janadhvani

Kannada Online News Paper

ಬೆಂಗಳೂರು, ಜ.30: ಹಾಲಿನ ದರವನ್ನು ಹೆಚ್ಚಿಸುವ ಕುರಿತು ಸಲ್ಲಿಸಲಾಗಿದ್ದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಫೆ.1ರಿಂದ ಪ್ರತಿ ಲೀಟರ್​ಗೆ 2 ರೂ ಏರಿಕೆಯಾಗಲಿದೆ ಎಂದು ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ನಂದಿನಿ ಬ್ರ್ಯಾಂಡ್‌ನಲ್ಲಿ ಹಾಲು, ಮೊಸರು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ‘ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌)’ ಹಾಲಿನ ದರ ಏರಿಕೆ ಮಾಡುವಂತೆ ರಾಜ್ಯ ಸರಕಾರದ ಮುಂದೆ ಪ್ರಸ್ತಾವನೆ ಇಟ್ಟಿತ್ತು. ಇದಕ್ಕೆ ರಾಜ್ಯ ಸರಕಾರ ಒಪ್ಪಿಗೆ ನೀಡುವುದರೊಂದಿಗೆ ದರ ಏರಿಕೆ ಜಾರಿಗೆ ಬಂದಿದೆ.

ಕಳೆದ ಮೂರು ವರ್ಷಗಳಿಂದ ನಂದಿನಿ ಹಾಲಿನ ದರ ಹೆಚ್ಚಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರು ಹೆಚ್ಚಿನ ಲಾಭ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದರು. ಇದಕ್ಕೆ ದನಿಗೂಡಿಸಿದ್ದ 14 ಜಿಲ್ಲಾ ಹಾಲು ಒಕ್ಕೂಟಗಳು ಲೀಟರ್‌ಗೆ 2-3 ರೂ. ದರ ಏರಿಕೆ ಮಾಡುವಂತೆ ಕೆಲವು ದಿನಗಳ ಹಿಂದೆ ಕೆಎಂಎಫ್‌ಗೆ ಮನವಿ ಮಾಡಿದ್ದವು. ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡ ದರ ಏರಿಕೆಗೆ ಒಲವು ತೋರಿದ್ದರು.

ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಚಂದ್ರ ಜಾರಕಿಹೊಳಿ, “ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿತ್ತು. ಪ್ರತಿ ಲೀಟರ್ ಗೆ ನಾಲ್ಕು ರೂ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ, ಜನರ ಮೇಲೆ ಹೆಚ್ಚಿನ ಹೊರೆಯಾಗಬಾರದು ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ರೂ. ಹೆಚ್ಚಿಸಲಾಗಿದೆ,” ಎಂದು ವಿವರಿಸಿದ್ದಾರೆ.

error: Content is protected !!
%d bloggers like this: