ಮಂಗಳೂರು ಗೋಲಿಬಾರ್ ಪ್ರಕರಣ ಇನ್ನೂ ಹಸಿಹಸಿಯಾಗಿಯೇ ಇದೆ. ಜಿಲ್ಲೆಯ ಜನತೆ ಪೋಲಿಸ್ ಕಮಿಷನರ್ ರನ್ನೇ ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ. ಸಿಎಎ/ಎನ್ನಾರ್ಸಿ ವಿರುದ್ದದ ಪ್ರತಿಭಟನೆ ಜೋರಾಗಿಯೇ ಮುಂದುವರಿದಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ತೆರೆಮರೆಯಲು ವಿಚಿತ್ರ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ನಾಗರಿಕರಿಗೆ ಶಂಕೆ ಇದೆ.
ಮುಸ್ಲಿಮ್ ಸಮುದಾಯದೊಳಗೇ ಭಿನ್ನತೆ ಸೃಷ್ಟಿಸಿ ಆ ಕುರಿತ ಚರ್ಚೆಯನ್ನೇ ಮತ್ತೆ ಮುನ್ನಲೆಗೆ ತರುವ ಪ್ರಯತ್ನ ಒಂದೆಡೆ ನಡೆಯುತ್ತಿದೆ. ಇಡೀ ಜನಪರ ಹೋರಾಟವನ್ನೇ ಹಿಂದು-ಮುಸ್ಲಿಮ್ ಸಂಘರ್ಷ ಎಂಬಂತೆ ಬಿಂಬಿಸುವ ದುಷ್ಟ ಶಕ್ತಿಗಳು ಅವರದೇ ವಿಧಾನದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಮಧ್ಯೆ ಮಂಗಳೂರು ಬಾಂಬ್ ಸುದ್ದಿಯಾಗುತ್ತದೆ. ಗೋಲಿಬಾರ್ ಗೆ ಪ್ರತಿಕಾರ ಎಂದೂ, ಪೌರತ್ವಕ್ಕೆ ಪ್ರತಿರೋಧ ಎಂದೂ ವದಂತಿ ಹರಡುವ ಮೂಲಕ ಒಂದು ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವ ಯತ್ನ ಮಾಡಲಾಯ್ತು!.. ಬಾಂಬರ್ ನ ಹೆಸರು ಬಹಿರಂಗವಾಗುವ ಮೊದಲು ಅದೇ ದೃಷ್ಟಿಕೋನದಲ್ಲಿ ಹೆಚ್ಚಿನ ಸುದ್ದಿವಾಹಿನಿಗಳು ವರದಿ ಮಾಡಿದವು.
ಗೋಲಿಬಾರ್ ಮಾಡದೇ ಇರುತ್ತಿದ್ದರೆ ಮಂಗಳೂರು ಕಾಶ್ಮೀರ ಆಗುತ್ತಿತ್ತು ಎಂದು ಮುದಿ ಸಂಘಿಯೊಬ್ಬ ಹೇಳಿಕೆ ಕೊಡುತ್ತಲೇ ಇದ್ದಾನೆ. ಆ ಮಾತನ್ನು ಸಮರ್ಥನೆ ಮಾಡೋದಕ್ಕಾಗಿಯೇ ಬಾಂಬ್ ನ ನಾಟಕ ಆಡಲಾಯ್ತೇ? ಕಲ್ಲಡ್ಕ ಕೃಪಾಪೋಷಿತ ಸಂಘದ ಸ್ಕ್ರಿಪ್ಟ್ ನಂತೆ ನಾಟಕದ ಕ್ಲೈಮಾಕ್ಸ್ ನಡೆಯದೇ ಹೋಯಿತೇ?.
ಅಥವಾ ಬಾಂಬನ್ನೂ ಬಾಂಬರನ್ನೂ ಭಾರೀ ಬೇಗ ಪತ್ತೆ ಹಚ್ಚಿ ಪೋಲಿಸ್ ಕಮಿಷನರ್ ಸಾಧನೆ ಮಾಡಿದರೆಂದು ಹೊಗಳುವುದಕ್ಕಾಗಿಯೇ ಇದೆಲ್ಲಾ ನಡೆಯಿತೇ? ಬಾಂಬ್ ಬ್ಯಾಗಿಟ್ಟಲ್ಲಿನ ಸಿಸಿ ಕ್ಯಾಮರಾ ಸುಸ್ಥಿತಿಯಲ್ಲಿ ಇಲ್ಲ ಎಂದು ಸುದ್ದಿಯಾಗುವುದರೊಂದಿಗೆ ಇಡೀ ನಾಟಕ ಪ್ಲಾಫ್ ಆಗುವ ಲಕ್ಷಣ ಕಂಡು ಬಂದಿತ್ತು!
ಬಂದರ್ ಠಾಣೆಯ 360° ಯ ಸಿಸಿ ಕ್ಯಾಮರಾದ ಫೂಟೇಜ್ ಯಾಕೆ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಮಂಗಳೂರಿನ ನಾಗರಿಕರು ನಿರಂತರ ಪ್ರಶ್ನಿಸುತ್ತಿರುವಾಗಲೇ ಇನ್ನೊಂದು ಅತಿಪ್ರಮುಖ ಸಿಸಿ ಕ್ಯಾಮರ ಕೂಡ ಕೈ ಕೊಟ್ಟಿದೆ ಎಂದರೆ ಜನರ ಆಕ್ರೋಶಿತರಾಗುವುದನ್ನು ಹೆದರಿ ನಾಟಕವನ್ನು ಅರ್ಧದಲ್ಲಿಯೇ ಕೈ ಬಿಟ್ಟರೇ?
ಗೊಲೀಬಾರ್ ನಿಂದ ಮೃತರಾದ ಜಲೀಲ್ ಮತ್ತು ನೌಶೀನ್ ಎಂಬ ಅಮಾಯಕರನ್ನು ಉಗ್ರರು ಎಂಬಂತೆ ಸುದ್ದಿ ಮಾಡಿದ ಮಾಧ್ಯಮಗಳು ಈ ಬಾಂಬರ್ ನನ್ನು ಉಗ್ರ ಎನ್ನಲು ಹಿಂದು ಮುಂದೆ ಯಾಕೆ ನೋಡುತ್ತವೆ?.
ಬಾಂಬಿಟ್ಟದ್ದು ‘ಜಸ್ಟ್ ಭೀತಿಗಾಗಿ’ ಎಂದು ಸಿಲ್ಲಿಯಾಗಿಸುವ ಕ್ರಮ ಎಷ್ಟೊಂದು ಹಾಸ್ಯಾಸ್ಪದ? ‘ಭೀತಿ ಹುಟ್ಟಿಸುವುದು’ ಭಯೋತ್ಪಾದನೆ ಆಗುವುದಿಲ್ಲ ಹೇಗೆ? ಬಾಂಬರ್ ಮಾನಸಿಕ ಅಸ್ವಸ್ಥ ಎಂಬ ಸಮಜಾಯಿಷಿಕೆ ಬೇರೆ! ಒಂದು ವೇಳೆ ಮಾನಸಿಕ ಅಸ್ವಸ್ಥನಾದರೂ ವಿಮಾನ ನಿಲ್ದಾಣ ತನಕ ಎಲ್ಲ ಭದ್ರತೆಯ ಕೋಟೆಯನ್ನು ದಾಟಿ ತಲುಪಿದ್ದು ಹೇಗೆ? ವಿಮಾನ ನಿಲ್ದಾಣದ ಮೆಟಲ್ ಡಿಟೆಕ್ಟರ್ ಗೆ ಏನಾಗಿದೆ? ಹೀಗೆ
ಉತ್ತರಗಳಿಲ್ಲದೇ ಹಲವು ಪ್ರಶ್ನೆಗಳು ರಾಶಿಬಿದ್ದಿವೆ!!
ಬಾಂಬ್ ಸುದ್ದಿ ಬಂದಾಕ್ಷಣದಿಂದ ಆರೋಪಿ ಪತ್ತೆಯಾಗುವ ತನಕ
ಸೋಷಿಯಲ್ ಮೀಡಿಯಾದ ಬರಹಗಾರರು ಸಾಲು ಸಾಲಾಗಿ ಪ್ರಶ್ನೆಗಳನ್ನು ಕೇಳದೇ ಇರುತ್ತಿದ್ದರೆ; ಈ ನಾಟಕ ಹೀಗೆ ಕ್ಲೈಮಾಕ್ಸ್ ಆಗುತ್ತಿರಲಿಲ್ಲವೋ ಏನೋ!.
✍ಅಶ್ರಫ್ ಕಿನಾರ ಮಂಗಳೂರು