janadhvani

Kannada Online News Paper

ಜಾಮಿಯಾ ವಿವಿ ಬಳಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಯೊಬ್ಬ ಬಂದೂಕಿನಿಂದ ಗುಂಡಿಕ್ಕಿದ ಘಟನೆ ನಡೆದಿದ್ದು, ಘಟನೆಯಲ್ಲಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ.

ಗುಂಡು ಹಾರಿಸಿದ ಬಳಿಕ ದೆಹಲಿಯ ಮೂರು ಮೆಟ್ರೋ ನಿಲ್ದಾಣಗಳ ಸೇವೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದೆ. ಜಾಮಾ ಮಸೀದಿ, ಐಟಿಒ ಮತ್ತು ಡೆಲ್ಲಿ ಗೇಟ್ ನಿಲ್ದಾಣಗಳಿಗೆ ಪ್ರವೇಶ ಮತ್ತು ನಿರ್ಗಮನವನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೋ ರೈಲ್ ಕಾರ್ಪೋರೆಷನ್ ಮೂಲಗಳು ತಿಳಿಸಿವೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದಾತ ಗೋಪಾಲ್ ಎಂದು ಗುರುತಿಸಲಾಗಿದೆ. ದಾಳಿಕೋರನನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಗುಂಡಿನ ದಾಳಿಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದು, ಜಾಮಿಯಾ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ದುಷ್ಕರ್ಮಿಯು, “ಆಝಾದಿಯನ್ನು ತೆಗೆದುಕೊಳ್ಳಿ… ಹಿಂದೂಸ್ತಾನ್ ಝಿಂದಾಬಾದ್… ದಿಲ್ಲಿ ಪೊಲೀಸ್ ಝಿಂದಾಬಾದ್” ಎಂದು ಹೇಳುತ್ತಾನೆ.

ಸಿಎಎ ವಿರೋಧಿಸಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಭದ್ರತೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳು ಸ್ಥಳದಲ್ಲಿ ಇದ್ದರು. ಈ ವೇಳೆ ಗೋಪಾಲ್ ಎಂಬ ವ್ಯಕ್ತಿ ಅಲ್ಲಿ ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.