janadhvani

Kannada Online News Paper

ಪೌರತ್ವ ಕಾಯ್ದೆ ವಿರುದ್ಧ ಬೃಹತ್ ಜನಾಂದೋಲನ ಇಂದು(ಜ.15) ಅಡ್ಯಾರಿನಲ್ಲಿ

✍ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)

ಇಂದು ಮಂಗಳೂರು ಸ್ಥಬ್ದಗೊಳ್ಳಲಿದೆ. ಎಲ್ಲಾ ಹಾದಿಗಳು ಅಡ್ಯಾರಿನತ್ತ ಮುಖಮಾಡಿದೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಹಾಗೂ ಸಯ್ಯಿದ್ ಜಿಫ್ರೀ ಮುತ್ತು ಕೋಯ ತಂಙಳ್ ಸಹಿತವಿರುವ ಘಟಾನುಘಟಿಗಳು ಈಗಾಗಲೇ ಯಶಸ್ವಿಗಾಗಿ ಕರೆಕೊಟ್ಟಿದ್ದಾರೆ. ಮೂವತ್ತರಷ್ಟು ಸಂಘಟನೆಗಳು ಕಾರ್ಯಕ್ರಮಕ್ಕೆ ಅಧಿಕೃತವಾಗಿಯೇ ಬೆಂಬಲ ಸೂಚಿಸಿದೆ.

ಅವಿಭಜಿತ ದಕ ಜಿಲ್ಲೆಯ ಮೂರು ಪ್ರಮುಖ ಖಾಝಿಗಳ ನೇತೃತ್ವದಲ್ಲಿ ರಾಜ್ಯ ಕಂಡ ಪ್ರತಿಭಾವಂತ ಚಿಂತಕರ, ನಿವೃತ್ತ ನ್ಯಾಯಾಧೀಶರ, ಧಾರ್ಮಿಕ ಮುಖಂಡರ ಸಾನಿಧ್ಯದೊಂದಿಗೆ ಐತಿಹಾಸಿಕ ಸಮರಕ್ಕೆ ವೇದಿಕೆ ಸಜ್ಜುಗೊಂಡಿದೆ. ಬಹುಷಃ ಜಿಲ್ಲೆಯ ಇತಿಹಾಸದಲ್ಲೇ ಹಿಂದೆಂದೂ ಕಂಡೂಕೇಳರಿಯದ ಮಹಾ ಜನಸಾಗರಕ್ಕೆ ಮಂಗಳೂರಿನ ಅಡ್ಯಾರ್ ಕಣ್ಣೂರು ಇಂದು ಸಾಕ್ಷಿಯಾಗಲಿದೆ! ಒಟ್ಟಿನಲ್ಲಿ ಈ ದಿನದ ಮಂಗಳೂರು ಮತ್ತೊಮ್ಮೆ ರಾಷ್ಟ್ರದ ಗಮನ ಸೆಳೆಯಲಿದೆ!!

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂಥಹಾ ಒಂದು ಚಳವಳಿ ಈ ಏಳು ದಶಕಗಳಲ್ಲಿ ದೇಶ ಕಂಡಿಲ್ಲ. ಗೋಲಿಬಾರ್‌ಗಳು, ಎಫ್‌ಐಆರ್‌ಗಳು, ನಾಶನಷ್ಟಗಳು ಏನು ಸಂಭವಿಸಿದರೂ ಜನ ಬೀದಿಬಿಟ್ಟು ಕದಲುತ್ತಿಲ್ಲ! ಮಧ್ಯಾಹ್ನದ ಸುಡು ಬಿಸಿಲಿನಲ್ಲೂ ರಾತ್ರಿಯ ಮೈಕೊರೆಯುವ ಚಳಿಯಲ್ಲೂ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೆಹಲಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಕ್ರಾಂತಿ ಕಾಡ್ಗಿಚ್ಚಿನಂತೆ ರಾಷ್ಟ್ರದಗಲಕ್ಕೂ ಹರಡಿದೆ! ಸುಪ್ರೀಂ ಇದಕ್ಕೊಂದು ಸಮಾಧಾನಕರ ತೀರ್ಪು ನೀಡದೆ ಹೋದಲ್ಲಿ, ಆಡಳಿತ ವಿಭಾಗ ಹಠಹಿಡಿದು ಕುಳಿತು ಬಿಟ್ಟರೆ ಇದು ಎರಡನೇ ಸ್ವಾತಂತ್ರ ಸಮರ ಆಗುವುದರಲ್ಲಿ ಎರಡು ಮಾತಿಲ್ಲ!!

ಅಷ್ಟಕ್ಕೂ ಕಾರಣವಿದೆ. ಇಷ್ಟರವರೆಗೆ ಏನಿದ್ದರೂ ಧರ್ಮ ಜಾತಿ ಗಡಿ ಮಂದಿರ ಮಸೀದಿ ಎಂದೆಲ್ಲಾ ಗುಲ್ಲೆಬ್ಬಿಸುತ್ತಿದ್ದರು. ಒಂದಲ್ಪ ಪ್ರತಿರೋಧ ತೋರಿಸಿ ಇರ್ಲಿ ಬಿಡಿ ನಾವು ಶಾಂತಿ ನೆಮ್ಮದಿಯಿಂದ ಬದುಕೋಣ ಎನ್ನುತ್ತಾ ಸುಮ್ಮನಾಗುತ್ತಿದ್ದರು. ಆದರೆ ಈಗ ಹಾಗಲ್ಲ ನಾವು ಹೆಮ್ಮೆಯಿಂದ ಜಗತ್ತಿನ ಮುಂದೆ ಎದೆತಟ್ಟಿ ಹೇಳುತ್ತಿದ್ದ ಸಂವಿಧಾನವನ್ನೇ ತಿದ್ದಲು ಬಂದಿದ್ದಾರೆ. ಇದಂತೂ ಮಾಡಿ ಇಲ್ಲವೇ ಮಡಿ ಎಂದಾಗಿದೆ ಎಲ್ಲರ ನುಡಿ!

ಇದು ಕೇವಲ ಮುಸ್ಲಿಮರ ಸಮಸ್ಯೆ ಅಲ್ಲವೇ ಅಲ್ಲ. ದಲಿತರು, ಆದಿವಾಸಿಗಳು, ಬುಡಕಟ್ಟು ಜನಾಂಗದವರು, ಅಲೆಮಾರಿಗಳು ಹಾಗೂ ಇನ್ನಿತರ ಹಲವರು ಇದರಿಂದ ತುಂಬಾನೇ ತೊಂದರೆ ಅನುಭವಿಸಲಿದ್ದಾರೆ. ಆದ್ದರಿಂದಲೇ ರಾಷ್ಟ್ರದಾದ್ಯಂತ ಈ ಸಮರದ ಮುಂಚೂಣಿಯಲ್ಲಿ ಕೇವಲ ಪಂಕ್ಚರ್ ಹಾಕುವವರು ಮಾತ್ರವಲ್ಲ ಹಲವು ಪ್ರತಿಭಾವಂತ ನಾಯಕರಿದ್ದಾರೆ, ನಿವೃತ್ತ ನ್ಯಾಯಾಧೀಶರು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ವಿದ್ಯಾವಂತ ಯುವಕರು, ಯುವತಿಯರಿದ್ದಾರೆ!!

ಇನ್ನು ಮುಸ್ಲಿಮರನ್ನೇ ಟಾರ್ಗೇಟ್ ಮಾಡುವುದಾದರೂ ಕೂಡ ಅದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಭಾರತದ ಮುಸ್ಲಿಮರು ಶತಮಾನಗಳಿಂದ ಇಲ್ಲಿ ಶಾಂತಿ ಸೌಹಾರ್ದತೆಯೊಂದಿಗೆ ಜೀವಿಸಿದವರು. ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ದೇಹವನ್ನು ನೀಡಿ ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಪಣತೊಟ್ಟವರು, ದೇಶದ ಅಭಿಮಾನವಾಗಿ ತಲೆಯೆತ್ತಿ ನಿಂತಿರುವ ತಾಜ್ಮಹಲ್ ಕೆಂಪುಕೋಟೆ ಕುತುಬ್ ಮಿನಾರ್ ಹಾಗೂ ಕರ್ನಾಟಕದ ಅಚ್ಚರಿ ಗೋಲ್ ಗುಂಬಜ್ ಸಹಿತವಿರುವ ಹಲವಾರು ಐತಿಹಾಸಿಕ ಕೊಡುಗೆಗಳನ್ನು ರಾಷ್ಟ್ರಕ್ಕೆ ನೀಡಿದವರು.

ಅದರ ಮೂಲಕ ಕೋಟ್ಯಂತರ ರೂಪಾಯಿಗಳು ಇಂದಿಗೂ ದೇಶದ ಖಜಾನೆಗೆ ಲಭಿಸುತ್ತಿದೆ! ಈ ದೇಶದ ಕಾನೂನನ್ನು ಗೌರವಿಸುತ್ತಾ, ಸಂವಿಧಾನಕ್ಕೆ ಬೆಲೆ ಕೊಡುತ್ತಾ, ತೆರಿಗೆಯನ್ನು ಕಟ್ಟುತ್ತಾ, ರಾಷ್ಟ್ರದ ತ್ರಿವರ್ಣ ಪತಾಕೆಯನ್ನು ಎದೆಯಲ್ಲಿಟ್ಟು ನಡೆದವರು, ಸ್ವಾತಂತ್ರ್ಯದ ಬಳಿಕ ದೇಶ ವಿಭಜನೆಗೊಂಡಾಗ ಪಕ್ಕದಲ್ಲಿ ಒಂದು ಮುಸ್ಲಿಂ ರಾಷ್ಟ್ರರೂಪುಗೊಂಡರೂ ಕೂಡ ಧರ್ಮಾಧರಿತ ರಾಷ್ಟ್ರದೊಂದಿಗೆ ನಾವಿಲ್ಲ ಜಾತ್ಯತೀತವಾದ ಭಾರತದಲ್ಲಿ ನಾವು ಉಳಿಯುತ್ತೇವೆ ಎಂದು ಹೆಮ್ಮೆಯಿಂದ ಹೇಳುತ್ತಾ ಈ ದೇಶದಲ್ಲಿ ಸ್ವಾಭಿಮಾನದೊಂದಿಗೆ ಬದುಕಿದವರು ಇಲ್ಲಿನ ಮುಸ್ಲಿಮರು!!

ಅಂದು ಕಾಶ್ಮೀರದ ಕಣಿವೆಯಲ್ಲಿ ಕಾರ್ಗಿಲ್ ಕದನ ನಡೆಯುತ್ತಿದ್ದ ಸಂದರ್ಭದಲ್ಲಿ ಅದೊಂದು ಮುಸ್ಲಿಮ್ ರಾಷ್ಟ್ರವೆಂದು ನೋಡದೆ ಈ ದೇಶದ ಅವಿಭಾಜ್ಯ ಅಂಗವಾದ ಕಾರ್ಗಿಲ್ ಅನ್ನು ಅಕ್ರಮವಾಗಿ ಕಬಳಿಸುವುದು ತಪ್ಪು ಎಂದೂ, ಬೇಕಾಗಿ ಬಂದರೆ ಕಾಶ್ಮೀರದ ಕಾರ್ಗಿಲ್ ಗೆ ತರಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಲು ನಮ್ಮ ಯುವಕರು ತಯಾರಿದ್ದಾರೆ ಎಂದು ನಮ್ಮ ಉಲಮಾಗಳು ಘರ್ಜಿಸಿದ್ದರು!! ಆದರೂ ಕೆಲವರು ನಮ್ಮ ಬೆನ್ನು ಬಿಡುತ್ತಿಲ್ಲ. ಯಾಕೆಂದೇ ಅರ್ಥವಾಗುತ್ತಿಲ್ಲ!! ಆದ್ದರಿಂದಲೇ ನಾವು ಇಲ್ಲಿ ಹುಟ್ಟಿದ್ದೇವೆ. ಇಲ್ಲೇ ಬದುಕಿದ್ದೇವೆ ಇಲ್ಲೇ ಜೀವಬಿಡುತ್ತೇವೆ. ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ ಕಾರಣ..

ಮೇರಾ ಭಾರತ್ ಮಹಾನ್!
ಇದನ್ನು ಮತ್ತೊಮ್ಮೆ ಒತ್ತಿ ಹೇಳೋಣ ಬನ್ನಿ ಇಂದು ಅಡ್ಯಾರ್ ಕಣ್ಣೂರಿಗೆ…

✍ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)

error: Content is protected !!
%d bloggers like this: