ಅಲ್ಲವೆಂದರಿತ ಕೂಡಲೇ ಪ್ಲೇಟ್ ಬದಲಾಯಿಸಿತ್ತು. ಭಯೋತ್ಪಾದಕ ಆದಿತ್ಯ ರಾವ್ ನನ್ನು ಮಾನಸಿಕ ಅಶ್ವಸ್ಥನೆಂದು ಯಾವುದೇ ಮುಲಾಜಿಲ್ಲದೆ ರಾಜ್ಯ ಗೃಹ ಮಂತ್ರಿಯವರೂ ಹೇಳಿಕೆ ನೀಡಿದ್ದರು.

error: Content is protected !!
%d bloggers like this: