janadhvani

Kannada Online News Paper

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಒಂದು ಸುಂದರ ರಾಷ್ಟ್ರವಾಗಿದೆ ನಮ್ಮ ಭಾರತ ಇಲ್ಲಿ ಹಲವಾರು ಜಾತಿ, ಧರ್ಮ ಪಂಗಡದ ಜನರು ವಾಸಿಸುತ್ತಿದ್ದಾರೆ.

ಇಂತಹ ಒಂದು ಸೌಹಾರ್ಧಯುತ ರಾಷ್ಟ್ರದಲ್ಲಾಗಿದೆ ನಾವು ನೀವು ಜೀವಿಸುತ್ತಿರುವುದು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ಪ್ರೇರಿತ ಶಕ್ತಿಗಳು ಹಾಗೂ ಈಗಿರುವ ಸರ್ಕಾರ ಭಾರತದ ಸೌಹಾರ್ಧಕ್ಕೆ ಧಕ್ಕೆ ತರುವ ಕಾರ್ಯಕ್ಕೆ ಮುಂದಾಗಿದೆ. ಅದರ ಒಂದು ಭಾಗವಾಗಿದೆ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ಚ ನೊಂದಾವಣಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ.

1947 ರಲ್ಲಿ ಬ್ರಿಟೀಷ್ ದಬ್ಬಾಳಿಕೆಯಿಂದ ಸ್ಚತಂತ್ರಗೊಂಡ ಭಾರತ, ತದನಂತರ ಹಲವಾರು ಘಟ್ಟಗಳಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಮುಂಚೂಣಿಯಲ್ಲಿತ್ತು. ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರದಿಂದ ಉದ್ಯಮ ಕ್ಷೇತ್ರಗಳು ಪ್ರಗತಿಯತ್ತಾ ಸಾಗುತ್ತಿತ್ತು. ಜನರಿಗೆ ಮೂಲಭೂತ ಸೌಕರ್ಯಗಳು ಬಹಳ ತ್ವರಿತ ರೀತಿಯಲ್ಲಿ ದೊರಕತೊಡಗಿತು ಹಾಗೂ ಜನಪರ ಏಳಿಗೆ ಕಾರ್ಯಗಳು ಸಕಾರಾತ್ಮಕ ರೀತಿಯಲ್ಲಿ ನಡೆಯುತ್ತಾ ಭಾರತ ದೇಶ ಬ್ರಿಟಿಷರೂ ಕೂಡ ಊಹಿಸದ ರೀತಿಯಲ್ಲಿ ಅಭಿವೃದ್ದಿಯ ಹಾದಿಯನ್ನು ಹಿಡಿದಿತ್ತು.

ಸ್ವಾತಂತ್ರ್ಯ ನಂತರ ಭಾರತವನ್ನು ಸರಿಸುಮಾರು 70ವರ್ಷಗಳ ಅವಧಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಆಡಳಿತವನ್ನು ನಡೆಸಿದೆ. ಇದರಲ್ಲಿ ಬಿಜೆಪಿ ಪಕ್ಷವೂ ಒಳಗೊಂಡಿತ್ತು. ಆದರೆ ಅಂದೆಂದೂ ಕಾಣದ, ಕೇಳರಿಯದ ವಿಚಿತ್ರ ಆಡಳಿವೊಂದು ಕಳೆದ 6-7 ಸಾಲಿನಿಂದ ನಡೆಯುತ್ತಿದೆ.

ಪ್ರಸ್ತುತವಾಗಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಸರ್ಕಾರ ಜನಸಾಮಾನ್ಯರ ಪಾಲಿಗೆ ಒಂದು ಸಮಸ್ಯೆಯ ಸರ್ಕಾರವಾಗಿ ಮಾರ್ಪಟ್ಟಿದೆ. ಅಚ್ಚೆದಿನ್ ಆನೆವಾಲೆಹೇ… ಎಂದು ಚುಣಾವಣೆಯ ಮುಂಚೆ ಬೊಬ್ಬಿಟ್ಟ ಮೋದಿ ಸರ್ಕಾರ, ಚುಣಾವಣೆ ನಡೆದು ಆಡಳಿತ ಹಿಡಿದ ನಂತರ ತನ್ನ ಬಣ್ಣ ಬದಲಿಸಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಹಿಂದಿನ ಸಮಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಿರುದ್ಯೋಗ ತಲೆದೋರುವಂತೆ ಮಾಡಿದೆ. ಅಂಕಿಅಂಶದ ಪ್ರಕಾರ 20 ರಿಂದ 24 ವಯೋಮಿತಿಯವರಲ್ಲಿ 60ಶೇಕಾಡಾವಾರು ಪದವಿದಾರರು ಇಂದು ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ.

ಭ್ರಷ್ಟಾಚಾರವಂತೂ ಕೇಳಲಾಸಾಧ್ಯ. ಇಲ್ಲಿ ನಾನು ಒಂದು ಪಕ್ಷವನ್ನು ಬೊಟ್ಟು ಮಾಡಿ ಹೇಳುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ಭ್ರಷ್ಟಾಚಾರ, ಜನಸಾಮಾನ್ಯರಿಗೆ ಸಮಸ್ಯೆಯ ಉಂಟಾಗಿತ್ತು. ಆದರೆ ಈಗಿನ ಸರ್ಕಾರ ನಡೆಸಿದಷ್ಟರ ಮಟ್ಟಿನ ಭ್ರಷ್ಟಾಚಾರ ಹಾಗೂ ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ಸಮಸ್ಯೆಗಳ ಪ್ರಮಾಣ ಮಾತ್ರ ಅತ್ಯಧಿಕ.

ತ್ರಿವಳಿ ತ್ವಲಾಕ್ ನಿಷೇಧ, ನೋಟ್ ಬ್ಯಾನ್, ರಫೆಲ್ ದಾಖಲೆಗಳ ನಾಶ,ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಇವಿಎಂ ಹಗರಣ, ಗೋಹತ್ಯೆಯ ನೆಪವಾಗಿರಿಸಿ ಅಮಾಯಕರ ಹತ್ಯೆ, ಹೀಗೆ ನಾನಾ ತರಹದ ಸಮಸ್ಯೆಗಳ ಮಹಾಪೂರವನ್ನು ಜನರ ಮೇಲೆ ಹೊರಿಸಿದೆ. ಈ ಎಲ್ಲಾ ಸಂದರ್ಭದಲ್ಲೂ ಕೆಲವು ಕಡೆ ಇದರ ವಿರುದ್ದ ಕೂಗೂ ಕೇಳಿಬಂದಿದ್ದರೂ, ಹೆಚ್ಚಿನ ಪ್ರಮಾಣದ ವಿರೋಧ ಜನರಿಂದ ವ್ಯಕ್ತವಾಗದ ಹಿನ್ನಲೆಯಲ್ಲಿ, ಇದನ್ನೇ ಬಂಡವಾಳವನ್ನಾಗಿಸಿ ನಮ್ಮ ಕೇಂದ್ರ ಸರ್ಕಾರ ಇನ್ನೊಂದು ಹೊಸ ಸಮಸ್ಯೆಯನ್ನು ಜನರ ಮೇಲೆ ಏರಲು ಹೊರಟಿದೆ. ಅದುವೇ ಪ್ರಸ್ತುತವಾಗಿ ಕೇಳಿಬರುತ್ತಿರುವ ರಾಷ್ಟ್ರೀಯ ಪೌರತ್ವ ನೊಂದಾವಣಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ.

ಅಂದ ಹಾಗೆ ಏನಿದು ರಾಷ್ಟ್ರೀಯ ಪೌರತ್ವ ನೊಂದಾವಣಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ. ಇದರ ನಿಜಾಂಶದ ಬಗ್ಗೆ ನಾವು ತಿಳಿದಿರಲೇಬೇಕು. ರಾಷ್ಟ್ರೀಯ ಪೌರತ್ವ ನೊಂದಾವಣಿ ಅಂದರೆ ಭಾರತೀಯರು ತಮ್ಮ ಭಾರತೀಯ ಪೌರತ್ವ ಸಾಬೀತುಪಡಿಸಬೇಕಾದರೆ, ತಮ್ಮ ಹಿಂದಿನ ತಲೆಮಾರಿನ , ಅಂದರೆ ಸರಿಸುಮಾರು 50ವರ್ಷಗಳ ಹಿಂದೆ 1970 ಸಾಲಿಗೆ ಸಂಬಂಧಪಟ್ಟ ದಾಖಲೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಒಂದು ವೇಳೆ ಈ ದಾಖಲೆ ಅನೂರ್ಜಿತಗೊಂಡಲ್ಲಿ ನಮ್ಮ ಭಾರತೀಯ ಪೌರತ್ವ ರದ್ದಾಗುತ್ತದೆ. ಇಷ್ಟರವರೆಗೆ ಭಾರತದಲ್ಲಿ ಜೀವಿಸಿ, ಪ್ರತಿಯೊಬ್ಬರ ಹಕ್ಕಾದ ಮತದಾನದಲ್ಲಿ ಪಾಲ್ಗೊಂಡು, ತಮ್ಮ ಜನಪ್ರತಿನಿಧಿಯನ್ನು ಚುಣಾಯಿಸಿದವರು ಈಗ ಭಾರತದ ಪ್ರಜೆಗಳಲ್ಲ.

ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ಅಂದರೆ, ಹೊರ ದೇಶದಲ್ಲಿರುವ (ಪಾಕಿಸ್ತಾನ, ಬಾಂಗ್ಲಾ ಅಫ್ಘಾನಿಸ್ತಾನ ಇತ್ಯಾದಿ) ಅಲ್ಪಸಂಖ್ಯಾತರು (ಹಿಂದು, ಬೌದ್ಧ, ಸಿಖ್‌‌ ಇತ್ಯಾದಿ) ತಮ್ಮ ದಾಖಲೆಯನ್ನು ಸರ್ಕಾರಕ್ಕೆ ಸಲ್ಲಿಸಿ ಭಾರತದ ಪೌರತ್ವ ಪಡೆದುಕೊಳ್ಳಬಹುದು.

ಭಾರತದಲ್ಲಿದ್ದವರಿಗೆ ಭಾರತೀಯ ಪೌರತ್ವ ಇಲ್ಲ, ಆದರೆ ಹೊರದೇಶದಲ್ಲಿದ್ದವರಿಗೆ ಭಾರತೀಯ ಪೌರತ್ವ.ಎಂತಹ ಒಂದು ಅಸಂಬದ್ಧ ತದ್ವಿರುದ್ದ ನಿಯಮ. ಈಗಾಗಲೇ ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ. ಆದರೆ ಅದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ಬದಲು ದೇಶವನ್ನು ಜಾತಿ ಆಧಾರದಲ್ಲಿ ವಿಭಜಿಸುವ ಕಾರ್ಯ ನಡೆಸುತ್ತಿದೆ.

ಸರ್ಕಾರ ಯಾವ ಉದ್ದೇಶವನ್ನಿಟ್ಟುಕೊಂಡು ಇದನ್ನೆಲ್ಲಾ ಜಾರಿಗೆ ತರುತ್ತಿದೆ ಎಂದು ಸ್ಪಷ್ಟವಾಗಿ ಸಾಮಾನ್ಯ ಒಬ್ಬ ಪ್ರಜೆಗೂ ಮನದಟ್ಟಾಗುತ್ತದೆ. ನಮ್ಮ ಸರ್ಕಾರ ಹಿಂದುತ್ವದ ಅಜೆಂಡಾವನ್ನು ಮುಂದಿಟ್ಟುಕೊಂಡು ಮುಗ್ಧ ಮನಸ್ಸಿನ ಹಿಂದೂಗಳನ್ನು ಮುಸ್ಲಿಮರ ವಿರುದ್ದ ಎತ್ತಿ ಕಟ್ಟುವ ಕಾರ್ಯ ನಡೆಸುತ್ತಿದೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ರೂಪುಗೊಂಡ ಒಂದು ಪ್ರಜಾಪ್ರಭುತ್ವ ರಾಷ್ಟ್ರ, ತಮ್ಮ ಪ್ರಜೆಗಳ ಪೌರತ್ವದ ಹಕ್ಕನ್ನು
ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿದೆ ಎಂದಾದರೆ, ಆ ದೇಶ ಅಭದ್ರ ಸ್ಥಿಯಲ್ಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಕೊನೆಯದಾಗಿ ಈ ದೇಶದ ಪ್ರಜ್ಞಾವಂತ ನಾಗರಿಕರಲ್ಲಿ ನನ್ನ ವಿನಂತಿಯೇನೆಂದರೆ, ನೋಟ್ ಬ್ಯಾನ್, ಇವಿಯಂ ಹಗರಣ, ರಫೆಲ್ ಹಗರಣ, ತ್ರಿವಳಿ ತ್ವಲಾಕ್, ಜಿ.ಎಸ್.ಟಿ ಜಾರಿ, ಬೆಲೆಯೇರಿಕೆ ಸಂದರ್ಭದಲ್ಲೆಲ್ಲಾ ತಮ್ಮನ್ನು ತಾವೇ ಮರೆಮಾಚಿಕೊಳ್ಳುತ್ತಿದ್ದ ಜನರು ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಈ ಸುಂದರ ದೇಶವನ್ನು ಸವರ್ಣೀಯ ಫ್ಯಾಸಿಸ್ಟ್ ಶಕ್ತಿಗಳ ಅಧಿಕಾರಶಾಹಿಯಿಂದ ಮುಕ್ತಗೊಳಿಸಲು ಹಾಗೂ ಗಾಂಧೀಜಿ ಕಂಡ ಸುಂದರ ಕನಸನ್ನು ನನಸಾಗಿಸಲು ಒಕ್ಕೊರಲಿನಿಂದ ಜಾತಿ ಮತ ಪಂಗಡದ ಬೇಧ ಭಾವವನ್ನು ಬದಿಗೊತ್ತಿ ನಿರಂತರ ಹೋರಾಟದಲ್ಲಿ ನಿರತರಾಗಿ.

ಹಸೈನಾರ್ ಕಾಟಿಪಳ್ಳ

error: Content is protected !!
%d bloggers like this: